ಟಿಎಂಸಿಯಲ್ಲಿ ಅತ್ತೆ, ಅಳಿಯನಿಗೆ ಮಾತ್ರ ಮಾತನಾಡಲು ಸ್ವಾತಂತ್ರ್ಯ: ಸುವೇಂದು ಅಧಿಕಾರಿ
ಕೋಲ್ಕತ್ತಾ, ಮಾರ್ಚ್ 12: ತೃಣಮೂಲ ಕಾಂಗ್ರೆಸ್‌ನಲ್ಲಿ ಮಾತನಾಡಲು ಅವಕಾಶವಿರುವುದು ಅತ್ತೆ ಹಾಗೂ ಅಳಿಯನಿಗೆ ಮಾತ್ರ ಎಂದು ನಂದಿಗ್ರಾಮ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ ಸುವೇಂದು ಟಿಎಂಸಿಯು ಖಾಸಗಿ ಕಂಪನಿಯಂತಾಗಿದೆ ಎಂದು ಟೀಕಿಸಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯಿಂದ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯಿಂದ ಸುವೇಂದು ಅಧಿಕಾರಿ ನಂದಿಗ್ರಾಮ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಸುವೇಂದು ಅಧಿಕಾರಿ ಒಂದು ಸಮಯದಲ್ಲಿ ಮಮತಾ ಬ್ಯಾನರ್ಜಿ ಆಪ್ತರಾಗಿದ್ದರು. ಅವರ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಏರ್ಪಟ್ಟಿದ್ದ ಕಾರಣ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು.

ತೃಣಮೂಲ ಕಾಂಗ್ರೆಸ್‌ನಲ್ಲಿ ಅತ್ತೆ, ಅಳಿಯನಿಗೆ ಮಾತ್ರ ಮಾತನಾಡುವ ಸ್ವಾತಂತ್ರ್ಯವಿದೆ, ಪಶ್ಚಿಮ ಬಂಗಾಳದಲ್ಲಿ ಉದ್ಯೋಗಾವಕಾಶಗಳ ಕೊರತೆ ಇದೆ. ಬದಲಾವಣೆ ತರುವುದಕ್ಕಾಗಿ ಟಿಎಂಸಿಯನ್ನು ಅಧಿಕಾರದಿಂದ ತೆರವುಗೊಳಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿಯು ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌ನಲ್ಲಿ ನಂಬಿಕೆ ಇರಿಸಿದೆ ಎಂದು ಹೇಳಿದ್ದಾರೆ.
ಮಾರ್ಚ್ 27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಏಪ್ರಿಲ್ 29ಕ್ಕೆ ಅಂತಿಮ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭೆಗಳಲ್ಲಿ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದೆ. 5 ರಾಜ್ಯಗಳಲ್ಲಿನ 824 ಕ್ಷೇತ್ರಗಳಲ್ಲಿ 18.68 ಕೋಟಿ ಮತದಾರರಿದ್ದಾರೆ. ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950 ಬಳಸಲು ಸೂಚಿಸಲಾಗಿದೆ.
ಮೊದಲ ಹಂತ: ಮಾರ್ಚ್ 27 ಎರಡನೇ ಹಂತ: ಏಪ್ರಿಲ್ 1 ಮೂರನೇ ಹಂತ: ಏಪ್ರಿಲ್ 6 ನಾಲ್ಕನೇ ಹಂತ: ಏಪ್ರಿಲ್ 10 ಐದನೇ ಹಂತ: ಏಪ್ರಿಲ್ 17 ಆರನೇ ಹಂತ: ಏಪ್ರಿಲ್ 22 ಏಳನೇ ಹಂತ: ಏಪ್ರಿಲ್ 26 ಎಂಟನೇ ಹಂತ: ಏಪ್ರಿಲ್ 29ರಂದು ನಡೆಯಲಿದೆ.












Click it and Unblock the Notifications