ಅನ್ನಭಾಗ್ಯ; ಕೊಪ್ಪಳದಲ್ಲಿ 20,560 ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ಇಲ್ಲ
ಕೊಪ್ಪಳ, ಜುಲೈ 13; ಕರ್ನಾಟಕ ಸರ್ಕಾರ ಈಗಾಗಲೇ 'ಅನ್ನಭಾಗ್ಯ' ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದೆ. ಕೊಪ್ಪಳ ಜಿಲ್ಲೆಯಲ್ಲಯೂ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಡಿ ಮೂಲಕ ಹಣ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 5 ಕೆಜಿ ಆಹಾರಧಾನ್ಯದ ಬದಲು ಕೆಜಿಗೆ 34 ರೂ. ನಂತೆ ನೇರ ನಗದು ವರ್ಗಾವಣೆ ಮಾಡಲು ಸರ್ಕಾರವು 1827.33 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಈ ತಿಂಗಳೊಳಗೆ ಪಡಿತರ ಚೀಟಿದಾರರ ಮುಖ್ಯಸ್ಥರು ಹೊಂದಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಲಿದೆ.

ಆಧಾರ್ ಲಿಂಕ್ ಆಗದೇ ಇರುವ, ಸಕ್ರಿಯ ಬ್ಯಾಂಕ್ ಖಾತೆ ಇಲ್ಲದೇ ಇರುವ ಮತ್ತು ಬ್ಯಾಂಕ್ ಇ-ಕೆವೈಸಿ ಆಗದೇ ಇರುವ ಫಲಾನುಭವಿಗಳು ಜುಲೈ 20ರೊಳಗಾಗಿ ಸರಿಪಡಿಸಿಕೊಳ್ಳಲು ಆಹಾರ ಇಲಾಖೆಯ ಉಪ ನಿರ್ದೇಶಕರು ಜನರಲ್ಲಿ ಮನವಿ ಮಾಡಿದ್ದಾರೆ.
ಯೋಜನೆ ಜಾರಿಗೆ ಸಿದ್ಧತೆ; ಕೊಪ್ಪಳ ಜಿಲ್ಲಾಡಳಿತ 'ಅನ್ನಭಾಗ್ಯ' ಯೋಜನೆಯಡಿ 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ ದರ ನಿಗದಿಪಡಿಸಿದಂತೆ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ತಲಾ 170 ರೂ. ಹಣವನ್ನು ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ಪಾವತಿಗೆ ಸಿದ್ಧತೆ ಮಾಡಿಕೊಂಡಿದೆ.
ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ, "ಸರ್ಕಾರವು ಅನ್ನಭಾಗ್ಯ ಯೋಜನೆ ಜಾರಿ ಮಾಡಿ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆಜಿ ಆಹಾರಧಾನ್ಯಯೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯ ಸೇರಿಸಿ ಪ್ರತಿ ಮಾಸಿಕ ಪ್ರತಿ ಫಲಾನುಭವಿಗೆ 10 ಕೆಜಿ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿದಂತೆ ಕ್ರಮ ವಹಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿಒಟ್ಟು 2,91,719 ಆದ್ಯತಾ ಪಡಿತರ ಚೀಟಿ ಇದ್ದು, ಒಟ್ಟು 10,38,361 ಮಂದಿ ಫಲಾನುಭವಿಗಳಿದ್ದಾರೆ. ಅಂತ್ಯೋದಯ ಅನ್ನಯೋಜನೆ ಪಡಿತರ ಚೀಟಿಗಳ ಸಂಖ್ಯೆ 37,573 ಇದ್ದು 1,50,497 ಮಂದಿ ಫಲಾನುಭವಿಗಳಿದ್ದಾರೆ. ಎಪಿಎಲ್ ಕಾರ್ಡ್‌ದಾರರು ಜಿಲ್ಲೆಯಲ್ಲಿ 27,283 ಇದ್ದು 87,066 ಮಂದಿ ಫಲಾನುಭವಿಗಳಿದ್ದಾರೆ.
ಜಿಲ್ಲಾದ್ಯಂತ ಒಟ್ಟು 20,560 ಪಡಿತರ ಚೀಟಿದಾರರಿಗೆ ಬ್ಯಾಂಕ್ ಖಾತೆಗಳಿಲ್ಲ. ಈಗಾಗಲೇ ಬ್ಯಾಂಕ್ ಖಾತೆ ಇಲ್ಲದ ಹಾಗೂ ಆಧಾರ್ ಲಿಂಕ್ ಆಗದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿ ಬ್ಯಾಂಕ್ ಖಾತೆ ಮಾಡಿಸುವಂತೆ ಸೂಚನೆ ನೀಡಲಾಗಿದೆ.
ಕೆಲವರು ಬ್ಯಾಂಕ್ ಖಾತೆ ಮಾಡಿಸಿಕೊಂಡಿದ್ದರೂ ಆಧಾರ್ ಲಿಂಕ್ ಆಗದ ಕಾರಣ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಸಾಧ್ಯವಿಲ್ಲ ಎಂಬುದು ಪರಿಶೀಲನೆ ವೇಳೆ ಕಂಡು ಬಂದಿದೆ. ಬ್ಯಾಂಕ್ ಖಾತೆ ಇಲ್ಲದವರು ಹಾಗೂ ಬ್ಯಾಂಕ್ ಖಾತೆ ಇದ್ದರೂ ಆಧಾರ್ ಲಿಂಕ್ ಆಗದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿರುವ ಆಹಾರ ಇಲಾಖೆ ಅಧಿಕಾರಿಗಳು ಖಾತೆ ಮಾಡಿಸುವಂತೆ ಸ್ಥಳೀಯ ಅಧಿಕಾರಿಗಳ ಹಾಗೂ ನ್ಯಾಯ ಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಸೂಚಿಸುತ್ತಿದ್ದಾರೆ.
'ಅನ್ನಭಾಗ್ಯ' ಯೋಜನೆಯಡಿ ಅಕ್ಕಿಯನ್ನು ಸರ್ಕಾರ ಪೂರೈಕೆ ಮಾಡಲಿದೆ. ಇದಕ್ಕಾಗಿ ಅಕ್ಕಿ ಪೂರೈಕೆಗೆ ಟೆಂಡರ್ ಕರೆದಿದೆ. ಈ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಆಹಾರ ಧಾನ್ಯ ಸರಬರಾಜು ಮಾಡುವ ತನಕ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 5 ಕೆಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆಜಿಗೆ ರೂ. 34 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ DBT ಮೂಲಕ ಹಣವನ್ನು ವರ್ಗಾಯಿಸಲಾಗುತ್ತದೆ.












Click it and Unblock the Notifications