ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆ ರದ್ದು
ಕೊಪ್ಪಳ, ಡಿಸೆಂಬರ್ 19: ಕೊಪ್ಪಳದ ಇತಿಹಾಸ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವು ಈ ಬಾರಿ ರದ್ದಾಗಿದ್ದು, ದೇಗುಲದ ಆವರಣಕ್ಕೆ ಸೀಮಿತವಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ದಕ್ಷಿಣ ಭಾರತದ ಕುಂಭಮೇಳ ಎಂದೇ ಕರೆಸಿಕೊಳ್ಳುತ್ತಿದ್ದ ಈ ಜಾತ್ರೆಯಲ್ಲಿ ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಿದ್ದರು. ಆದರೆ ಕೊರೊನಾ ಸೋಂಕಿನ ಕಾರಣವಾಗಿ ಈ ಬಾರಿ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.
ಜನವರಿ 30ರಂದು ಜಾತ್ರೆ ನಡೆಸಲು ತೀರ್ಮಾನಿಸಲಾಗಿತ್ತು. ಜಾತ್ರೆಗೆ ಅನುಮತಿ ನೀಡುವಂತೆ ಮಠ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಆದರೆ ಕೊರೊನಾ ಕಾರಣವಾಗಿ ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸುಮಾರು ಮೂರು ವಾರಗಳ ಕಾಲ ನಡೆಯುತ್ತಿದ್ದ ಈ ಜಾತ್ರೆಯಲ್ಲಿ ದಾಸೋಹ ನಡೆಯುತ್ತಿತ್ತು. "ಅನ್ನದ ಜಾತ್ರೆ" ಎಂದೂ ಕರೆಯಲಾಗುತ್ತಿತ್ತು. ವಿಶೇಷ ದಾಸೋಹಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳ ಜನರು ದವಸ ಧಾನ್ಯಗಳನ್ನು ನೀಡುತ್ತಿದ್ದರು. ಆದರೆ ಈ ಬಾರಿ ಜಾತ್ರೆ ರದ್ದಾಗಿರುವುದು ಭಕ್ತರಲ್ಲಿ ನಿರಾಸೆ ಉಂಟು ಮಾಡಿದೆ.
ಜಾತ್ರೆ ರದ್ದಾಗಿರುವ ಕುರಿತು ಮಠದಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ. ಜಾತ್ರೆ ನಡೆಸುವಂತೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ ಎಂದಷ್ಟೇ ತಿಳಿದುಬಂದಿದೆ.
ಕೊಪ್ಪಳದಲ್ಲಿ ಕೊರೊನಾ ಪ್ರಕರಣ; ಕೊಪ್ಪಳ ಜಿಲ್ಲೆಯಲ್ಲಿ ಡಿ.19ರ ವರದಿಯಂತೆ ಒಟ್ಟು 13803 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 13439 ಮಂದಿ ಬಿಡುಗಡೆಯಾಗಿದ್ದಾರೆ. 85 ಸಕ್ರಿಯ ಪ್ರಕರಣಗಳಿದ್ದು, 279 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.












Click it and Unblock the Notifications