ಮೀಸಲಾತಿ ಕೊಟ್ಟರೆ ಸನ್ಮಾನ, ಇಲ್ಲದಿದ್ದರೆ ಅವಮಾನ: ಸಿಎಂಗೆ ಎಚ್ಚರಿಕೆ ನೀಡಿದ ಕಾಶಪ್ಪನವರ್
ಕೊಪ್ಪಳ, ನವೆಂಬರ್ 30: 2ಎ ಮೀಸಲಾತಿಗಾಗಿ ಇದು ನಮ್ಮ ಕೊನೆಯ ಹೋರಾಟ. ಇದು ಮಾಡು ಇಲ್ಲವೆ ಮಡಿ ಹೋರಾಟ. ಇದು ಐದನೇ ಹಂತದ ಹೋರಾಟ ಎಂದು ಮಾಜಿ ಶಾಸಕ ವಿಜಾಯನಂದ ಕಾಶಪ್ಪನವರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮುಧೋಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 19 ಕೊನೆಯ ಡೆಡ್ ಲೈನ್. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮೀಸಲಾತಿ ಕೊಟ್ಟರೆ ನಿಮಗೆ ಸನ್ಮಾನ, ಇಲ್ಲದಿದ್ದರೆ ಅವಮಾನ ಆಗುತ್ತದೆ ಎಂದು ವಿಜಾಯನಂದ ಕಾಶಪ್ಪನವರ್ ಹೇಳಿದ್ದಾರೆ.
ಬಿಜೆಪಿಗೆ ಸಮಾಜದಲ್ಲಿ ಗಲಭೆ ಎಬ್ಬಿಸಲು ರೌಡಿಗಳು ಬೇಕು: ಸಿದ್ದರಾಮಯ್ಯ
ಒಂದೂವರೆ ಕೋಟಿ ಹೊಸ ಕಾರು ತಗೊಂಡು ಹೋದವರು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಆವತ್ತು ಪಾದಯಾತ್ರೆಯಿಂದ ಹೋದವರು ಇನ್ನು ಬಂದಿಲ್ಲ. ಈಗ ಜಾಗೃತಿ ಸಭೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಚನಾನಂದ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೀಸಲಾತಿ ಕೊಡುವ ಬಗ್ಗೆ ಯಾರಾದರೂ ವಿರೋಧ ಮಾಡಿದರೆ ಎಚ್ಚರ
ಲಿಂಗಾಯರಲ್ಲಿ 32 ಒಳಪಂಗಡಗಳು ಮೀಸಲಾತಿ ಪಡೆದಿವೆ. ನಾವು ಕೇಳಿದರೆ ನಮ್ಮಲ್ಲೇ ಕೆಲವರಿಗೆ ಸಿಟ್ಟು ಬರುತ್ತದೆ. ಕೆಲವರು ನನ್ನ ಮತ್ತು ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೋರಾಟ ಮಾಡಲು ಯತ್ನಿಸಿದರು. ನಾವು ಏನು ಅವಮಾನ ಮಾಡಿರಲಿಲ್ಲ. ನಮಗೆ ಮೀಸಲಾತಿ ಕೊಡುವ ಬಗ್ಗೆ ಯಾರಾದರೂ ವಿರೋಧ ಮಾಡಿದರೆ ಎಚ್ಚರ. ನೀವು ಖುರ್ಚಿ ಕಳೆದುಕೊಳ್ಳಬೇಕಾಗುತ್ತದೆ. ನಮಗೆ ಮೀಸಲಾತಿ ನೀಡಲು ಕೆಲ ಹಾಲಿ ಸಚಿವರು, ಮಾಜಿ ಡಿಸಿಎಂಗಳು ವಿರೋಧ ಮಾಡುತ್ತಿದ್ದಾರಂತೆ. ಚುನಾವಣೆಗೆ ಇನ್ನು 123 ದಿನ ಮಾತ್ರ ಬಾಕಿ ಇದೆ ಎಂದು ಎಚ್ಚರಿಸಿದರು.

ಸರ್ಕಾರಕ್ಕೆ ಅಂತಿಮ ಗಡುವು ನೀಡಲಾಗಿದೆ
ಈ ವೇಳೆ ಉಪಸ್ಥಿತರಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸರ್ಕಾರ ಮಾತಿಗೆ ತಪ್ಪಿದೆ. ಯಡಿಯೂರಪ್ಪ ಅವರು ಸಹ ಮಾತಿಗೆ ತಪ್ಪಿದ್ದಾರೆ. ಡಿಸೆಂಬರ್ 19ರಂದು ಕೊನೆ ಗಡುವು. ಇನ್ನು 20 ದಿನ ಮಾತ್ರ ಬಾಕಿ ಇದೆ. ಅಷ್ಟರೊಳಗೆ ಆಯೋಗದ ವರದಿ ನೀಡಬೇಕು. ಸರ್ಕಾರಕ್ಕೆ ಅಂತಿಮ ಗಡುವು ನೀಡಲಾಗಿದೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಹಾಗೆಯೇ, ಈಗ ನಮ್ಮ ಪಂಚಮಸಾಲಿ ಸಮಾಜದ ಕಾಲ. ನಮಗೊಂದು ಕಾಲ ಬಂದಿದೆ. ಪ್ರಚಂಡ ಪಂಚಮಸಾಲಿ ಸಮಾಜದ ಶಕ್ತಿಯನ್ನು ಅರಮನೆ ಮೈದಾನದಲ್ಲಿ ತೋರಿಸಲಾಗಿದೆ ಎಂದು ಹೇಳಿದರು.

ಲಿಂಗಾಯತ ಎನ್ನುವ ಮೂಲಕ ಉಳಿದ ಜಾತಿಗಳು ಸೌಲಭ್ಯ ಪಡೆದವು
ಇನ್ನು 2 ವರ್ಷಗಳಿಂದ ಮಠ ಬಿಟ್ಟು ಹೋರಾಟ ಮಾಡುತ್ತಿದ್ದೇನೆ. ಎಲ್ಲಾ ಸಮಾಜಗಳ ಹೋರಾಟಕ್ಕೆ ಧ್ವನಿ, ನಮ್ಮ ಪಂಚಮಸಾಲಿ ಸಮಾಜದ ಹೋರಾಟ. ಯಡಿಯೂರಪ್ಪ 3 ತಿಂಗಳಲ್ಲಿ ಮೀಸಲಾತಿ ಕೋಡುತ್ತೇವೆ ಹೋರಾಟ ಕೈಬಿಡಿ ಎಂದು ಮನವಿ ಮಾಡಿದ್ದರು. ಅಂದು ಪ್ರತಿಭಟನೆ ಕೈಬಿಟ್ಟಿದ್ದರೆ ಎಂದೂ ಮೀಸಲಾತಿ ಸಿಗುತ್ತಿರಲಿಲ್ಲ. ಲಿಂಗಾಯತ ಎನ್ನುವ ಮೂಲಕ ಉಳಿದ ಜಾತಿಗಳು ಸೌಲಭ್ಯ ಪಡೆದವು. ನಮ್ಮ ಮತವನ್ನು ಪಡೆದು ನಮ್ಮ ಹಿತ ಕಾಪಾಡಲಿಲ್ಲ. ಪೂಜ್ಯರು ಹಾಗೂ ರಾಜಕಾರಣಿಗಳು ಮುಖ್ಯಮಂತ್ರಿಗಳ ಬಳಿ ಮೀಸಲಾತಿ ಕೊಡುವಂತೆ ಮನವಿ ಮಾಡಿ ಎಂದರು.

ಯಾರೇ ಸಿಎಂ ಆದರೂ ಅವರಿಗೆ ನಮ್ಮ ಸಮಾಜದ ಆಶೀರ್ವಾದ ಬೇಕು
ಇನ್ನು ಈ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ನಮ್ಮ ಸಮಾಜ ಕಡೆಗಣನೆ ಮಾಡಲು ಆಗುವುದಿಲ್ಲ. ಯಾರೇ ಸಿಎಂ ಆದರೂ ಅವರಿಗೆ ನಮ್ಮ ಸಮಾಜದ ಆಶೀರ್ವಾದ ಬೇಕು. ಎಸ್‌ಟಿ ಮೀಸಲಾತಿಗಾಗಿ ಸದನದಲ್ಲಿ ಮೊದಲು ಧ್ವನಿ ಎತ್ತಿದ್ದೇ ನಾನು. ಆದರೆ ಈಗ ನಾನು ಕೊಡಿಸಿದ್ದು ನಾನು ಕೊಡಿಸಿದ್ದು ಅಂತಾ ಕೆಲವರು ಹೇಳುತ್ತಿದ್ದಾರೆ. ನಾನು ಕೇವಲ ನಮ್ಮ ಜಾತಿಗಾಗಿ ಧ್ವನಿ ಎತ್ತಿರಲಿಲ್ಲ, ಬದಲಾಗಿ ಎಲ್ಲಾ ಜಾತಿ ಬಗ್ಗೆ ಮಾತನಾಡಿದ್ದೇನೆ. ಕೆಲವರು ನಮ್ಮ ಜಾತಿಯನ್ನು ಕೇವಲ ಮಂತ್ರಿಗಿರಿ ತೆಗೆದುಕೊಳ್ಳುಲು ಬಳಕೆ ಮಾಡಿಕೊಂಡರು ಎಂದು ಗುಡುಗಿದರು.