ವಿರೂಪಾಪುರದಲ್ಲಿ 544 ಪ್ರವಾಸಿಗರ ರಕ್ಷಣೆ; ಎಚ್ಚರಿಕೆ ನಿರ್ಲಕ್ಷಿಸಿದ್ದ ಹೋಟೆಲ್, ರೆಸಾರ್ಟ್ ಮಾಲೀಕರ ಮೇಲೆ ಕ್ರಮ
ಕೊಪ್ಪಳ, ಆಗಸ್ಟ್ 14: ತುಂಗಭದ್ರಾ ನೀರು ಹರಿದು ವಿರೂಪಾಪುರ ಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಸುಮಾರು 544 ಪ್ರವಾಸಿಗರನ್ನು ಎನ್ ಡಿಆರ್ ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ. ಆದರೆ ಪ್ರವಾಹದ ಮುನ್ಸೂಚನೆ ಕೊಟ್ಟಿದ್ದರೂ ಅದನ್ನು ನಿರ್ಲಕ್ಷಿಸಿದ್ದ ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ವಿರೂಪಾಪುರ ಗಡ್ಡೆಯಲ್ಲಿ ತುಂಗಭದ್ರಾ ನೀರು ಹರಿದು 27 ವಿದೇಶಿಗರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚಿನ ಜನರು ಸಿಲುಕಿದ್ದರು. ಅವರನ್ನು ಎನ್ ಡಿಆರ್ ಎಫ್ ಸಿಬ್ಬಂದಿ ಸತತ ಎರಡು ದಿನಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದರು. ಬೋಟ್, ಹೆಲಿಕಾಪ್ಟರ್ ಮೂಲಕ ಪ್ರವಾಸಿಗರನ್ನು ರಕ್ಷಿಸಲಾಗಿತ್ತು. ಮೊದಲು ಸುಮಾರು ಮುನ್ನೂರು ಮಂದಿ ಪ್ರವಾಸಿಗರು ಸಿಲುಕಿರುವುದಾಗಿ ಅಂದಾಜಿಸಲಾಗಿದ್ದು, ನಂತರ ಪ್ರವಾಸಿಗರ ಸಂಖ್ಯೆ ಐನೂರನ್ನು ದಾಟಿತ್ತು.
ಆದರೆ ಪ್ರವಾಹದ ಕುರಿತು ಮುನ್ನವೇ ತಿಳಿದಿದ್ದರೂ ಅದನ್ನು ಹೋಟೆಲ್, ರೆಸಾರ್ಟ್ ಮಾಲೀಕರು ನಿರ್ಲಕ್ಷಿಸಿದ್ದರು ಎನ್ನಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ, ಶನಿವಾರವೇ ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೂ ಅದನ್ನು ನಿರ್ಲಕ್ಷಿಸಲಾಗಿತ್ತು.

ವಾರಾಂತ್ಯವಾದ್ದರಿಂದ ಪ್ರವಾಸಿಗರು ಹೆಚ್ಚು ಬರಲಿದ್ದು, ನಷ್ಟ ಉಂಟಾಗುತ್ತದೆ ಎಂದು ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರು ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದು, ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಕೊಪ್ಪಳ ಜಿಲ್ಲಾಧಿಕಾರಿ ಸಿ ಸುನಿಲ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications