ಗಂಗಾವತಿಯಲ್ಲಿ ಜನಾರ್ದನ್ ರೆಡ್ಡಿ ಟೆಂಪಲ್ ರನ್, ಗುಟ್ಟು ಬಿಟ್ಟುಕೊಡದ ಮಾಜಿ ಸಚಿವ
ಕೊಪ್ಪಳ, ಡಿಸೆಂಬರ್, 06: ಒಂದು ಕಡೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮುಂದಿನ ರಾಜಕಿಯ ನಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ಬಗ್ಗೆ ಸಾಕಷ್ಟು ಕುತೂಹಲಕಾರಿಯಾದ ವಿಷಯಗಳು ಕೂಡ ಹೊರಬರುತ್ತಲೇ ಇವೆ. ಸದ್ಯ ಜನಾರ್ಧನ ರೆಡ್ಡಿ ಮಾತ್ರ ಯಾವುದಕ್ಕೂ ಉತ್ತರ ನೀಡಿದೆ ಗಂಗಾವತಿಯಲ್ಲಿ ತಮ್ಮದೇ ರೀತಿಯಲ್ಲಿ ಅಸಲಿ ಆಟ ಶುರು ಮಾಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ತಮ್ಮದೆ ಆದ ಚಾಪು ಮೂಡಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸದ್ಯ ಕೊಪ್ಪಳದ ಪ್ರವಾಸ ಬೆಳೆಸಿದ್ದಾರೆ. ಅಲ್ಲದೇ ಜಿಲ್ಲೆಯ ಗಂಗಾವತಿಯಲ್ಲಿ ಓಡಾಟ ನಡೆಸಿದ್ದಾರೆ. ನಿನ್ನೆಯಷ್ಟೆ ಹನುಮ ಮಾಲೆ ಧರಿಸಿ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ದರ್ಶನ ಪಡೆಯುವ ಮೂಲಕ ಅಧಿಕೃತ ಎಂಬಂತೆ ಗಂಗಾವತಿ ಕ್ಷೇತ್ರದಲ್ಲಿ ರಾಜಕೀಯ ಎರಡನೆ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ. ಹಾಗೆಯೇ ಮಂಗಳವಾರ ಬೆಳಗ್ಗೆಯಿಂದಲೇ ಜನಾರ್ದನ ರೆಡ್ಡಿ ಕ್ಷೇತ್ರದಲ್ಲಿ ಟೆಂಪಲ್ ರನ್ ಆರಂಭಿಸಿದ್ದಾರೆ. ಗಂಗಾವತಿಯ ಹಿರೇಜಂತಕಲ್‌ನಲ್ಲಿರುವ ಐತಿಹಾಸಿಕ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ನಂತರ ಗಂಗಾವತಿ ಪಟ್ಟಣದ ಕಲ್ಮಠಕ್ಕೂ ಭೇಟಿ ನೀಡಿ ಕಲ್ಮಠದ ಗದ್ದುಗೆಗೆ ನಮಸ್ಕರಿಸಿ, ಅಲ್ಲಿನ ಸ್ವಾಮೀಜಿಗಳಿಂದ ಆಶಿರ್ವಾದ ಪಡೆದುಕೊಂಡರು. ಅಷ್ಟೆ ಅಲ್ಲದೆ ನಗರದ ಖಾಸಗಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು.
ಗಂಗಾವತಿಯಲ್ಲಿ ಬೃಹತ್ ಮನೆ ನಿರ್ಮಾಣ ಮಾಡಿದ ಜನಾರ್ದನ ರೆಡ್ಡಿ, ಪ್ರಶ್ನೆಗಳ ಉದ್ಭವ

ರೆಡ್ಡಿಯಿಂದ ಇಬ್ಬರು ರೈತರಿಗೆ ಸನ್ಮಾನ
ಇದೆ ತಿಂಗಳು ಕ್ರೀಸ್ ಮಸ್ ಇರುವ ಹಿನ್ನೆಲೆ ಕೇಕ್ ಕೂಡ ಕಟ್ ಮಾಡಿದ್ದಾರೆ. ರೈತ ದಿನಾಚರಣೆ ಅಂಗವಾಗಿ ಇಬ್ಬರು ರೈತರಿಗೆ ಸನ್ಮಾನ ಮಾಡಿದ್ದರು. ಇನ್ನು ಗಂಗಾವತಿಯಲ್ಲಿ ಹೊಸದಾಗಿ ಖರಿದಿಸಿರುವ ಮನೆ ಹಾಗೂ ಕಚೇರಿಗೂ ಭೇಟಿ ನೀಡಿ ಹೊಸ ಮನೆ ವೀಕ್ಷಣೆ ಮಾಡಿದ್ದಾರೆ. ಬಳಿಕ ಸ್ವಾಮೀಜಿಗಳನ್ನು ಭೇಟಿ ಮಾಡಿ ಗೃಹ ಪ್ರವೇಶದ ದಿನಾಂಕ ತಿಳಿಸುವುದಾಗಿ ಹೇಳಿಕೆ ನೀಡಿದ್ದಾರೆ.

ರೆಡ್ಡಿಯ ರಾಜಕೀಯ ಅಸಲಿಯತ್ತೇನು?
ಗಂಗಾವತಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧೆ ಬಗ್ಗೆ ಇದುವರೆಗೂ ಜನಾರ್ದನರೆಡ್ಡಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಬಹಿರಂಗವಾಗಿಯೇ ರೆಡ್ಡಿ ಈಗಾಗಲೇ ನಗರಸಭೆಯ ಬಿಜೆಪಿ, ಜೆಡಿಎಸ್, ಪಕ್ಷೇತರ ಸದಸ್ಯರುಗಳನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಹಲವು ಸಮುದಾಯಗಳ ಮುಖಂಡರನ್ನು ಸಹ ಭೇಟಿ ಮಾಡಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಚುನಾವಣೆಗೂ ಮೊದಲೇ ರೆಡ್ಡಿ ಸದ್ದಿಲ್ಲದೆ ಕ್ಷೇತ್ರದಲ್ಲಿ ತಮ್ಮ ಅಸಲಿ ಆಟ ಶುರು ಮಾಡಿದ್ದಾರೆ. ರೆಡ್ಡಿ ಅವರು ಭೇಟಿ ಮಾಡಿರುವ ನಗರಸಭೆ ಸದಸ್ಯರನ್ನು ಕೇಳಿದರೆ ರೆಡ್ಡಿ ಅವರು ನಮಗೆ ಮೊದಲಿಂದಲೂ ಆಪ್ತರಾಗಿದ್ದು, ಹೀಗಾಗಿ ಭೇಟಿ ಮಾಡಿದ್ದಾರೆ. ಚುನಾವಣೆ ಹಾಗೂ ರಾಜಕೀಯದ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ. ಚುನಾವಣೆಯಲ್ಲಿ ಬೆಂಬಲ ನೀಡುವ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ ಎಂದರು.

ಹಲವು ಶಾಸಕರಿಗೆ ಗೊಂದಲ ಶುರು?
ಜನಾರ್ದನ ರೆಡ್ಡಿ ನಡೆಯ ಬಗ್ಗೆ ಹಾಲಿ ಶಾಸಕರಿಗೆ ಸಾಕಷ್ಟು ತಳಮಳ ಉಂಟದಂತಾಗಿದೆ. ಸದ್ಯ ಗಂಗಾವತಿ ಕ್ಷೇತ್ರದಲ್ಲಿ ರೆಡ್ಡಿ ಹವಾ ಜೋರಾಗಿದ್ದು, ಇದರ ಮದ್ಯ ಹಾಲಿ ಶಾಸಕರು ಹಾಗೂ ಬಿಜೆಪಿಯ ಕತೆ ಏನು? ಎನ್ನುವಂತಾಗಿದೆ. ಈ ಎಲ್ಲ ಗೊಂದಲಗಳಿಗೆ ಜನಾರ್ದನ ರೆಡ್ಡಿಯವರು ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ಪ್ರತಿಕ್ರಿಯೆ ನೀಡುತ್ತಾರೆಯೋ ಅನ್ನುವುದನ್ನು ಕಾದುನೋಡಬೇಕಿದೆ.

ಬೃಹತ್ ಬಂಗಲೆಯಲ್ಲಿರುವ ಸೌಲಭ್ಯಗಳು
ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಬೃಹತ್ ಆಕಾರದ ಮನೆಯೊಂದನ್ನು ನಿರ್ಮಸಿದ್ದಾರೆ. ಮಂಗಳವಾರ ಅಥವಾ ಡಿಸೆಂಬರ್ 13ರಂದು ಮನೆ ಓಪನಿಂಗ್ ಕಾರ್ಯಕ್ರಮ ಮಾಡಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ ಬಹುತೇಕರು ನಾಳೆ ಮಂಗಳವಾರ (ಡಿಸೆಂಬರ್ 06) ಓಪನಿಂಗ್ ಆದರೂ ಅಚ್ಚರಿಯಿಲ್ಲ ಎಂದು ಹೇಳುತ್ತಿದ್ದಾರೆ. ಜನಾರ್ದನ ರೆಡ್ಡಿ ವಾಸವಿರುವ ಬೃಹತ್ ಬಂಗ್ಲೆ ಮೂರು ಅಂತಸ್ತಿನಿಂದ ಕೂಡಿದ್ದು, ಹೈಫೈ ಮನೆಯ ಸೌಂದರ್ಯ ಯಾವ ಸಿನಿಮಾದ ಸೆಟ್‌ಗೂ ಕಡಿಮೆ ಇಲ್ಲವೆಂಬಂತೆ ಇದೆ. ಮನೆಯಲ್ಲಿ ಐದು ಬೆಡ್ ರೂಂ, ಮೂರು ಹಾಲ್, ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆಯನ್ನು ಕಾಣಬಹುದಾಗಿದೆ.
ಅಲ್ಲದೇ ಜನರೊಂದಿಗೆ ಮಾತುಕತೆ ನಡೆಸಲು ಹೊರಗೆ ದೊಡ್ಡ ಹಾಲ್ ನಿರ್ಮಾಣ ಮಾಡಿದ್ದಾರೆ. ಆಪ್ತವಾಗಿರುವ ಆಯ್ದ ಜನರೊಂದಿಗೆ ಮಾತನಾಡಲು ಪ್ರತ್ಯೇಕ ಕೋಣೆಯನ್ನು ನಿರ್ಮಿಸಲಾಗಿದೆ. ಕೊಪ್ಪಳ ರಸ್ತೆಯಲ್ಲಿ ಮೂರು ಹೆಕ್ಟೇರ್ ಪ್ರದೇಶದಲ್ಲಿರುವ ಮನೆ ಖರೀದಿ ಮಾಡಿದ್ದು, ಇಡೀ ಲೇಔಟ್ ಅನ್ನು ಬಾಡಿಗೆ ಪಡೆಯಲಾಗಿದೆ. ಹೀಗೆ ಮನೆ ನಿರ್ಮಾಣ ಮಾಡುವ ನೆಪದಲ್ಲಿ ಗಂಗಾವತಿಯಿಂದಲೇ ಸ್ಪರ್ಧೆ ಮಾಲು ಜನಾರ್ದನ ರೆಡ್ಡಿ ಪ್ಲಾನ್ ಮಾಡಿದ್ದಾರಾ? ಎನ್ನುವ ಪ್ರಶ್ನೆಗಳು ಎದ್ದಿವೆ.