ಕುಕನೂರು; ಅವೈಜ್ಞಾನಿಕ ಸೇತುವೆ ಕಾಮಗಾರಿ, ವಾಹನ ಸವಾರರ ಪರದಾಟ
ಕೊಪ್ಪಳ, ಅಕ್ಟೋಬರ್, 11: ಕೊಪ್ಪಳ ಜಿಲ್ಲೆಯಲ್ಲಿ ನಿನ್ನೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಮತ್ತೆ ಇಂದು ಬೆಳಗ್ಗೆಯೂ ಭಾರಿ ಮಳೆ ಸುರಿದಿದ್ದು, ಜಿಲ್ಲೆಯಲ್ಲಿರುವ ನೀರಿನ ಮೂಲಗಳು ಬಹುತೇಕ ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗದ್‌ವಾಡಿಯ ರೈಲ್ವೆ ಮಾರ್ಗದ ಕೆಳ ಸೇತುವೆ ಬಳಿ ಮಳೆ ನೀರು ಸಂಗ್ರಹವಾಗಿ ಜನರು ಪರದಾಡಿದ್ದಾರೆ.
ಕೆಲವೆಡೆ ಮಳೆ ನೀರಿನಿಂದ ಅವಾಂತರಗಳು ಸೃಷ್ಟಿ ಆಗಿದ್ದರೆ, ಮತ್ತೊಂದೆಡೆ ಮಳೆ ಸುರಿದಿರುವುದು ರೈತರ ಮುಖದಲ್ಲಿ ಸಂತಸ ತರಿಸಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗದ್‌ವಾಡಿಯ ರೈಲ್ವೆ ಮಾರ್ಗದ ಕೆಳ ಸೇತುವೆಯಲ್ಲಿ ಮಳೆ ನೀರು ತುಂಬಿಕೊಂಡು ಜನರು ಪರದಾಡಿದ್ದಾರೆ.
ದ್ಯಾಂಪುರ - ತೊಂಡಿಹಾಳ, ನರೆಗಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಈ ರೈಲ್ವೆ ಮಾರ್ಗ ಇದೆ. ಈ ಮಾರ್ಗದ ಕೆಳ ಸೇತುವೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಇಲ್ಲಿ ನೀರು ಸಂಗ್ರಹವಾಗಲಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿಬಿಡುತ್ತದೆ. ಹೀಗೆಯೇ ನಿನ್ನೆ ರಾತ್ರಿ ಭಾರಿ ಮಳೆ ಸುರಿದಿದ್ದು, ಇದರ ಪರಿಣಾಮ ಸೇತುವೆ ಕೆಳಗಡೆ ಮಳೆ ನೀರು ಸಂಗ್ರಹವಾಗಿದೆ.

ಅವೈಜ್ಞಾನಿಕ ಸೇತುವೆ ಕಾಮಗಾರಿ
ಟ್ರ್ಯಾಕ್ಟರ್ ಸೇತುವೆ ಕೆಳಗಡೆ ಮಳೆ ನೀರಿನಲ್ಲಿ ಸಿಲುಕಿಕೊಂಡಿದ್ದು, ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ರೈಲ್ವೆ ಸೇತುವೆಯ ನೀರು ಪಕ್ಕದ ಜಮೀನಿಗೆ ನುಗ್ಗಿ ಬೆಳೆಗಳು ಜಲಾವೃತವಾಗಿವೆ. ಅಲ್ಲದೆ ರೈಲ್ವೆ ಸೇತುವೆಯ ಕೆಳಗಡೆ ಸಂಗ್ರಹವಾಗುವ ನೀರಿನಿಂದ ಅಲ್ಲಿನ ಭೂಪ್ರದೇಶ ಕೊಚ್ಚಿಕೊಂಡು ಹೋಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಮನೆಗೋಡೆ ಕುಸಿತ; ವೃದ್ಧ ತಿಮ್ಮಣ್ಣ ಸಾವು
ಸತತವಾಗಿ ಸುರಿದ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ನಡೆದಿದೆ. ತಿಮ್ಮಣ್ಣ (50) ಮೃತಪಟ್ಟ ದುರ್ಧೈವಿ ಆಗಿದ್ದಾರೆ. ಸತತವಾಗಿ ಸುರಿದಿದ್ದ ಮಳೆಗೆ ಮನೆ ಗೋಡೆ ಸಂಪೂರ್ಣವಾಗಿ ನೆನೆದಿದ್ದು, ಮನೆಯಲ್ಲಿ ಮಲಗಿದ್ದಾಗ ಏಕಾಏಕಿ ಮಣ್ಣಿನ ಗೋಡೆ ಕುಸಿದಿದ್ದು, ಪರಿಣಾಮ ಗೋಡೆ ಮೈಮೇಲೆ ಬಿದ್ದ ಪರಿಣಾಮ ತಿಮ್ಮಣ್ಣ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಕೂಡಲೇ ಪಕ್ಕದ ಮನೆಯವರು ಮಣ್ಣಿನ ಅಡಿ ಸಿಲುಕಿದ್ದ ತಿಮ್ಮಣ್ಣನ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ವೃದ್ಧ ಅಷ್ಟೊತ್ತಿಗೆ ಉಸಿರುಗಟ್ಟಿ ಸಾವನ್ನಪ್ಪಿದ್ದ ತಿಳಿದುಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಗದಗ ತಹಶೀಲ್ದಾರ್ ಕಿಶನ್ ಕಲಾಲ್, ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications