ಪಶ್ಚಿಮ ಬಂಗಾಳ ಚುನಾವಣೆ ವಿಧಾನಸಭೆ ಚುನಾವಣೆ : ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
ಕೋಲ್ಕತ್ತಾ, ಮಾರ್ಚ್ 10: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿ ಹತ್ತಾರು ನಾಯಕರು ಈ ಪಟ್ಟಿಯಲ್ಲಿದ್ದಾರೆ.
ಎಂಟು ಹಂತದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮೇ 2 ರಂದು ಫಲಿತಾಂಶ ಹೊರಬರಲಿದೆ. ಸಧ್ಯಕ್ಕೆ ಬಿಜೆಪಿಯು ಮೊದಲ ಹಂತದ ವಿಧಾನಸಭೆ ಚುನಾವಣೆಗೆ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

ಪಟ್ಟಿಯಲ್ಲಿ ನರೇಂದ್ರ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಅಲ್ಲದೆ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಅರ್ಜುನ್ ಮುಂಡಾ, ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ, ಕೈಲಾಶ್ ವಿಜಯ ವರ್ಗೀಯ, ಶಿವಪ್ರಕಾಶ, ಮುಕುಲ್ ರಾಯ್, ದಿಲೀಪ್ ಘೋಷ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ರೂಪಾ ಗಂಗೂಲಿ ಸ್ಟಾರ್ ಪ್ರಚಾರಕರಿದ್ದಾರೆ.
ಬಿಜೆಪಿಯು 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೇ ಬಿಜೆಪಿ ಸೇರಿಕೊಂಡಿರುವ ಸುವೇಂದು ಅಧಿಕಾರಿ ನಂದಿಗ್ರಾಮದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಲಾಗಿದೆ.
ಮಾರ್ಚ್ 27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಏಪ್ರಿಲ್ 29ಕ್ಕೆ ಅಂತಿಮ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭೆಗಳಲ್ಲಿ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದೆ. 5 ರಾಜ್ಯಗಳಲ್ಲಿನ 824 ಕ್ಷೇತ್ರಗಳಲ್ಲಿ 18.68 ಕೋಟಿ ಮತದಾರರಿದ್ದಾರೆ. ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950 ಬಳಸಲು ಸೂಚಿಸಲಾಗಿದೆ.
ಮೊದಲ ಹಂತ: ಮಾರ್ಚ್ 27 ಎರಡನೇ ಹಂತ: ಏಪ್ರಿಲ್ 1 ಮೂರನೇ ಹಂತ: ಏಪ್ರಿಲ್ 6 ನಾಲ್ಕನೇ ಹಂತ: ಏಪ್ರಿಲ್ 10 ಐದನೇ ಹಂತ: ಏಪ್ರಿಲ್ 17 ಆರನೇ ಹಂತ: ಏಪ್ರಿಲ್ 22 ಏಳನೇ ಹಂತ: ಏಪ್ರಿಲ್ 26 ಎಂಟನೇ ಹಂತ: ಏಪ್ರಿಲ್ 29ರಂದು ನಡೆಯಲಿದೆ.












Click it and Unblock the Notifications