ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುನ್ನವೇ ಕೊಪ್ಪಳದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಸಿದ್ದು, ಆಕಾಂಕ್ಷಿಗಳ ಅಸಮಾಧಾನ
ಕೊಪ್ಪಳ, ನವೆಂಬರ್ 20: ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲು ಘೋಷಣೆ ಮಾಡಿದ್ದರೆ, ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಮದುವೆ ಮನೆಯಲ್ಲಿ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮೂಲಕ ಡಿಕೆ ಶಿವಕುಮಾರ್‌ಗೆ ಟಾಂಗ್ ನೀಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ, ಮದುವೆ ಕಾರ್ಯಕ್ರಮದಲ್ಲೂ ರಾಜಕೀಯ ಭಾಷಣ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ವಿವಾಹ ಕಾರ್ಯಕ್ರವಾದರೂ ರಸ್ತೆಯ ಎರಡೂ ಬದಿಯಲ್ಲೂ ಕಾಂಗ್ರೆಸ್ ನಾಯಕರು ಹಾಗೂ ಸ್ವಾಮೀಜಿಗಳ ಕಟೌಟ್‌ಗಳು ರಾರಾಜಿಸುತ್ತಿದ್ದವು. ಸಿದ್ದರಾಮಯ್ಯ ಆಗಮಿಸುತ್ತಿರುವ ಕಾರಣ ಈ ರೀತಿಯಲ್ಲಿ ಅಲಂಕರಿಸಲಾಗಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಫೋಟೋ ಮಾತ್ರ ಎಲ್ಲೂ ಕಾಣಸಿದಿರುವುದು ಕಾಂಗ್ರೆಸ್‌ನಲ್ಲಿ ಬಣರಾಜಕೀಯ ಇನ್ನೂ ಜೀವಂತವಾಗಿರುವುದು ಸ್ಪಷ್ಟವಾಗಿದೆ.
ಕೊಪ್ಪಳ ತಾಲೂಕಿನ ವಣಬಳ್ಳಾರಿ ಗ್ರಾಮದಲ್ಲಿ ನಡೆದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸಹೋದರ ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಯಲ್ಲಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರು.

ನೆಪಕ್ಕೆ ಎನ್ನುವಂತೆ ವಧು-ವರರಿಗೆ ಶುಭ ಕೋರಿದ ಸಿದ್ದರಾಮಯ್ಯ, ಅದೇ ವೇದಿಕೆ ಮೇಲೆ ರಾಜಕೀಯ ಭಾಷಣ ಶುರು ಮಾಡಿದರು. ಒಂದೆಡೆ ಕೊಪ್ಪಳ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಆಕಾಂಕ್ಷಿಗಳು 2 ಲಕ್ಷ ರೂ ನೀಡಿ ಅರ್ಜಿ ಸಲ್ಲಿಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಕೊಪ್ಪಳ ಎಲ್ಲಾ ಅಭ್ಯರ್ಥಿಗಳ ಹೆಸರನ್ನೇಳಿ ಗೆಲ್ಲಿಸಬೇಕೆಂದು ಹೇಳುವ ಮೂಲಕ ಇತರೆ ಆಕಾಂಕ್ಷಿಗಳಿಗೆ ಬೇಸರವನ್ನುಂಟು ಮಾಡಿದೆ.
ವಿವಾಹ ವೇದಿಕೆಯಲ್ಲೇ ಸಿದ್ದರಾಮಯ್ಯ ಕರೆ
ಸಿದ್ದರಾಮಯ್ಯ ಮೊದಲು ಇಕ್ಬಾಲ್ ಅನ್ಸಾರಿ ಹೆಸರೇಳಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು. ಹಾಗೆಯೇ ವೇದಿಕೆಯಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಶಿವರಾಜ ತಂಗಡಗಿ, ಕುಷ್ಟಗಿ ಕ್ಷೇತ್ರದಲ್ಲಿ ಅಮರೇಗೌಡ ಭಯ್ಯಾಪೂರ, ಯಲಬುರ್ಗಾದ ಕ್ಷೇತ್ರದ ಬಸವರಾಜ ರಾಯರೆಡ್ಡಿ, ಕೊಪ್ಪಳ ಕ್ಷೇತ್ರ ರಾಘವೇಂದ್ರ ಹಿಟ್ನಾಳ ಹಾಗೂ ಗಂಗಾವತಿ ಕ್ಷೇತ್ರದಿಂದ ಇಕ್ವಾಲ್ ಅನ್ಸಾರಿಗೆ ಮತ ನೀಡುವಂತೆ ವಿವಾಹ ವೇದಿಕೆಯಲ್ಲೇ ಸಿದ್ದರಾಮಯ್ಯ ಕರೆ ನೀಡಿದರು. ಇದು ಮೇಲುನೋಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಟಾಂಗ್ ನೀಡಿದಂತೆ ಇತ್ತು.
ನವೆಂಬರ್ 2ರಂದು ಚುನಾವಣೆಗೆ ಯಾರೇ ಸ್ಪರ್ಧಿಸಬೇಕೆಂದರೂ 2 ಲಕ್ಷ ರೂ ಡಿಡಿ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಘೋಷಣೇ ಮಾಡಿದ್ದಾರೆ. ಇದರಿಂದ ಒಂದೇ ಕ್ಷೇತ್ರಕ್ಕೆ ಹಲವಾರು ಅಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಿದ್ದರಾಮಯ್ಯ ಟಿಕೆಟ್ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಹೆಸರೇಳಿ ಮತಯಾಚನೆ ಮಾಡಿರುವುದು ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವ ಅಕಾಂಕ್ಷಿಗಳಾದ ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರ ಆಕ್ರೋಶ ವ್ಯಕ್ತಪಡಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ದೂರು ನೀಡುವುದಕ್ಕೆ ಸಿದ್ದರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಬ್ಯಾನರ್‌ನಡಿ ಕಾರ್ಯಕ್ರಮದ ಮಾಡಿದರೆ ಡಿಕೆ ಶಿವಕುಮಾರ್ ಗಮನಕ್ಕೆ ತರಬೇಕಾಗುತ್ತದೆ ಎಂದು ಮದುವೆ ನೆಪದಲ್ಲಿ ಸಿದ್ದರಾಮಯ್ಯ ರಾಜಕೀಯ ಭಾಷಣ ಮಾಡಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.












Click it and Unblock the Notifications