ತ್ರಿಪುರಾ ಚುನಾವಣೆ: ಟಿಎಂಸಿಯು ಬಿಜೆಪಿಯನ್ನು ಸೋಲಿಸಲಿದೆ ಎಂದ ಅಭಿಷೇಕ್
ಅಗರ್ತಲಾ, ನವೆಂಬರ್ 23: ತ್ರಿಪುರಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯನ್ನು ಟಿಎಂಸಿ ಸೋಲಿಸಲಿದೆ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳಂತೆ ಹೆದರಿ ಯಾವುದೇ ಕಾರಣಕ್ಕೂ ಪಲಾಯನ ಮಾಡುವುದಿಲ್ಲ , ತ್ರಿಪುರಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಎಂಸಿ ಮೇಲುಗೈ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಕೇವಲ ಮೂರು ತಿಂಗಳ ಹಿಂದಷ್ಟೇ ತ್ರಿಪುರಾ ಪ್ರವೇಶಿಸಿದೆವು ಇದರಿಂದ ಬಿಜೆಪಿ ಗಾಬರಿಗೊಂಡಿದೆ ಎಂದಿದ್ದಾರೆ. ಬಿಜೆಪಿಯು ಪ್ರತಿಪಕ್ಷ ನಾಯಕರ, ಕಾರ್ಯಕರ್ತರ ಹಾಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಜನರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸುತ್ತಿದೆ. ಈ ಮೊದಲು ತ್ರಿಪುರಾದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳಿಗೆ ಬಿಜೆಪಿ ವಿರುದ್ಧ ಹೋರಾಡಲು ಧೈರ್ಯ ಹಾಗೂ ಇಚ್ಛಾಶಕ್ತಿ ಎರಡರ ಕೊರತೆ ಇದೆ ಎಂದು ಹೇಳಿದ್ದಾರೆ.
ನವೆಂಬರ್ 25ಕ್ಕೆ ತ್ರಿಪುರಾದ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದೆ. 334 ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಎದುರಾಳಿಗಳು ಇಲ್ಲದ ಕಾರಣ 112 ಸ್ಥಾನಗಳಲ್ಲಿ ಬಿಜೆಪಿ ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಪ್ರಚಾರದ ವೇಳೆ ಬಿಜೆಪಿ ಹಾಗೂ ಟಿಎಂಸಿ ನಡುವೆ ಹಲವು ಬಾರಿ ಘರ್ಷಣೆ ನಡೆದಿದೆ.
ತ್ರಿಪುರಾದಲ್ಲಿ ಪ್ರಚಾರಕ್ಕೆ ತೆರಳಿದ್ದ ಟಿಎಂಸಿ ಯುವ ಘಟಕದ ಅಧ್ಯಕ್ಷೆ ಸಯಾನಿ ಘೋಷ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಬಳಿಕ ಅಭಿಷೇಕ್ ಬ್ಯಾನರ್ಜಿ ಸೋಮವಾರ ರಾಜ್ಯಕ್ಕೆ ಬಂದಿದ್ದಾರೆ.
ನಮ್ಮ 11 ಮಂದಿ ಮಹಿಳಾ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆದಿದೆ ನಾವೂ ಕೂಡ ದೂರು ನೀಡಿದ್ದು, 100 ಎಫ್‌ಐಆರ್ ದಾಖಲಿಸಲಾಗಿದೆ. ಅಪರಾಧಿಗಳನ್ನು ಬಂಧಿಸುವುದನ್ನು ಬಿಟ್ಟು ಘೋಷಣೆ ಕೂಗಿದ್ದಕ್ಕಾಗಿ ಸಯಾನಿ ಘೋಷ್ ಅವರನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಮಹ್ರಮ್ ಶೇಖ್ರನ್ನು ಅವರ ಮನೆಯ ಹೊರಗೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ದುರ್ಘಟನೆ ನಡೆದಿದೆ.
ತಡರಾತ್ರಿ ಹೊತ್ತಿಗೆ ಮಹ್ರಮ್ ಶೇಖ್ ಮನೆಗೆ ಬಂದ ದುಷ್ಕರ್ಮಿಗಳು ಅವರಿಗೆ ಗುಂಡುಹೊಡೆದಿದ್ದಾರೆ. ನಂತರ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಪ್ರಯೋಜನ ಆಗಲಿಲ್ಲ.
ಮರುದಿನ ಮುಂಜಾನೆ ಹೊತ್ತಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಎಂಬಿತ್ಯಾದಿ ವಿಚಾತವಾಗಿ ತನಿಖೆ ಪ್ರಾರಂಭವಾಗಿದೆ.
ಪಶ್ಚಿಮಬಂಗಾಳದಲ್ಲಿ ಹಿಂಸಾಚಾರ ಹೊಸದಲ್ಲ. ಯಾವುದಾದರೂ ಚುನಾವಣೆ ಬಂತೆಂದರೆ ಅದರೊಂದಿಗೇ ಅಲ್ಲಿ ಹಿಂಸಾಚಾರವೂ ಶುರುವಾಗುತ್ತದೆ. ಕಳೆದ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಭಾರಿ ಪ್ರಮಾಣದ ಗಲಭೆ ಉಂಟಾಗಿತ್ತು.
ಮನೆಗಳಿಗೆಲ್ಲ ಬೆಂಕಿ ಇಡಲಾಗಿತ್ತು. ಬಿಜೆಪಿ ನಮ್ಮ ಪಕ್ಷದ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಇನ್ನು ಪಶ್ಚಿಮಬಂಗಾಳದಲ್ಲಿ ನೇರ ಸ್ಪರ್ಧೆ, ವೈರತ್ವ ಇರುವುದು ಬಿಜೆಪಿ ಮತ್ತು ಟಿಎಂಸಿ ನಡುವೆ. ಈ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರ ಮೇಲೆ ಹಲ್ಲೆಗಳು ಜಾಸ್ತಿ. ಅದಾದ ಬಳಿಕ ಪರಸ್ಪರರ ಮೇಲೆ ಆರೋಪ ತೀರ ಸಾಮಾನ್ಯವಾಗಿಬಿಟ್ಟಿದೆ.