ಕಾಂಗ್ರೆಸ್ ಪರ ವಾಟ್ಸಪ್ ಮೆಸೇಜ್, ಕೊಪ್ಪಳ ಶಿಕ್ಷಕನಿಗೆ ಸಂಕಷ್ಟ!
ಕಾಂಗ್ರೆಸ್ ಪರವಾಗಿ ವಾಟ್ಸಪ್ ಸಂದೇಶ ಕಳಿಸಿದ್ದ ಸರ್ಕಾರಿ ಶಾಲೆಯ ಶಿಕ್ಷಕನ ವಿರುದ್ಧ ದೂರು ದಾಖಲಾಗಿದೆ. ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕೊಪ್ಪಳ, ಮಾರ್ಚ್ 02; 'ನೂರಕ್ಕೆ 200% ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಯಾರಿಂದಲೂ ತಡೆಯಲು ಸಾಧ್ಯವಿಲ್ಲ' ಎಂದು ಕಾಂಗ್ರೆಸ್ ಪಕ್ಷದ ನಾಯಕರು ಹೇಳಿದರೆ ಸುದ್ದಿ. ಆದರೆ ಇದೇ ರೀತಿ ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ಹಾಕಿದ್ದ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಈಗ ಸಂಕಷ್ಟ ಎದುರಾಗಿದೆ, ಶಿಕ್ಷಕನ ವಿರುದ್ಧ ದೂರು ನೀಡಲಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಬಾನಾಪುರ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಸೋಮಶೇಖರ ಹರ್ತಿ ವಿರುದ್ಧ ದೂರು ದಾಖಲಾಗಿದೆ. ಸುರೇಶ್ ಹೆಚ್. ಎಂಬುವವರು ದೂರು ನೀಡಿದ್ದು ಸಹ ಶಿಕ್ಷಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಪ ನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕೊಪ್ಪಳ ಇವರಿಗೆ ಮನವಿ ಮಾಡಲಾಗಿದೆ.

ದೂರಿನ ಪ್ರತಿ ಮತ್ತು ಟಿಪ್ಪಣಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕೊಪ್ಪಳ ಇವರು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಕೊಟ್ಟಿದ್ದ್ದಾರೆ. ಸೋಮಶೇಖರ ಹರ್ತಿ, ಸಹ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಬಾನಾಪುರ ಇವರ ವಿರುದ್ಧ ಆರೋಪಿಸಿರುವ ಅಂಶಗಳ ಕುರಿತು ನಿಯಮಾನುಸಾರ ಮುಂದಿನ ಸೂಕ್ತ ಕ್ರಮಗೊಳ್ಳಲು ಸೂಚನೆ ನೀಡಲಾಗಿದೆ.
ದೂರಿನಲ್ಲಿ ಏನಿದೆ?; ಶ್ರೀ ಸೋಮಶೇಖರ, ಹರ್ತಿ, ಸಹ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಬಾನಾಪುರ, ತಾಲೂಕು ಕುಕನೂರು ಇವರು 'ಕೊಪ್ಪಳ ರಜತ ವೈಭವ ಕನ್ನಡ ಪ್ರಭ' ಎಂಬ ವಾಟ್ಸ್ ಅಪ್ ಗ್ರೂಪ್‌ನಲ್ಲಿ "ನೂರಕ್ಕೆ 200% ಈ ಬಾರಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರೋದು ಯಾರಿಂದಲೂ ತಡೆಯಲು ಸಾಧ್ಯವಿಲ್ಲ" ಎಂಬ ಸಂದೇಶ ಮತ್ತು ವಿಡಿಯೋ ಕಳುಹಿಸಿದ್ದಾರೆ. ಇದರ ಪ್ರಯುಕ್ತ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ,ಮನವಿ ಮಾಡಲಾಗಿದೆ.

ಸುರೇಶ ಹೆಚ್. ದಿನಾಂಕ 21/02/2023ರಂದು ಈ ಕುರಿತು ದೂರು ನೀಡಿದ್ದಾರೆ. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ದೂರಿನ ಮೂಲಕ ಸೋಮಶೇಖರ ಹರ್ತಿಸಿ ಸಹ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಚಾನಾಪುರ, ತಾಲೂಕು ಕುಕನೂರು ಇವರು ಕೊಪ್ಪಳ ರಜತ ಪ್ರಭ ಕನ್ನಡ ಪ್ರಭ ಎಂಬ ವಾಟ್ಸ್ ಪ್ ಗ್ರೂಪ್‌ನಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸಂದೇಶ ಮತ್ತು ವಿಡಿಯೋವನ್ನು ಚುನಾವಣಾ ಸಮಯದಲ್ಲಿ ಕಳುಹಿಸಿದ್ದು, ನಿಯಮ ಬಾಹಿರವಾಗಿರುವುದರಿಂದ ವಾಟ್ಸ್ ಅಪ್ ಸಂದೇಶದ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ದೂರಿನಲ್ಲಿ ಕೋರಿರುತ್ತಾರೆ ಎಂದು ತಿಳಿಸಲಾಗಿದೆ.
ಸರ್ಕಾರಿ ನೌಕರರಿಗೆ ನಿಮಯಗಳು; ಚುನಾವಣೆ ಮತ್ತು ರಾಜಕೀಯದಲ್ಲಿ ಸರ್ಕಾರಿ ನೌಕರರು ಯಾವ ರೀತಿ ಪಾಲ್ಗೊಳ್ಳಬೇಕು? ಎಂದು ನಿಯಮಗಳಿವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕರ್ನಾಟಕದ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರಲ್ಲಿ ಸರ್ಕಾರಿ ನೌಕರನು ರಾಜಕೀಯದಲ್ಲಿ ಮತ್ತು ಚುನಾವಣೆಯಲ್ಲಿ ಭಾಗವಹಿಸುವುದು ಎಂಬ ವಿವರಣೆಯನ್ನು ನೀಡಲಾಗಿದೆ. ಅವುಗಳನ್ನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ಇದೆ.
ಯಾವುದೇ ಸರ್ಕಾರಿ ನೌಕರನು ಸಂಸತ್ತು, ರಾಜ್ಯ ವಿಧಾನಮಂಡಲದ ಯಾವುದೇ ಸದನ ಅಥವಾ ಸ್ಥಳೀಯ ಪ್ರಾಧಿಕಾರದ ಚುನಾವಣೆಗಳಲ್ಲಿ ಪ್ರಚಾರ ಮಾಡತಕ್ಕದ್ದಲ್ಲ ಅಥವಾ ಅನ್ಯಥಾ ಹಸ್ತಕ್ಷೇಪ ಮಾಡತಕ್ಕದ್ದಲ್ಲ ಅಥವಾ ಆ ಸಂಬಂಧದಲ್ಲಿ ತನ್ನ ಪ್ರಭಾವವನ್ನು ಬೀರತಕ್ಕದ್ದಲ್ಲ ಅಥವಾ ಅದರಲ್ಲಿ ಭಾಗವಹಿಸತಕ್ಕದ್ದಲ್ಲ ಎಂದು ತಿಳಿಸಲಾಗಿದೆ. ಸರ್ಕಾರಿ ನೌಕರನು ಯಾವುದೇ ಚುನಾವಣಾ ಚಿಹ್ನೆಯನ್ನು ತನ್ನ ಮೇಲೆ ತನ್ನ ವಾಹನದ ಅಥವಾ ನಿವಾಸದ ಮೇಲೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿದರೆ, ಅವನು, ಚುನಾವಣೆಗೆ ಸಂಬಂಧಿಸಿದಂತೆ ತನ್ನ ಪ್ರಭಾವವನ್ನು ಬೀರುತ್ತಿದ್ದಾನೆ ಎಂದು ಪರಿಗಣಿಸತಕ್ಕದ್ದು ಎಂದು ತಿಳಿಸಲಾಗಿದೆ.












Click it and Unblock the Notifications