ಶಿಕಾರಿಪುರದಲ್ಲಿ ಸ್ಪರ್ಧೆಗೆ ಬಿಜಿಪಿಯಲ್ಲೇ ವಿರೋಧ? ವಿಜಯೇಂದ್ರ ಉತ್ತರವೇನು?
ಕೊಪ್ಪಳ, ಜುಲೈ 25: ಶಿಕಾರಿಪುರದಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಪಕ್ಷ ಮತ್ತು ಹೈಕಮಾಂಡ್ ನಿರ್ಧರಿಸಲಿದೆ, ಈಗಾಗಲೇ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ, ಕೇವಲ ಶಿಕಾರಿಪುರ ಮಾತ್ರವಲ್ಲ, ಎಲ್ಲಾ 224 ಕ್ಷೇತ್ರಗಳ ಬಗ್ಗೆ ಪಕ್ಷದ ಮುಖಂಡರುಗಳೆ ತೀರ್ಮಾನ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಸೋಮವಾರ ಕೊಪ್ಪಳದ ಇಳಕಲ್‌ನಲ್ಲಿ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಕೊಪ್ಪಳದ ಖ್ಯಾತ ಗವಿಮಠಕ್ಕೆ ಆಗಮಿಸಿ ಗವಿಮಠದ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ, ಅಲ್ಲೇ ಪ್ರಸಾದ ಸ್ವೀಕರಿಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು, ಶಿಕಾರಿಪುರದಲ್ಲಿ ನಿಮ್ಮ ಸ್ಪರ್ಧೆಗೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗುತ್ತಿದಿಯೇ ಎಂಬ ಪ್ರಶ್ನೆಗೆ ಕೇಳಿದ್ದಕ್ಕೆ, "ಶಿಕಾರಿಪುರದಲ್ಲಿ ಸ್ಪರ್ಧಿಸುವ ಬಗ್ಗೆ ಒಪ್ಪಿಗೆ-ವಿರೋಧ ಎಂಬ ಪ್ರಶ್ನೆಯಿಲ್ಲ, ನನ್ನ ಕ್ಷೇತ್ರ ಅಥವಾ ಬೇರೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ವಿಚಾರದಲ್ಲಿರಬಹುದು ಇಡೀ ರಾಜ್ಯದ ಎಲ್ಲಾ ಕ್ಷೇತ್ರಗಳ ಬಗ್ಗೆ ಪಕ್ಷದ ಮುಖಂಡರು ಕುಳಿತು ಆಯ್ಕೆ ಮಾಡಲಿದ್ದಾರೆ" ಎಂದರು.
ಶಿಕಾರಿಪುರ ಕ್ಷೇತ್ರದ ಜೊತೆಗೆ ಯಡಿಯೂರಪ್ಪರಿಗೆ ನಿಕಟ ಸಂಪರ್ಕವಿದೆ, ಅಲ್ಲಿನ ಕಾರ್ಯಕರ್ತರು ಮುಖಂಡರು ಹಾಗೂ ಸಾರ್ವಜನಿಕರ ಒತ್ತಾಸೆಯಂತೆ ಕ್ಷೇತ್ರ ಬಿಟ್ಟು ಕೊಡುವ ಘೋಷಣೆ ಮಾಡಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ಕೇಂದ್ರದ ನಾಯಕರು, ಪಕ್ಷ ನಿರ್ಧರಿಸಬೇಕು. ಸೂಕ್ತ ಸಂದರ್ಭದಲ್ಲಿ ಪಕ್ಷವೇ ಆಯ್ಕೆ ಮಾಡಲಿದೆ, ಇದರ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ವಿಜಯೇಂದ್ರ ತಿಳಿಸಿದ್ದಾರೆ.

40 ವರ್ಷಗಳ ಕಾಲ ಪಕ್ಷಕ್ಕೆ ದುಡಿದಿರುವವರಿಗೆ ಉತ್ತರಾಧಿಕಾರಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿಲ್ಲವೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, "ಇದು ಭಾರತೀಯ ಜನತಾ ಪಕ್ಷ, ರಾಷ್ಟ್ರೀಯ ಪಕ್ಷವಾಗಿದೆ, ಉತ್ತರಾಧಿಕಾರಿ ಎಂಬ ಪ್ರಶ್ನೆ ಉದ್ಭವವಾಗುವುದಿಲ್ಲ, ಯಡಿಯೂರಪ್ಪ 30-40 ವರ್ಷ ಯಡಿಯೂರಪ್ಪ ಪಕ್ಷಕ್ಕೆ ತಮ್ಮ ಜೀವನವನ್ನೇ ಧಾರೆ ಎಳೆದಿದ್ದಾರೆ, ಪಕ್ಷವೂ ಅವರಿಗೆ ಎಲ್ಲಾ ರೀತಿಯ ಸ್ಥಾನಮಾನ, ಗೌರವವನ್ನು ನೀಡಿದೆ. ಹಾಗಾಗಿ ಬರುವಂತಹ ದಿನಗಳಲ್ಲಿ ಅವರ ಶಕ್ತಿ ಬಳಸಿಕೊಂಡು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇವೆ" ಎಂದು ವಿಜಯೇಂದ್ರ ತಿಳಿಸಿದರು.
ಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, "ಎಲ್ಲಾ ಪಕ್ಷಗಳಿಗೂ ಅವರದೇ ಆದಂತಹ ವಿಶ್ವಾಸಗಳಿವೆ, ಆದರೆ ನಮಗೆ ವಿಶ್ವಾಸವಿದೆ, ಕೇಂದ್ರದಲ್ಲಿ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ, ಯಡಿಯೂರಪ್ಪ, ಕಟೀಲ್, ಈಶ್ವರಪ್ಪ ಇದಾರೆ, ಎಲ್ಲರೂ ಸೇರಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದ್ದಾರೆ" ಎಂದರು.

ಕಾಂಗ್ರೆಸ್‌ನಲ್ಲಿ ಸಿಎಂ ವಿಚಾರದ ಒಳಜಗಳದ ಬಗ್ಗೆ ಮಾತನಾಡಿ, "ಇದೆಲ್ಲವನ್ನು ರಾಜ್ಯದ ಜನತೆ ಗಮನಿಸುತ್ತಿದೆ, ಚುನಾವಣೆಗೂ ಮುನ್ನವೇ ಈ ರೀತಿ ಕಿತ್ತಾಡಿಕೊಳ್ಳುತ್ತಿರುವುದು ಹಾಸ್ಯಸ್ಪದ. ಅವರು ಕಿತ್ತಾಡಿಕೊಂಡರೆ ಸಂತೋಷ. ಆದರೆ ಬಿಜೆಪಿಗೆ ಅವರ ಜಗಳದ ಮೇಲೆ ಅಧಿಕಾರಕ್ಕೆ ಬರಬೇಕೆಂದೇನಿಲ್ಲ, ಕೇಂದ್ರ ಹಾಗೂ ರಾಜ್ಯದ ಸಾಧನೆಯ ಆಧಾರದ ಮೇಲೆ ಅಧಿಕಾರಕ್ಕೆ ಬರುತ್ತೇವೆ" ಎಂದರು.
ಮುಂದಿನ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸಬೇಕೆಂದುಕೊಂಡಿದ್ದೀರಾ ಎಂದು ಕೇಳಿದ್ದಕ್ಕೆ, ಪಕ್ಷ ಅನುಮತಿ ನೀಡಿದರೆ ಮಾತ್ರ ಸ್ಪರ್ಧಿಸುತ್ತೇನೆ ಎಂದು ಹೇಳಿ ಹೊರಟರು.












Click it and Unblock the Notifications