KR Pete Elections: ಒಕ್ಕಲಿಗರ ಭದ್ರಕೋಟೆ ಕೆ.ಆರ್ ಪೇಟೆಯ ನಾಯಕ ಯಾರು?
ಮಂಡ್ಯ, ಮಾಚ್ 26: ಕೃಷ್ಣರಾಜ ಪೇಟೆಯು ಮಂಡ್ಯ ಜಿಲ್ಲೆಯ ಏಳು ತಾಲೂಕುಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಪಾಂಡವಪುರ ಉಪವಿಭಾಗಕ್ಕೆ ಸೇರಿರುವ ಈ ತಾಲೂಕು ವಿಸ್ತೀರ್ಣದ ದೃಷ್ಟಿಯಲ್ಲಿ ಜಿಲ್ಲೆಯಲ್ಲಿ ಎರಡನೇ ದೊಡ್ಡ ತಾಲೂಕಾಗಿದೆ. 1939ರಲ್ಲಿ ನೂತನ ಮಂಡ್ಯ ಜಿಲ್ಲೆ ಉದಯವಾಗುವವರೆಗೆ ಈ ತಾಲೂಕು ಮೈಸೂರು ಜಿಲ್ಲೆಗೆ ಸೇರಿತ್ತು. ಅದಕ್ಕೂ ಮುನ್ನ ಈ ಭಾಗ ಹಾಸನ ಜಿಲ್ಲೆಗೆ ಸೇರಿತ್ತು.
ಕೆ.ಆರ್.ಪೇಟೆಯನ್ನು ಹಿಂದೆ ಅತ್ತಿಗುಪ್ಪೆ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. 1891ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವರ್ಧಂತಿಯ ನೆನಪಿಗಾಗಿ ಈ ಅತ್ತಿಗುಪ್ಪೆ ಕ್ಷೇತ್ರಕ್ಕೆ ಕೃಷ್ಣರಾಜಪೇಟೆ ಅಂದರೆ ಕೆ.ಆರ್.ಪೇಟೆ ಎಂದು ನಾಮಕರಣ ಮಾಡಲಾಗುತ್ತದೆ.

ಈ ಕ್ಷೇತ್ರದಲ್ಲಿ ಕೈಲಾಸೇಶ್ವರ ದೇವಾಲಯ,ಮಲ್ಲೇಶ್ವರ, ಚನ್ನಬಸವೇಶ್ವರ, ಲಕ್ಷ್ಮೀನಾರಾಯಣ, ಮುತ್ತುರಾಯ ಸೇರಿದಂತೆ ಹಲವು ದೇವಾಲಯಗಳಿದ್ದು, ಹೇಮಗಿರಿ ಪಕ್ಷಿಧಾಮ, ಹೊಸಹೊಳಲು, ಕಿಕ್ಕೇರಿ, ಗೋವಿಂದನಹಳ್ಳಿಗಳು ಹೊಯ್ಸಳರ ಕಾಲದ ಸುಂದರ ದೇವಾಲಯಗಳಿಗೆ ಸಾಕ್ಷಿಯಾಗಿವೆ. ಬಸ್ತಿಹೊಸಕೋಟೆಯ 18 ಅಡಿ ಎತ್ತರದ ಬಾಹುಬಲಿ, ಕಿಕ್ಕೇರಿಯ ಬ್ರಹ್ಮೇಶ್ವರ, ಅಘಾಲಯದ ಮಲ್ಲೇಶ್ವರ ದೇವಾಲಯಗಳು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳಾಗಿವೆ.
ಕಬ್ಬು, ಭತ್ತ, ರಾಗಿ, ರೇಷ್ಮೆ, ತೆಂಗು, ಅಡಿಕೆ ಈ ಭಾಗದ ಕೃಷಿಕರ ಪ್ರಮುಖ ಬೆಳೆಗಳಾಗಿದ್ದು, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಈ ಭಾಗದ ರೈತರ ಜೀವನಾಡಿಯಾಗಿವೆ. ಕೆ.ಆರ್. ಪೇಟೆ ತಾಲೂಕಿನ ಮಾಕವಳ್ಳಿಯ ಖಾಸಗಿ ಸಕ್ಕರೆ ಕಾರ್ಖಾನೆ ಹಾಗೂ ಹೈನುಗಾರಿಕೆ ಈ ಭಾಗದ ರೈತರ ಜೀವನಧಾರವಾಗಿದೆ.
ಮೊದಲು ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯು ಪಾಂಡವಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು. ಆದರೆ, 2008ರ ಕ್ಷೇತ್ರ ಮರು ವಿಂಗಡಣೆಯಲ್ಲಿ ಶೀಳನಕೆರೆ ಹೋಬಳಿ ಕೆ.ಆರ್.ಪೇಟೆ ಕ್ಷೇತ್ರದ ತೆಕ್ಕೆಗೆ ವಾಪಸಾಯಿತು. ಹೀಗಾಗಿ ಸದ್ಯಕ್ಕೆ ಕೆ.ಆರ್.ಪೇಟೆ ಕಸಬಾ, ಅಕ್ಕಿಹೆಬ್ಬಾಳು, ಶೀಳನೆರೆ, ಕಿಕ್ಕೇರಿ, ಸಂತೇಬಾಚಹಳ್ಳಿ, ಬೂಕನಕೆರೆ ಹೋಬಳಿಗಳು ಕ್ಷೇತ್ರ ವ್ಯಾಪ್ತಿಯಲ್ಲಿವೆ. ಈ ಕ್ಷೇತ್ರದ ರಾಜಕೀಯ ವಿಶ್ಲೇಷಣೆ ಇಲ್ಲಿದೆ.

ಕೆ.ಆರ್ ಪೇಟೆ ಕ್ಷೇತ್ರದ ರಾಜಕೀಯ ಹಿನ್ನೆಲೆ
ಸ್ವಾತಂತ್ರ್ಯ ಹೋರಾಟಗಾರರಾದ ಶೀಳನಕೆರೆಯ ಸಾಹುಕಾರ್ ಕುಟುಂಬದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಂ.ಲಿಂಗಪ್ಪ ಈ ಕ್ಷೇತ್ರದ ಪ್ರಥಮ ಶಾಸಕರು.ಎಂ.ಕೆ. ಕೆಂಪೇಗೌಡರು, ಎನ್.ನಂಜೇಗೌಡರು, ಎಂ.ಕೆ.ಬೊಮ್ಮೇಗೌಡ, ಬಳ್ಳೇಕೆರೆಯ ಎಂ.ಪುಟ್ಟಸ್ವಾಮಿಗೌಡ, ಕೆ.ಆರ್.ಪೇಟೆ ಕೃಷ್ಣ ಹಾಗೂ ಬಿ.ಪ್ರಕಾಶ್, ಕೆ.ಬಿ. ಚಂದ್ರಶೇಖರ್ 2004ರವರೆಗೆ ಶಾಸಕರಾಗಿ ಆಯ್ಕೆಯಾಗಿರುತ್ತಾರೆ.
| ವರ್ಷ | ವಿಜೇತರು | ಮತಗಳು | ಸೋತವರು | ಮತಗಳು |
| 2008 | ಕೆ.ಬಿ. ಚಂದ್ರಶೇಖರ್ (ಕಾಂಗ್ರೆಸ್) | 48,556 | ಕೃಷ್ಣ (ಜೆಡಿಎಸ್) | 45,500 |
| 2013 | ನಾರಾಯಣಗೌಡ (ಜೆಡಿಎಸ್) | 56,784 | ಕೆ.ಬಿ. ಚಂದ್ರಶೇಖರ್ (ಕಾಂಗ್ರೆಸ್) | 47,541 |
| 2018 | ನಾರಾಯಣಗೌಡ (ಜೆಡಿಎಸ್) | 88,016 | ಕೆ.ಬಿ. ಚಂದ್ರಶೇಖರ್ (ಕಾಂಗ್ರೆಸ್) | 70,897 |
| 2019 | ನಾರಾಯಣ ಗೌಡ(ಬಿಜೆಪಿ)-By Election | 66,094 | ಬಿಎಲ್ ದೇವರಾಜ್(ಜೆಡಿಎಸ್) | 56,363 |
2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ಬಿ.ಚಂದ್ರಶೇಖರ್ ಜಯಗಳಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಸಿ.ನಾರಾಯಣಗೌಡ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. 2018ರ ಚುನಾವಣೆಯಲ್ಲೂ ನಾರಾಯಣಗೌಡರೇ ಎರಡನೇ ಬಾರಿಗೆ ಮರು ಆಯ್ಕೆಯಾಗುತ್ತಾರೆ. ಆದರೆ ಮಧ್ಯಂತರದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ. ಹೀಗಾಗಿ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಚಿಹ್ನೆಯೊಂದಿಗೆ ಸ್ಪರ್ಧಿಸಿ ಮತ್ತೆ ಗೆಲುವು ಸಾಧಿಸುತ್ತಾರೆ. ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ಕೆ.ಆರ್ ಪೇಟೆ ಕ್ಷೇತ್ರದ ಪ್ರಸ್ತುತ ರಾಜಕರಣ
ಸಚಿವರಾದ ನಾರಾಯಣ ಗೌಡರು ಕ್ಷೇತ್ರದಲ್ಲಿ ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಕ್ಷೇತ್ರದಲ್ಲಿ ಬಿಜೆಪಿ ಅಲೆ ಎಬ್ಬಿಸುವ ಕೆಲಸ ಮಾಡಿದ್ದಾರೆ. ಆದರೆ ಪುನಃ ಅವರು ಪಕ್ಷ ಬದಲಿಸುವ ಆಲೋಚನೆಯಲ್ಲಿದ್ದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎನ್ನುವ ಸುದ್ದಿ ಪ್ರಚಲಿತದಲ್ಲಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ.ಆರ್ ಪೇಟೆಯ ಅಭ್ಯರ್ಥಿಯನ್ನು ಸೂಚಿಸಿಲ್ಲ. ಇದು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಿದ್ದೆ ಗೆಡಿಸಿದೆ.
| ಕೆ.ಆರ್ ಪೇಟೆ ಕ್ಷೇತ್ರದ ಮತದಾರರ ವಿವರ |
| ಒಕ್ಕಲಿಗರು- 80,000 |
| ದಲಿತರು- 36,000 |
| ಕುರುಬರು- 35,000 |
| ಲಿಂಗಾಯಿತರು- 18,000 |
| ಮುಸ್ಲಿಂ- 8,000 |
| ಕ್ರಿಶ್ಚಿಯನ್- 3,000 |
| ಬ್ರಾಹ್ಮಣ- 2,000 |
ಇನ್ನು ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಟಿಕೆಟ್ಗಾಗಿ 6 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರೆಲ್ಲಾ ನಾರಾಯಣಗೌಡರ ಪಕ್ಷ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿ ಕೂಡ ನಾರಾಯಣಗೌಡರ ನಿರ್ಧಾರವನ್ನು ಕಾದು ನೋಡುತ್ತಿದೆ. ಒಂದು ವೇಳೆ ನಾರಾಯಣಗೌಡರು ಪಕ್ಷ ಬಿಟ್ಟರೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹುಡುಕಾಟ ನಡೆಸುತ್ತಿದೆ. ಇನ್ನು ಜೆಡಿಎಸ್ನಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು ಅವರನ್ನ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.











Click it and Unblock the Notifications