ಗಂಗಾವತಿ-ದರೋಜಿ ರೈಲ್ವೆ ಬ್ರಾಡ್‌ಗೇಜ್ ನಿರ್ಮಿಸಿ: ಸಂಗಣ್ಣ ಕರಡಿ
ಕೊಪ್ಪಳ, ಸೆ.17: ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ದರೋಜಿವರೆಗಿನ 35 ಕಿ.ಮೀ. ಅಂತರದ ರೈಲ್ವೇ ಬ್ರಾಡ್‌ಗೇಜ್ ಲೈನ್ ನಿರ್ಮಿಸಬೇಕು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಸಂಸದ ಕರಡಿ ಸಂಗಣ್ಣ ಅವರು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗಂಗಾವತಿ-ದರೋಜಿ ಹೊಸ ರೈಲ್ವೇ ಬ್ರಾಡ್‌ಗೇಜ್ ಲೈನ್ ನಿರ್ಮಿಸುವಂತೆ ವಿಷಯ ಮಂಡನೆ ಮಾಡಿ, ಕೇಂದ್ರ ಸರ್ಕಾರದ ಮುಂದೆ ಆಗ್ರಹಪೂರ್ವಕ ಮನವಿ ಮಾಡಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಬಳ್ಳಾರಿ ಜಿಲ್ಲೆಯ ದರೋಜಿ ವರೆಗೆ 35_ಕಿ.ಮೀ. ಅಂತರವಿದ್ದು, ಇಲ್ಲಿ ರೈಲ್ವೆ ಬ್ರಾಡ್‌ಗೇಜ್ ನಿರ್ಮಿಸುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಗಂಗಾವತಿಯು ಹೆಚ್ಚು ಭತ್ತ ಬೆಳೆಯುವ ಪ್ರದೇಶವಾಗಿದ್ದು, ಇಲ್ಲಿ ಉತ್ತಮ ಗುಣಮಟ್ಟದ_ಭತ್ತ ಬೆಳೆಯುವುದರ ಜೊತೆಗೆ ಇಲ್ಲಿ ಹಲವಾರು ರೈಸ್ ಮಿಲ್‌ಗಳು ಇವೆ. ಮತ್ತು ಆನೆಗೊಂದಿ ಹನುಮಂತ ಜನಿಸಿದ ನಾಡಾಗಿರುವುದರಿಂದ ಇಲ್ಲಿ ದೇಶ ವಿದೇಶಗಳಿಂದ ಹಲವಾರು ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ. ಈ ಭಾಗದ ಭತ್ತದ ವ್ಯಾಪಾರದ ವಾಣಿಜ್ಯೋದ್ಯಮಕ್ಕೂ ಕೂಡ ಅನುಕೂಲವಾಗಲಿದೆ.

ದರೋಜಿಯು ಕೂಡ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ಕರಡಿ ಧಾಮವಿದೆ. ದರೋಜಿಯಿಂದ ಬಳ್ಳಾರಿ ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸಿದರೆ ಗಂಗಾವತಿಯಿಂದ ರಾಯಚೂರು, ಮುನಿರಾಬಾದ್ ಹಾಗೂ ಮೆಹಬೂಬ್‌ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಹಾಗಾಗಿ ಗಂಗಾವತಿ-ದರೋಜಿ ಹೊಸ ರೈಲ್ವೇ ಬ್ರಾಡ್‌ಗೇಜ್ ಲೈನ್ ನಿರ್ಮಿಸುವುದರ ಕುರಿತು ಸಂಸದ ಕರಡಿ ಸಂಗಣ್ಣನವರು ಸಂಸತ್ತಿನಲ್ಲಿ ವಿಷಯ ಮಂಡನೆ ಮಾಡಿದರು. (ಮಾಹಿತಿ ಕೃಪೆ: ವಾರ್ತಾ ಇಲಾಖೆ)












Click it and Unblock the Notifications