ಕೊಪ್ಪಳ; ಸಖಿ ಒನ್ ಸ್ಟಾಪ್ ಸಿಬ್ಬಂದಿ ಕಾಳಜಿ, ಕುಟುಂಬ ಸೇರಿದ ಮಹಿಳೆ
ಕೊಪ್ಪಳ, ಅಕ್ಟೋಬರ್ 10; ತಾಯಿಯ ಸಾವಿನ ಬಳಿಕ ತೀವ್ರ ಮಾನಸಿಕ ಖಿನ್ನತೆಗೊಳಗಾಗಿ ಮನೆಯವರಿಂದ ದೂರವಾಗಿದ್ದ ಮಹಿಳೆಯೊಬ್ಬರು ಪುನಃ ಕುಟುಂಬವನ್ನು ಸೇರಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್‌ನ ಸಿಬ್ಬಂದಿಯ ಕಾಳಜಿ ಇಲ್ಲಿ ಕೆಲಸ ಮಾಡಿದೆ.
ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಮಹಿಳೆಯ ಕುಟುಂಬದವರನ್ನು ಪತ್ತೆ ಹಚ್ಚಿ ಅವಳನ್ನು ಕುಟುಂಬದವರ ಪೋಷಣೆ, ಆರೈಕೆ ಮತ್ತು ಸುರಕ್ಷತೆಗೆ ಒಪ್ಪಿಸುವ ಮಹತ್ವದ ಕಾರ್ಯವನ್ನು ಸಖಿ ಒನ್ ಸ್ಟಾಪ್ ಸೆಂಟರ್‌ನ ಸಿಬ್ಬಂದಿಗಳು ಮಾಡಿದ್ದಾರೆ.

26/9/2023ರಂದು ಯಲಬುರ್ಗಾ ತಾಲೂಕಿನಿಂದ ಶಿವಣ್ಣ ರಾಯರೆಡ್ಡಿ ಎಂಬುವವರು ತಳಕಲ್ ಬಸ್ ನಿಲ್ದಾಣದಲ್ಲಿ ಇರುವ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಂರಕ್ಷಿಸಿ ಎಂದು ಸಖಿ ಘಟಕದ ಆಡಳಿತಾಧಿಕಾರಿಗಳಿಗೆ ಕರೆ ಮಾಡಿದ್ದರು. ಆಗ ಸಖಿ ಘಟಕದ ಆಡಳಿತಾಧಿಕಾರಿಗಳು, ಕೊಪ್ಪಳದ ಕುಕನೂರು ತಾಲೂಕಿನ 112 ತುರ್ತು ಪೊಲೀಸ್ ವಾಹನದ ಸಿಬ್ಬಂದಿಯ ಸಹಯೋಗದೊಂದಿಗೆ ತಳಕಲ್ ಬಸ್ ನಿಲ್ದಾಣಕ್ಕೆ ತೆರಳಿದ್ದರು.
14 ದಿನ ವೈದ್ಯಕೀಯ ತಪಾಸಣೆ; ಬಸ್ ನಿಲ್ದಾಣದಲ್ಲಿದ್ದ ಮಹಿಳೆಯನ್ನು ರಕ್ಷಿಸಿ ಸಖಿ ಘಟಕದಲ್ಲಿ ಆಶ್ರಯ ನೀಡಲಾಗಿತ್ತು. ದೈಹಿಕ ಶುಚಿತ್ವದೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಮನೋವೈದ್ಯರಿಂದ ವೈದ್ಯಕೀಯ ತಪಾಸಣೆ ಮಾಡಿಸಲಾಯಿತು. ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 14 ದಿನಗಳ ಕಾಲ ಚಿಕಿತ್ಸೆ ಕೊಡಿಸಿ, ಸಖಿ ಘಟಕದಲ್ಲಿ ಆಶ್ರಯ ಕಲ್ಪಿಸಿ ಕುಟುಂಬಸ್ಥರ ಪತ್ತೆಗೆ ಪ್ರಕಟಣೆ ಹೊರಡಿಸಲಾಯಿತು.
ಪ್ರಕಟಣೆ ಬಳಿಕ ಮಹಿಳೆಯ ತವರು ಕುಟುಂಬವು ವಿಜಯಪುರ ಜಿಲ್ಲೆಯಲ್ಲಿದೆ ಎಂಬ ಮಾಹಿತಿ ಸಿಕ್ಕಿತು. ಮಹಿಳೆಯ ಕುಟುಂಬಸ್ಥರನ್ನು ಸುಶೀಲಾಬಾಯಿ ರುದ್ರಗೌಡ ಕೊಣ್ಣೂರು ಡಬ್ಲ್ಯೂಎಚ್‌ಸಿ 1477 ಗ್ರಾಮದ ಬಿಟ್ ಅಧಿಕಾರಿ ವೃಂದದವರು ಪತ್ತೆ ಹಚ್ಚಿದರು. ಮಹಿಳೆಗೆ ಇಬ್ಬರು ಮಕ್ಕಳು, ಪತಿ, ಅತ್ತೆ, ಮಾವ, ಅಣ್ಣ, ಅಕ್ಕ ಇದ್ದಾರೆ ಎಂದು ತಿಳಿಯಿತು.
ದಿನಾಂಕ 6/10/2023 ರಂದು ನ್ಯಾಯಾಧೀಶರು, ಕೊಪ್ಪಳ ಅವರ ಸಮ್ಮುಖದಲ್ಲಿ ಹಾಜರುಪಡಿಸಿ ಮಹಿಳೆಯನ್ನು ಕುಟುಂಬಸ್ಥರ ಸುಪರ್ದಿಗೆ ಕಳುಹಿಸಲಾಯಿತು. ಸಖಿ ಒನ್ ಸ್ಟಾಪ್ ಸೆಂಟರ್ ಘಟಕದಲ್ಲಿ ಸದರಿ ಕುಟುಂಬಸ್ಥರೊಂದಿಗೆ ಸಮಾಲೋಚನೆ ನಡೆಸಿ ಮಾನಸಿಕ ಅಸ್ವಸ್ಥ ಮಹಿಳೆಗೆ ಸೂಕ್ತ ಪೋಷಣೆ, ಆರೈಕೆ, ಔಷಧೋಪಚಾರಗಳ ಚಿಕಿತ್ಸೆಯನ್ನು ಕೊಡಿಸುವಂತೆ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಮಹಿಳೆಯನ್ನು ಗಂಡನ, ಕುಟುಂಬಸ್ಥರ ಸುಪರ್ದಿಗೆ ಒಪ್ಪಿಸಲಾಗಿದೆ.
"ಕೊಪ್ಪಳದ ಸಖಿ ಒನ್ ಸ್ಟಾಪ್ ಸೆಂಟರ್ ತಂಡದ ಪ್ರಯತ್ನ ಮತ್ತು ಪೊಲೀಸ್ ಸಹಾಯದಿಂದಾಗಿ ಈ ಮಹಿಳೆಯ ಕುಟುಂಬದವರು ಪತ್ತೆಯಾಗಿ ಪ್ರಕರಣವು ಸುಖಾಂತ್ಯ ಕಂಡಿದೆ" ಎಂದು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದಾರೆ.
ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಯಮುನಾ ಬೆಸ್ತರ ಮಾತನಾಡಿ, "ಮಾನಸಿಕ ಅಸ್ವಸ್ಥ ಮಹಿಳೆಯು ಕುಟುಂಬದವರಿಂದ ದೂರಾಗಿ ಮಾನಸಿಕವಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದಳು. ತನ್ನ ಕುಟುಂಬದವರ, ಬಂಧು ಬಾಂಧವರ ಹೆಸರುಗಳನ್ನು ಮರೆತು ಒಬ್ಬಳೇ ಮಾತನಾಡುವುದು, ಕೂಗಾಡುವುದು, ಯಾರಾದರೂ ಪುರುಷರನ್ನು ಕಂಡಾಗ ಬಯ್ಯುವುದು, ಅಲ್ಲಿಲ್ಲಿ ತಿರುಗುವುದನ್ನು ಮಾಡುತ್ತಿದ್ದಳು" ಎಂದರು.
"ಮಹಿಳೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಾವು ತೀವ್ರ ರೀತಿಯಲ್ಲಿ ಕಾರ್ಯಪ್ರವೃತ್ತರಾದೆವು. ನಮ್ಮ ಪ್ರಯತ್ನ ಕೊನೆಗೂ ಫಲಿಸಿತು. ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ವೃಂದದವರು, ಯಲಬುರ್ಗಾ ತಾಲೂಕಿನ ಕುಕುನೂರು ತಾಲೂಕಿನ ಪಿಎಸ್‌ಐ ಮತ್ತು ತಳಕಲ್ ಬಿಟ್ ಅಧಿಕಾರಿಗಳು, ಬಾಗಲಕೋಟ ಜಿಲ್ಲೆಯ ಕೆರೂರು ಪಿಎಸ್‌ಐ ಅಧಿಕಾರಿಗಳು, ವಾರ್ತಾ ಇಲಾಖೆಯ ಕೊಪ್ಪಳ ವಿಜಯಪುರ ಬಾಗಲಕೋಟೆ ಅಧಿಕಾರಿ ವೃಂದದವರು, ಬಾಗಲಕೋಟೆ ಜಿಲ್ಲೆಯ ಸಖಿ ಘಟಕದ ಆಡಳಿತಾಧಿಕಾರಿಗಳು ಪ್ರತಿಯೊಬ್ಬರಿಗೂ ಅಭಿನಂದನೆ ತಿಳಿಸುವೆ" ಎಂದು ಹೇಳಿದರು.












Click it and Unblock the Notifications