ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ ಮಾಜಿ ಕೇಂದ್ರ ಸಚಿವ ಬಂಧನ
ಲಕ್ನೋ, ಸೆ. 20: ಉತ್ತರಪ್ರದೇಶದ ಷಹಜಹಾನ್ ಪುರ್ ನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಅವರನ್ನು ವಿಶೇಷ ತನಿಖಾ ದಳ ಶುಕ್ರವಾರದಂದು ಬಂಧಿಸಿದೆ.
ಕಳೆದ ವಾರ ಸ್ವಾಮಿ ಚಿನ್ಮಯಾನಂದ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಎಸ್‌ಎಸ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರುವ ಯುವತಿ, ಕಾಲೇಜಿನ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಅವರು ಅನೇಕ ಯುವತಿಯರ ಬದುಕು ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದರು.
ಆಗಸ್ಟ್ 23ರಂದು ವಿಡಿಯೋ ಹಂಚಿಕೊಂಡಿದ್ದ ಯುವತಿ, ತಮಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿದ್ದರು. ಆದರೆ, ಮರುದಿನದಿಂದಲೇ ಯುವತಿ ನಾಪತ್ತೆಯಾಗಿದ್ದರು. ಉತ್ತರಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆದರೆ, ಚಿನ್ಮಯಾನಂದ ಬೆಂಬಲಿಗರಿಂದ ಯುವತಿ ಕುಟುಂಬಕ್ಕೆ ಬೆದರಿಕೆ ಕರೆಗಳು ಬರತೊಡಗಿದ್ದವು...

ಹಾಸ್ಟೆಲ್‌ನಿಂದ ಫೇಸ್‌ಬುಕ್‌ಗೆ ವಿಡಿಯೋ ಅಪ್ಲೋಡ್
'ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಆರಂಭಿಸಿದ ಬಳಿಕ ನನ್ನ ಮೇಲೆ ಅನೇಕ ಬಾರಿ ಲೈಂಗಿಕವಾಗಿ ಹಲ್ಲೆ ನಡೆಸಲಾಗಿದೆ. ನನ್ನಂತೆ ಅನೇಕ ಹೆಣ್ಣುಮಕ್ಕಳ ಬದುಕನ್ನು ಚಿನ್ಮಯಾನಂದ ಸ್ವಾಮಿ ಹಾಳು ಮಾಡಿದ್ದಾರೆ. ಆದರೆ, ಅವರ ವಿರುದ್ಧ ನಿಲ್ಲುವ ಧೈರ್ಯವನ್ನು ನಾನು ಮಾತ್ರ ಮಾಡಿದ್ದೇನೆ' ಎಂದು ಆಕೆ ಅಳಲು ತೋಡಿಕೊಂಡು ಫೇಸ್‌ಬುಕ್‌ಗೆ ವಿಡಿಯೋ ಅಪ್ಲೋಡ್ ಮಾಡಿದ್ದರು.
'ನಂತರ ಯುವತಿಯ ತಾಯಿ ಹಾಸ್ಟೆಲ್‌ಗೆ ಹೋಗಿ ವಿಚಾರಿಸಿದಾಗ ಆಕೆ ನಾಪತ್ತೆಯಾಗಿರುವುದು ತಿಳಿದುಬಂತು. ಆಕೆಯ ಎರಡೂ ಫೋನ್‌ಗಳು ಸ್ವಿಚ್ ಆಫ್ ಆಗಿವೆ' ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಚಿನ್ಮಯಾನಂದ ಬೆಂಬಲಿಗರಿಂದ ಪ್ರತಿದೂರು
ಯುವತಿಯ ತಂದೆ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸುವಂತೆ ಉತ್ತರಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಓಪಿ ಸಿಂಗ್ ಆದೇಶ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಚಿನ್ಮಯಾನಂದ ಅವರ ಬೆಂಬಲಿಗರು ಪ್ರತಿದೂರು ಸಲ್ಲಿಸಿದ್ದಾರೆ. ತಮಗೆ ಐದು ಕೋಟಿ ರೂಪಾಯಿ ಕೊಡುವಂತೆ ಚಿನ್ಮಯಾನಂದ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿತ್ತು ಎಂದು ಅವರು ಆರೋಪಿಸಿದ್ದಾರೆ.

ವಾಜಪೇಯಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು
ಸ್ವಾಮಿ ಚಿನ್ಮಯಾನಂದ ಅವರು 1999-2004ರ ಅವಧಿಯಲ್ಲಿ ಅಟಲ್ ವಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ಹರಿದ್ವಾರದಲ್ಲಿರುವ ಚಿನ್ಮಯಾನಂದ ಆಶ್ರಮದಲ್ಲಿ ಹಲವು ವರ್ಷ ಕಳೆದಿದ್ದ ಯುವತಿಯೊಬ್ಬರು, ಚಿನ್ಮಯಾನಂದರ ವಿರುದ್ಧ 2011ರ ನವೆಂಬರ್‌ನಲ್ಲಿ ಅತ್ಯಾಚಾರ ದೂರು ನೀಡಿದ್ದರು. ಈ ಪ್ರಕರಣವನ್ನು ಆದಿತ್ಯನಾಥ ಸರ್ಕಾರ ಕಳೆದ ವರ್ಷ ಕೈಬಿಟ್ಟಿತ್ತು.

ಆಸ್ಪತ್ರೆಯಲ್ಲಿರುವ ಚಿನ್ಮಯಾನಂದ
ಸೆ. 23ರಂದು ಅಲಹಾಬಾದ್ ಹೈಕೋರ್ಟಿಗೆ ಈ ಕೇಸಿಗೆ ಸಂಬಂಧಪಟ್ಟ ವರದಿಯನ್ನು ವಿಶೇಷ ತನಿಖಾ ತಂಡ ಸಲ್ಲಿಸಲಿದೆ. ಈ ನಡುವೆ 72 ವರ್ಷ ವಯಸ್ಸಿನ ಚಿನ್ಮಯಾನಂದ ಅವರು ಸರ್ಕಾರಿ ಆಸ್ಪತ್ರೆಗೆ ಬುಧವಾರದಂದು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿನ್ಮಯಾನಂದಗೆ ಹೊಟ್ಟೆ ನೋವು, ಬಿಪಿಎಚ್ ಡಯಾಬಿಟಿಸ್ ಎಂದು ದಾಖಲಿಸಿಕೊಳ್ಳಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದು ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ವಕ್ತಾರರಾದ ಡಾ. ಪೂಜಾ ಪಾಂಡೆ ಪಿಟಿಐಗೆ ತಿಳಿಸಿದ್ದಾರೆ.












Click it and Unblock the Notifications