Ram Mandir; ರಾಮಭಕ್ತೆ ಶಬರಿ ಗುಹೆಯ ಬಾರೆ ಹಣ್ಣುಗಳು ಅಯೋಧ್ಯಗೆ
ಕೊಪ್ಪಳ, ಜನವರಿ 22: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ, ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದರು.

ರಾಮ ಭಕ್ತ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ ಅವರು ಸ್ವಚ್ಛ ತೀರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ವಿಶೇಷ ಪೂಜೆ ಸಲ್ಲಿಸಿದರು, ಬಿಜೆಪಿ ಕಾರ್ಯಕರ್ತರು ಮತ್ತು ಭಕ್ತರ ಜೊತೆ ಹೋಮದಲ್ಲಿ ಪಾಲ್ಗೊಂಡರು.
ಶಬರಿ ಗುಹೆಯ ಹಣ್ಣು ಅಯೋಧ್ಯೆಗೆ: ಸಚಿವೆ ಶೋಭಾ ಕರಂದ್ಲಾಜೆ ಅಂಜನಾದ್ರಿ ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಸ್ವಚ್ಛತಾ ಸೇವೆ ಸಲ್ಲಿಸಿದರು. ಅಯೋಧ್ಯಗೆ ತಲುಪಿಸಲು ರಾಮಭಕ್ತೆ ಶಬರಿ ಗುಹೆಯ ಬಾರೆ ಹಣ್ಣುಗಳನ್ನು ಭಕ್ತರು ಸಚಿವರಿಗೆ ನೀಡಿದರು.
ಸಚಿವರು ಮಾತನಾಡಿ, "ಶ್ರದ್ಧಾ ಕೇಂದ್ರವಾದ ಅಯೋಧ್ಯಯಲ್ಲಿ ಜ.22ಕ್ಕೆ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ. ಶ್ರೀ ರಾಮನ ಜೊತೆ ನಿಂತಿದ್ದು ಹಾಗೂ ಶ್ರೀ ರಾಮಚಂದ್ರನನ್ನು ರಕ್ಷಣೆ ಮಾಡಿದ್ದು ಆಂಜನೇಯ. ಸೀತಾ ಮಾತೆಯನ್ನು ಹುಡುಕಿದ್ದು, ರಾಮನಿಗಾಗಿ ಸೇತುವೆ ನಿರ್ಮಾಣ ಮಾಡಿದ್ದು ಆಜನೇಯ" ಎಂದರು.
"ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಿಮಿತ್ತ ಪವನಪುತ್ರ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ರಾಮನ ಬರುವಿಕೆಗಾಗಿ ಹಲವಾರು ಬಾರಿ ಕಾದು, ರಾಮನಿಗಾಗಿ ಬಾರೆ ಹಣ್ಣುಗಳನ್ನು ನೀಡಿದ್ದ ರಾಮಭಕ್ತೆ ಶಬರಿಯ ಗೃಹ ಸ್ಥಳದಿಂದ ಪ್ರಸಾದದ ರೂಪದಲ್ಲಿ ಭಕ್ತರು ನೀಡಿದ ಬಾರೆ ಹಣ್ಣುಗಳನ್ನು ಅಯೋಧ್ಯಗೆ ತಲುಪಿಸುತ್ತೇನೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಹಲವು ಗಣ್ಯರು ಬೆಟ್ಟದಲ್ಲಿ ಪೂಜೆಯಲ್ಲಿ ಪಾಲ್ಗೊಂಡರು.
ಅಂಜನಾದ್ರಿ ಅಭಿವೃದ್ಧಿ; ಕರ್ನಾಟಕ ಸರ್ಕಾರ ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, "ಸಾವಿರಾರು ವರ್ಷಗಳಿಂದಲೂ ಅಂಜನಾದ್ರಿಯ ಕಿಷ್ಕಿಂದೆ ಪ್ರದೇಶ ಇದೇ ಆಗಿರುವ ವಿಷಯ ಜನಜನಿತವಾಗಿದ್ದು, ಜನರ ನಂಬಿಕೆಗಿಂತ ಇನ್ನಾವುದೇ ಪುರಾವೆ ಬೇಕಾಗಿಲ್ಲ. ಹೀಗಾಗಿ ಆಂಜನೇಯ ಹುಟ್ಟಿದ ಸ್ಥಳ ವಿವಾದದ ಬಗ್ಗೆ ಚರ್ಚೆ ಮಾಡುವ ಅಗತ್ಯವೇ ಇಲ್ಲ. ಸಾವಿರ ಬಾರಿ ಹೇಳುತ್ತೇನೆ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಬಳಿಯ ಅಂಜನಾದ್ರಿ ಬೆಟ್ಟ ಕಿಷ್ಕಿಂದೆಯೇ ಹನುಮ ಜನಿಸಿದ ನಾಡು ಎಂದು. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು" ಎಂದು ಹೇಳಿದ್ದರು.
ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹೀಗೆ ವಿವಿಧ ರಾಜ್ಯಗಳು ಆಂಜನೇಯ ಹುಟ್ಟಿದ ಸ್ಥಳದ ಬಗ್ಗೆ ವಿವಾದ ಮಾಡುತ್ತಿರುವ ಕುರಿತು ಆಗ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದರು. "ಆಂಜನೇಯ ಹುಟ್ಟಿದ್ದು ಇಲ್ಲಿನ ಅಂಜನಾದ್ರಿ ಕಿಷ್ಕಿಂದೆಯಲ್ಲಿಯೇ ಎಂದು ಸಾವಿರಾರು ವರ್ಷಗಳಿಂದ ಜನಜನಿತವಾಗಿದೆ. ಇಡೀ ಭಾರತ ವಾಸಿಗಳು ಇದನ್ನು ನಂಬಿದ್ದಾರೆ. ಸಾವಿರಬಾರಿ ಹೇಳುವೆ ಆಂಜನೇಯ ಹುಟ್ಟಿದ್ದು, ಇದೇ ಅಂಜನಾದ್ರಿಯ ಕಿಷ್ಕಿಂದೆಯಲ್ಲಿ" ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು.
"ಆಂಜನೇಯ ಸ್ವಾಮಿಯ ಜನ್ಮಸ್ಥಳದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಘೋಷಿಸಿ, 100 ಕೋಟಿ ರೂ. ಅನುದಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಅಂಜನಾದ್ರಿ ಬೆಟ್ಟ ಪ್ರದೇಶಕ್ಕೆ ಆಗಮಿಸುವ ಯಾತ್ರಿಕರೆಗೆ ಸೂಕ್ತ ರೀತಿಯಲ್ಲಿ ಸಂಪರ್ಕ ರಸ್ತೆ, ವಸತಿ ವ್ಯವಸ್ಥೆ, ಯಾತ್ರಿ ನಿವಾಸ, ಆಸ್ಪತ್ರೆ, ಪಾರ್ಕಿಂಗ್, ಮಾರುಕಟ್ಟೆ ಮುಂತಾದ ವ್ಯವಸ್ಥೆಗಳನ್ನು ಕೈಗೊಳ್ಳಬೇಕಿದೆ" ಎಂದು ಅವರು ಹೇಳಿದ್ದರು.
"ವಯಸ್ಕರು ಹಾಗೂ ಮಕ್ಕಳು ಕೂಡ ಅಂಜನಾದ್ರಿ ಬೆಟ್ಟಕ್ಕೆ ಹೋಗಿಬರಲು ಅನುಕೂಲವಾಗುವಂತೆ ರೋಪ್‌ವೇ ನಿರ್ಮಿಸಲಾಗುವುದು. ಇದಕ್ಕಾಗಿ ಶೀಘ್ರ ಟೆಂಡರ್ ಕರೆಯಲಾಗುವುದು. ಈ ಪ್ರದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಇದಕ್ಕಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ" ಎಂದು ತಿಳಿಸಿದ್ದರು.












Click it and Unblock the Notifications