ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂಪಡೆಯುತ್ತೇವೆ: ಮಮತಾ ಬ್ಯಾನರ್ಜಿ
ಕೊಲ್ಕತ್ತಾ, ಜನವರಿ 04: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾನು ರೈತರ ಪರವಾಗಿದ್ದು, ಮಸೂದೆಗಳನ್ನು ಹಿಂಪಡೆಯುತ್ತೇನೆ ಎಂದಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ '' ನಾನು ರೈತರ ಪರವಾಗಿದ್ದೇನೆ ಮತ್ತು ದೇಶದ ಮತ್ತು ರೈತರ ಹಿತದೃಷ್ಟಿಯಿಂದ ಈ ಮೂರು ಮಸೂದೆಗಳನ್ನು ಹಿಂಪಡೆಯಲು ಬಯಸುತ್ತೇನೆ. ಮಸೂದೆಗಳು ಬರುವ ಮೊದಲೇ, ಅವರು ಗೋದಾಮುಗಳನ್ನು ತಯಾರಿಸಿದ್ದರು. ಅವರ ರಾಜಕೀಯ ಉದ್ದೇಶ ಸ್ಪಷ್ಟವಾಗಿದೆ ಮತ್ತು ಅದಕ್ಕಾಗಿಯೇ ಅವರು ಅದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿಲ್ಲ'' ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವರ ಊಟದ ಆಹ್ವಾನ ತಿರಸ್ಕರಿಸದ ರೈತ ಮುಖಂಡರು: ನೀವು ನಿಮ್ಮ ಆಹಾರ ಸೇವಿಸಿ, ನಾವು ನಮ್ಮ ಆಹಾರ ತಿನ್ನುತ್ತೇವೆ!
"ನಾವು ಒಂದು ಅಥವಾ ಎರಡು ದಿನಗಳ ಕಾಲ ವಿಧಾನಸಭೆ ಅಧಿವೇಶನವನ್ನು ನಡೆಸುತ್ತೇವೆ ಮತ್ತು ಅಲ್ಲಿ ನಾವು ಕೃಷಿ ಮಸೂದೆಗಳನ್ನು ಹಿಂಪಡೆಯಲು ನಿರ್ಣಯವನ್ನು ತರುತ್ತೇವೆ. ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲು ನಾವು ಪ್ರಯತ್ನಿಸುತ್ತೇವೆ. ಬಿಜೆಪಿ ಅದನ್ನು ಬೆಂಬಲಿಸುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ಇತರ ಪಕ್ಷಗಳು ಬೆಂಬಲಿಸುತ್ತವೆ ಎಂದು ನಾನು ನಿರೀಕ್ಷಿಸುತ್ತೇನೆ "ಎಂದು ಬ್ಯಾನರ್ಜಿ ಹೇಳಿದರು.
ಬ್ಯಾನರ್ಜಿ ಈ ಹಿಂದೆ ರೈತರಿಗೆ ಬೆಂಬಲ ನೀಡಿದ್ದರು ಮತ್ತು ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಭೇಟಿಯಾಗಲು ಸಂಸದರ ತಂಡವನ್ನೂ ಕಳುಹಿಸಿದ್ದರು. ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಅವರು ದೂರವಾಣಿಯಲ್ಲಿ ಕೂಡ ಮಾತನಾಡಿದರು.