ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಟ್ ಫೈಟ್: ಬಿಜೆಪಿ ನನಗಲ್ಲ, 700 ರೈತ ಕುಟುಂಬಗಳಿಗೆ ಆಹ್ವಾನಿಸಲಿ ಎಂದ ಜಯಂತ್ ಚೌಧರಿ

|
Google Oneindia Kannada News

ಲಕ್ನೋ, ಜನವರಿ 27: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಾಟ್ ನಾಯಕರನ್ನು ಸೆಳೆಯಲು ಮುಂದಾಗಿರುವ ಭಾರತೀಯ ಜನತಾ ಪಕ್ಷಕ್ಕೆ ಜಾಟ್ ನಾಯಕ ಹಾಗೂ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್ ಚೌಧರಿ ತಿರುಗೇಟು ನೀಡಿದ್ದಾರೆ.

"ಬಿಜೆಪಿಯವರೇ ನಿಮ್ಮ ಆಹ್ವಾನ ನನಗೆ ಬೇಕಿಲ್ಲ, ನೀವು ಹಾಳು ಮಾಡಿರುವ 700 ರೈತ ಕುಟುಂಬಗಳಿಗೆ ಅದನ್ನು ನೀಡಿ!!" ಎಂದು ಟ್ವೀಟ್ ಮಾಡುವ ಮೂಲಕ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ರೈತ ಕುಟುಂಬಗಳ ಕುರಿತು ಜಯಂತ್ ಚೌಧರಿ ಉಲ್ಲೇಖಿಸಿದ್ದಾರೆ.

ಯುಪಿ ಚುನಾವಣೆ: ಜಾಟ್ ಪ್ರಭಾವಿಗಳೊಂದಿಗೆ ಅಮಿತ್ ಶಾ ಸಭೆಯುಪಿ ಚುನಾವಣೆ: ಜಾಟ್ ಪ್ರಭಾವಿಗಳೊಂದಿಗೆ ಅಮಿತ್ ಶಾ ಸಭೆ

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಶ್ಚಿಮ ಉತ್ತರ ಪ್ರದೇಶದ ಪ್ರಮುಖ ಜಾಟ್ ಸಮುದಾಯವನ್ನು ಕ್ರೂಢೀಕರಿಸಲು ಬಿಜೆಪಿ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಪುತ್ರ ಪರ್ವೇಶ್ ವರ್ಮಾ ನಿವಾಸಕ್ಕೆ ತೆರಳಿದ ಅಮಿತ್ ಶಾ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು. 200ಕ್ಕೂ ಹೆಚ್ಚು ಜಾಟ್ ನಾಯಕರು ಭಾಗವಹಿಸಿದ ಈ ಸಭೆಗಾಗಿ ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಜಯಂತ್ ಚೌಧರಿಯವರಿಗೂ ಆಹ್ವಾನ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಜಯಂತ್ ಚೌಧರಿ ಬೆನ್ನಿಗೆ ನಿಂತಿರುವ ಜಾಟ್ ಸಮುದಾಯ

ಜಯಂತ್ ಚೌಧರಿ ಬೆನ್ನಿಗೆ ನಿಂತಿರುವ ಜಾಟ್ ಸಮುದಾಯ

ಕಳೆದ ಮೂರು ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿದ ಜಾಟ್ ಸಮುದಾಯ ಪ್ರಸ್ತುತ ಅದೇ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ 15 ತಿಂಗಳಿಗೂ ಹೆಚ್ಚು ಕಾಲ ಸುದೀರ್ಘ ಪ್ರತಿಭಟನೆ ನಡೆಸಿದ ಜಾಟ್ ರೈತರು, ಬಿಜೆಪಿ ವಿರುದ್ಧ ಕಣ್ಣು ಕೆಂಪಾಗಿಸಿಕೊಂಡಿದ್ದಾರೆ. ಬಿಜೆಪಿ ಬದಲಿಗೆ 2022ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಜಯಂತ್ ಚೌಧರಿ ಬೆನ್ನಿಗೆ ನಿಂತಿದ್ದಾರೆ.

ಬಿಜೆಪಿಯಿಂದ ಜಯಂತ್ ಚೌಧರಿಗೆ ಆಹ್ವಾನ

ಬಿಜೆಪಿಯಿಂದ ಜಯಂತ್ ಚೌಧರಿಗೆ ಆಹ್ವಾನ

"ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕ ದಳದ ಮುಖ್ಯಸ್ಥ ಜಯಂತ್ ಚೌಧರಿ ತಪ್ಪು ದಾರಿಯನ್ನು ಆರಿಸಿಕೊಂಡಿದ್ದಾರೆ. ಜಾಟ್ ಸಮುದಾಯದ ನಾಯಕರು ಅವರೊಂದಿಗೆ ಮಾತನಾಡಬೇಕು, ಬಿಜೆಪಿಯ ಬಾಗಿಲು ಅವರಿಗಾಗಿ ಸದಾ ತೆರೆದಿರುತ್ತದೆ," ಎಂದು ಬಿಜೆಪಿಯ ಜಾಟ್ ನಾಯಕ ಪರ್ವೇಶ್ ವರ್ಮಾ ಆಹ್ವಾನ ನೀಡಿದ್ದಾರೆ. ಆರ್‌ಎಲ್‌ಡಿ ಜೊತೆಗೆ ಹೆಚ್ಚುತ್ತಿರುವ ತೊಂದರೆಯ ಲಾಭ ಪಡೆದುಕೊಳ್ಳಲು ಬಿಜೆಪಿ ತಂತ್ರ ಹೆಣೆಯುತ್ತಿದ್ದು, ಮರುಹೊಂದಾಣಿಕೆ ನಿರೀಕ್ಷೆಯಲ್ಲಿ ಎದುರು ನೋಡುತ್ತಿದೆ.

ಎಸ್‌ಪಿ-ಆರ್‌ಎಲ್‌ಡಿ ಸೀಟು ಹಂಚಿಕೆ ಅಸಮಾಧಾನ

ಎಸ್‌ಪಿ-ಆರ್‌ಎಲ್‌ಡಿ ಸೀಟು ಹಂಚಿಕೆ ಅಸಮಾಧಾನ

ಪಶ್ಚಿಮ ಉತ್ತರ ಪ್ರದೇಶದ ಕೆಲವು ವಿಧಾನಸಭಾ ಕ್ಷೇತ್ರಗಳ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳ ಮೈತ್ರಿಕೂಟದಲ್ಲಿ ಅಸಮಾಧಾನ ಸೃಷ್ಟಿಯಾಗಿದೆ. ಉತ್ತರ ಪ್ರದೇಶದ ಮೀರತ್‌ನ ಸರ್ಧಾನ್ ಮತ್ತು ಹಸ್ತಿನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಸಮಾಜವಾದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಕ್ಕೆ ಆರ್‌ಎಲ್‌ಡಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸಿದ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರೂ ಜಾಟ್‌ಗಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ಬೆಳೆಯುತ್ತಿದೆ. ಇದರ ಜೊತೆಗೆ ಮೀರತ್ ಜಿಲ್ಲೆಯಲ್ಲಿರುವ ಭಾಗಪತ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಿವಾಲ್ಖಾಸ್ ವಿಧಾನಸಭೆ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮುಸ್ಲಿಂ ಅಭ್ಯರ್ಥಿ ಗುಲಾಂ ಮೊಹಮ್ಮದ್ ರನ್ನು ಕಣಕ್ಕಿಳಿಸಿರುವುದು ಕ್ಷೇತ್ರದ ಜಾಟ್ ಸಮುದಾಯದ ನಾಯಕರನ್ನು ಕೆರಳಿಸಿದೆ.

ಸಿವಾಲ್ಖಾಸ್ ಕ್ಷೇತ್ರದಲ್ಲಿ ಹೇಗಿದೆ ರಾಜಕೀಯ ಏರಿಳಿತ?

ಸಿವಾಲ್ಖಾಸ್ ಕ್ಷೇತ್ರದಲ್ಲಿ ಹೇಗಿದೆ ರಾಜಕೀಯ ಏರಿಳಿತ?

ಕಳೆದ 2017ರ ವಿವಾಲ್ಥಾಸ್ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಅಂದಿನ ಹಾಲಿ ಶಾಸಕ ಗುಲಾಂ ಮೊಹಮ್ಮದ್ ವಿರುದ್ಧ ಬಿಜೆಪಿ ಅಭ್ಯರ್ಥಿ ಜೀತೇಂದ್ರ ಪಾಲ್ ಸಿಂಗ್ ಗೆಲುವು ಸಾಧಿಸಿದರು. 13,990 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಅಂದು ಆರ್‌ಎಲ್‌ಡಿ ಅಭ್ಯರ್ಥಿ ರಣವೀರ್ ರಾಣಾ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರು, 2002ರಲ್ಲಿ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ರಣವೀರ್ ರಾಣಾ, 2007ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಎದುರು ಸೋಲು ಕಂಡಿದ್ದರು.

ಪ್ರಸ್ತುತ ಇದೇ ಕ್ಷೇತ್ರದಲ್ಲಿ RLD ಪ್ರಮುಖ ಸ್ಪರ್ಧಾಕಾಂಕ್ಷಿ ಆಗಿರುವ ಸುನಿಲ್ ರೋಹ್ತಾ ಪಶ್ಚಿಮ ಉತ್ತರ ಪ್ರದೇಶದ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈ ಜಾಟ್ ಬೆಲ್ಟ್‌ನಲ್ಲಿರುವ ಮುಸ್ಲಿಮರು ಸಹ ಸಮಾಜವಾದಿ ಅಭ್ಯರ್ಥಿ ಗುಲಾಂ ಮೊಹಮ್ಮದ್ ವಿರುದ್ಧವಾಗಿದ್ದಾರೆ. ಈ ಕ್ಷೇತ್ರದಲ್ಲಿ ಶೇ.25ಕ್ಕೂ ಹೆಚ್ಚು ಮತದಾರರು ಮುಸ್ಲಿಮರಾಗಿದ್ದು, ಇದೀಗ ಮೈತ್ರಿಯೊಳಗಿನ ಕಿತ್ತಾಟ ಬಿಜೆಪಿಗೆ ಲಾಭವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ಮೊದಲ ಹಂತದ ಚುನಾವಣೆಗೆ ಸೀಟು ಹಂಚಿಕೆ ಹೀಗಿದೆ

ಮೊದಲ ಹಂತದ ಚುನಾವಣೆಗೆ ಸೀಟು ಹಂಚಿಕೆ ಹೀಗಿದೆ

ಪಶ್ಚಿಮ ಉತ್ತರ ಪ್ರದೇಶದಲ್ಲಿ 29 ಮೈತ್ರಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 19 ಸ್ಥಾನಗಳು ಆರ್‌ಎಲ್‌ಡಿ ಮತ್ತು 10 ಸ್ಥಾನಗಳನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿಗಳಿಗೆ ನೀಡಲಾಗಿದೆ. ತದನಂತರ ಬಿಡುಗಡೆ ಆಗಿರುವ ಎರಡನೇ ಪಟ್ಟಿಯಲ್ಲಿ ಏಳು ಸ್ಥಾನಗಳು ಆರ್‌ಎಲ್‌ಡಿ ಪಾಲಾಗಿದ್ದು, ಒಟ್ಟು 26 ಸ್ಥಾನಗಳಲ್ಲಿ ಸ್ಪರ್ಧಿಸಲಾಗುತ್ತಿದೆ. ಈ ಪೈಕಿ ಬಹುತೇಕ ಸ್ಥಾನಗಳು ಜಾಟ್ ಮತ್ತು ಮುಸ್ಲಿಮರ ಪಾಲಾಗಿದೆ. ಫೆಬ್ರವರಿ 10ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಈ ಪ್ರದೇಶದಲ್ಲಿ 10 ಮುಸ್ಲಿಂ ಮತ್ತು 7 ಜಾಟ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಾಟ್ ಸಮುದಾಯದ ಮತಗಳು ಸದಾ ಬಿಜೆಪಿಗೆ

ಜಾಟ್ ಸಮುದಾಯದ ಮತಗಳು ಸದಾ ಬಿಜೆಪಿಗೆ

ಉತ್ತರ ಪ್ರದೇಶದಲ್ಲಿ ಎಸ್‌ಪಿ-ಆರ್‌ಎಲ್‌ಡಿ ಮೈತ್ರಿ ಹೊರತಾಗಿಯೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಮತಗಳು ಯಾವಾಗಲೂ ಭಾರತೀಯ ಜನತಾ ಪಕ್ಷಕ್ಕೆ ಸಿಗುತ್ತವೆ. " ಈ ಹಿಂದಿನ ಚುನಾವಣೆಗಳನ್ನು ನೋಡಿದಾಗ ಜಾಟ್‌ಗಳು ಯಾವಾಗಲೂ ಬಿಜೆಪಿಗೆ ಮತ ಹಾಕುತ್ತಾರೆ. ಜಾಟ್‌ಗಳು ಯಾವಾಗಲೂ ಬಿಜೆಪಿಗೆ ಮತ ಹಾಕಿದ್ದಾರೆ. 2014, 2017 ಮತ್ತು 2019 ರಲ್ಲಿ ಬಿಜೆಪಿಗೆ ಮತ ನೀಡಿದ್ದಾರೆ. "ಈ ಬಾರಿಯೂ ಜಾಟ್‌ಗಳು ಬಿಜೆಪಿಗೆ ಮತ ಹಾಕುತ್ತಾರೆ ಎಂದು ನಾನು ಭಾವಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗುವುದನ್ನು ಯಾರೂ ಬಯಸುವುದಿಲ್ಲ" ಎಂದು ಪರ್ವೇಶ್ ವರ್ಮಾ ಹೇಳಿದ್ದಾರೆ.

Recommended Video

Shikhar Dhawan ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದು ಯಾರು? | Oneindia Kannada

English summary
Ask 700 Farmers Families: Uttar Pradesh Jat Leader Jayant Chaudhary Rejected BJP's "Invite".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X