ಯೋಗ್ಯತೆ ಇರುವ ಯಾರು ಬೇಕಾದರೂ ಕರ್ನಾಟಕ ಸಿಎಂ ಆಗಬಹುದು: ಸಿ.ಟಿ ರವಿ
ಕೊಪ್ಪಳ, ಅಕ್ಟೋಬರ್ 21: ಸಮಗ್ರ ಕರ್ನಾಟಕದ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಕೊಪ್ಪಳ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ವಿಜಯಪುರ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.
ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ಸಿಎಂ ಯಡಿಯೂರಪ್ಪ ಏನಂದ್ರು ಗೊತ್ತಾ?
ಬಸನಗೌಡ ಪಾಟೀಲ್ ಯತ್ನಾಳರಷ್ಟು ಬುದ್ಧಿವಂತ ನಾನಲ್ಲ, ನಾನು ಪಕ್ಷ ಹಾಗೂ ಜನರ ನೆಲೆಯಲ್ಲಿ ಕೆಲಸ ಮಾಡುವವನು. ಕರ್ನಾಟಕ ಏಕೀಕರಣದ ಆಶಯಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು. ಸಮಗ್ರ ಕರ್ನಾಟಕಕ್ಕೆ ನಾಯಕತ್ವ ಕೊಡುವ ಸಾಮರ್ಥ್ಯ ಉತ್ತರ ಕರ್ನಾಟಕಕ್ಕೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕ ಯತ್ನಾಳ್ ಅವರೊಂದಿಗೆ ಮಾತಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.
ಉಪ ಚುನಾವಣೆ ಪ್ರಚಾರದಲ್ಲಿ ಮೀರ್ ಸಾಧಿಕ್ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಂದು ಸ್ಥಾನ ಗೆದ್ದಿದೆ. ಒಂದು ಬಂದಿದ್ದಕ್ಕೆ ಸಭೆ ಸೇರಿ ಕಾಂಗ್ರೆಸ್ ಜೊತೆ ಸೇರಿ ಹಾಳಾಗಿದ್ದೇವೆ, ಜೆಡಿಎಸ್ ಜೊತೆ ಸೇರಿ ಹಾಳಾಗಿದ್ದೇವೆ ಎಂದು ಹೇಳಿದವರು ಯಾರು? ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಇದಕ್ಕೆ ಸೂಕ್ತವಾಗಿ ಸರ್ಕಾರ ಸ್ಪಂದಿಸುತ್ತಿದೆ. ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ, ಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದಾರೆ ಎಂದರು.
ಪ್ರವಾಹ ಪ್ರದೇಶಗಳಲ್ಲಿ ತ್ವರಿತ ಗತಿಯಲ್ಲಿ ಪರಿಹಾರ ನೀಡುವ ಕೆಲಸವನ್ನು ಎಲ್ಲರೂ ಮಾಡುತ್ತಿದ್ದಾರೆ. ಇಂದು ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ವೀಕ್ಷಣೆ ಮಾಡುತ್ತಿದ್ದು, ನೆರೆ ಪರಿಹಾರದ ನಷ್ಟವನ್ನು ಕೇಂದ್ರ ಸರ್ಕಾರ ನೀಡುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು.
ವಿಪಕ್ಷ ಕಾಂಗ್ರೆಸ್ ನವರು ನಿರೀಕ್ಷಿತ ಮಟ್ಟದಲ್ಲಿ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ವಿರೋಧಿಸುತ್ತಿದ್ದು, ಅವರದ್ದು ಗ್ರಾಮೋಫೋನ್ ಕ್ಯಾಸೆಟ್ ಇದ್ದಂತೆ, ಯುಪಿಎ ಕೊಟ್ಟ ಪರಿಹಾರಕ್ಕಿಂದ ನಾಲ್ಕು ಪಟ್ಟು ಹೆಚ್ಚು ಎನ್‍ಡಿಎ ಸರ್ಕಾರ ನೀಡಿದೆ ಎಂದು ಸಿ.ಟಿ ರವಿ ತಿರುಗೇಟು ನೀಡಿದರು.