ಆಗ ಕಾರು ಚಾಲಕ, ಈಗ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರಿ
ಕೊಪ್ಪಳ, ಏಪ್ರಿಲ್ 10 : ಅವರು ಹಲವು ವರ್ಷಗಳಿಂದ ಕಾರು ಓಡಿಸುತ್ತಿದ್ದರು. ನೂರಾರು ಯುವಕರಿಗೆ ಕಾರಿನ ಡ್ರೈವಿಂಗ್ ಹೇಳಿಕೊಟ್ಟಿದ್ದಾರೆ. ಈಗ ಲಾಕ್ ಡೌನ್ ಪರಿಣಾಮ ಕಾರು ಮನೆಯಲ್ಲಿಯೇ ನಿಂತಿದೆ. ಆದರೆ, ಅವರು ಜೀವನ ನಿರ್ವಹಣೆಗಾಗಿ ಹೊಸ ದಾರಿ ಹುಡುಕಿಕೊಂಡಿದ್ದಾರೆ.
Recommended Video
ಹೌದು, ಇದು ಕೊಪ್ಪಳ ಜಿಲ್ಲೆಯ ಹುನುಮಸಾಗರದ ಚನ್ನಬಸಯ್ಯ ಹಿರೇಮಠ ಅವರ ಕಥೆ. ಕಾರು ಚಾಲಕರಾಗಿರುವ ಚನ್ನಬಸಯ್ಯ ಈಗ ಕೆಲಸ ಕಳೆದುಕೊಂಡಿದ್ದಾರೆ. ಜೀವನ ನಿರ್ವಹಣೆಗಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.
ಕುಟುಂಬ ನಿರ್ವಹಣೆಗೆ ಚನ್ನಬಸಯ್ಯ ಕಾರು ಚಾಲನೆ ಮಾಡುತ್ತಿದ್ದರು. ಪ್ರತಿನಿತ್ಯ 500 ರಿಂದ 600 ರೂ. ಸಂಪಾದಿಸುತ್ತಿದ್ದರು. ಆದರೆ, ಈಗ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಈ ಮೂಲಕ ಪ್ರತಿನಿತ್ಯ 300 ರೂ. ಗಳಿಸುತ್ತಿದ್ದಾರೆ.

ಲಾಕ್ ಡೌನ್ ಪರಿಣಾಮ ಕಾರುಗಳ ಸಂಚಾರ ಸ್ಥಗಿತಗೊಂಡ ಬಳಿಕ ಜೀವನ ನಿರ್ವಹಣೆ ಬಗ್ಗೆ ಚನ್ನಬಸಯ್ಯ ಚಿಂತನೆ ನಡೆಸಿದರು. ಆಗ ಅವರು ತರಕಾರಿ ವ್ಯಾಪಾರದ ಬಗ್ಗೆ ಆಲೋಚಿಸಿದರು. ತಳ್ಳುಗಾಡಿ ಮೂಲಕ ವ್ಯಾಪಾರ ಆರಂಭಿಸಿದರು.
ಚನ್ನಬಸಯ್ಯ ತಾವೇ ಹೊಲಕ್ಕೆ ಹೋಗಿ ರೈತರಿಂದ ತರಕಾರಿ ಖರೀದಿ ಮಾಡುತ್ತಾರೆ. ರೈತರಿಂದ ನೇರವಾಗಿ ತರಕಾರಿಕೊಳ್ಳುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ತರಕಾರಿ ಮಾರುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
"ನನ್ನ ವೃತ್ತಿ ಬದಲಾಗಿಲ್ಲ. ಆಗಲೂ ನಾಲ್ಕು ಗಾಲಿ, ಈಗಲೂ ನಾಲ್ಕು ಗಾಲಿ. ಆವಾಗ ಡೀಸೆಲ್ ಗಾಡಿ ಓಡುಸುತ್ತಿದ್ದೆ. ಈಗ ಡೀಸೆಲ್ ಇಲ್ಲದ ಗಾಡಿಯನ್ನು ನಾನೇ ತಳ್ಳಿಕೊಂಡು ಹೋಗುತ್ತಿದ್ದೇನೆ" ಎಂದು ಚನ್ನಬಸಯ್ಯ ಹೇಳಿದ್ದಾರೆ.












Click it and Unblock the Notifications