71 ಸಾವಿರ ಧ್ವನಿವರ್ಧಕಗಳನ್ನು ತೆಗೆದು ಹಾಕಿದ ಯೋಗಿ ಸರ್ಕಾರ
ಲಕ್ನೋ, ಮೇ 29: ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳು ವಿವಿಧ ಧಾರ್ಮಿಕ ಸ್ಥಳಗಳಿಂದ ಒಟ್ಟು 71,114 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರವು ಕಳೆದ ತಿಂಗಳು ರಾಜ್ಯಾದ್ಯಂತ ಕನಿಷ್ಠ 1.29 ಲಕ್ಷ ಧ್ವನಿವರ್ಧಕಗಳನ್ನು ತೆಗೆದುಹಾಕಿದೆ ಅಥವಾ ಅವುಗಳ ಡೆಸಿಮಲ್ ಮಟ್ಟವನ್ನು ಕಡಿಮೆ ಮಾಡಿದೆ.
ಈ ಪೈಕಿ ಮಂದಿರ, ಮಸೀದಿ ಸೇರಿದಂತೆ ವಿವಿಧ ಪೂಜಾ ಸ್ಥಳಗಳಿಂದ ಒಟ್ಟು 71,114 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ. ಅಲ್ಲದೇ ನಿಗದಿತ ಡೆಸಿಬಲ್ ಮಟ್ಟಗಳಿಗೆ ಅನುಗುಣವಾಗಿ ಉಳಿದ ಧ್ವನಿವರ್ಧಕಗಳ ಪರಿಮಾಣವನ್ನು ಕಡಿಮೆ ಮಾಡಲಾಗಿದೆ.
ಶಾಲೆಗಳಿಗೆ ಧ್ವನಿವರ್ಧಕಗಳ ಹಸ್ತಾಂತರ; ತೆಗೆದುಹಾಕಲಾದ ಧ್ವನಿವರ್ಧಕಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಶಾಲೆಗಳಿಗೆ ಹಸ್ತಾಂತರಿಸಲಾಗಿದೆ. ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನಾ ಸಭೆಯ ಬಳಕೆಗಾಗಿ 4,371 ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ನೀಡಲಾಗಿದೆ. ಸಾರ್ವಜನಿಕ ಸಂಸ್ಥೆಗಳಿಗೆ 940 ಧ್ವನಿವರ್ಧಕಗಳನ್ನು ಹಸ್ತಾಂತರಿಸಲಾಗಿದೆ ಎಂದು ಉತ್ತರ ಪ್ರದೇಶದ ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಆಧರಿಸಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನಗಳ ಅನುಸಾರ ಉತ್ತರ ಪ್ರದೇಶದ ಗೃಹ ಇಲಾಖೆಯು ಏಪ್ರಿಲ್ 23ರಂದು ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಆದೇಶ ಹೊರಡಿಸಿತ್ತು. ಅಧಿಕಾರಿಗಳು ಆದೇಶವನ್ನು ಚಾಚೂ ತಪ್ಪದೇ ಅನುಸರಿಸಲು ಮುಂದಾದರು.
ಶಾಂತಿಯುತವಾಗಿ ನಡೆದ ಪ್ರಕ್ರಿಯೆ: "ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವ ಇಡೀ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಧ್ವನಿವರ್ಧಕಗಳ ಮೂಲಕ ಹೊರಡುವ ಶಬ್ದ ಮಾಲಿನ್ಯದ ಬಗ್ಗೆ ಧಾರ್ಮಿಕ ಮುಖಂಡರಲ್ಲಿ ಅರಿವು ಮೂಡಿಸಲಾಯಿತು. ಧ್ವನಿವರ್ಧಕಗಳನ್ನು ತೆಗೆದುಹಾಕುವಲ್ಲಿ ತಮ್ಮ ಸಹಕಾರವನ್ನು ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಧಾರ್ಮಿಕ ಮುಖಂಡರು ನೀಡಿದ್ದಾರೆ,'' ಎಂದು ಉತ್ತರ ಪ್ರದೇಶ ಗೃಹ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಪ್ರಶಾಂತ್ ಕುಮಾರ್ ಹೇಳಿದರು.
ಧಾರ್ಮಿಕ ಸ್ಥಳಗಳ ಸುತ್ತಮುತ್ತಲಿನಲ್ಲಿ ವಾಸಿಸುವ ಜನರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳ ಶಬ್ದವನ್ನು ನಿರ್ಬಂಧಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಧಾರ್ಮಿಕ ಸ್ಥಳಗಳಲ್ಲಿ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಪೊಲೀಸ್ ಇಲಾಖೆಗೆ ಸೂಚಿಸಿ ಉತ್ತರ ಪ್ರದೇಶ ಸರಕಾರದಿಂದ ಆದೇಶ ಹೊರಡಿಸಲಾಗಿತ್ತು.

ಅನುಮತಿಯಿಲ್ಲದೇ ಮೆರವಣಿಗೆಗೆ ಅವಕಾಶವಿಲ್ಲ; "ಅನುಮತಿಯಿಲ್ಲದೆ ಯಾವುದೇ ಧಾರ್ಮಿಕ ಮೆರವಣಿಗೆ ನಡೆಸಬಾರದು ಮತ್ತು ಧ್ವನಿವರ್ಧಕಗಳ ಬಳಕೆಯಿಂದ ಇತರರಿಗೆ ಅನಾನುಕೂಲವಾಗಬಾರದು,'' ಎಂದು ಇತ್ತೀಚಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ್ದರು.
"ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ಧಾರ್ಮಿಕ ಸಿದ್ಧಾಂತದ ಪ್ರಕಾರ ಪೂಜಾ ವಿಧಾನವನ್ನು ಅನುಸರಿಸಲು ಸ್ವಾತಂತ್ರ್ಯವಿದೆ. ಮೈಕ್ರೊಫೋನ್ ಗಳನ್ನು ಬಳಸಬಹುದಾದರೂ ಯಾವುದೇ ಆವರಣದಿಂದ ಧ್ವನಿ ಹೊರಬರದಂತೆ ನೋಡಿಕೊಳ್ಳಿ. ಇತರರು ಯಾವುದೇ ಸಮಸ್ಯೆ ಎದುರಿಸಬಾರದು. ಹೊಸ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ನೀಡಬಾರದು,'' ಎಂದು ಅಧಿಕಾರಿಗಳಿಗೆ ಯೋಗಿ ಆದಿತ್ಯನಾಥ್ ಸೂಚಿಸಿದ್ದರು.












Click it and Unblock the Notifications