"ದೀದಿ ಏಕಾಂಗಿಯಾಗಿ ಉಳಿಯುವುದು ಗ್ಯಾರಂಟಿ"
ಕೋಲ್ಕತ್ತಾ, ಡಿಸೆಂಬರ್ 19: "ಪಶ್ಚಿಮ ಬಂಗಾಳದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಷ್ಟರಲ್ಲಿ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಉಳಿಯುವುದು ಖಚಿತ" ಎಂದಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ. ಎರಡು ದಿನಗಳ ಕಾಲ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಅಮಿತ್ ಶಾ, ಶನಿವಾರ ಸುವೇಂದು ಅಧಿಕಾರಿ ಅವರನ್ನು ಬಿಜೆಪಿಗೆ ಸ್ವಾಗತಿಸಿದರು.
ಈ ಸಂದರ್ಭ ಟಿಎಂಸಿ ಕುರಿತು ಮಾತನಾಡಿದ ಅವರು, "ಪಕ್ಷದ ಹಿರಿಯ ಸದಸ್ಯರೆಲ್ಲರೂ ತೃಣಮೂಲ ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಮ್ಮ ಪಕ್ಷದ ಸದಸ್ಯರನ್ನು ಬಿಜೆಪಿ ಪಕ್ಷಾಂತರಕ್ಕೆ ಪ್ರಚೋದಿಸುತ್ತಿದೆ ಎಂದು ದೀದಿ ಆರೋಪಿಸುತ್ತಿದ್ದಾರೆ. ಆದರೆ ನಾನು ಒಂದು ವಿಷಯವನ್ನು ಅವರ ಬಳಿ ಕೇಳಬೇಕು, ಟಿಎಂಸಿ ರಚನೆ ವೇಳೆ ಕಾಂಗ್ರೆಸ್ ತೊರೆಯುವಾಗ ನಿಮಗೆ ಪಕ್ಷಾಂತರ ಅನಿಸಲಿಲ್ಲವೇ? ಇದು ಆರಂಭ ಅಷ್ಟೆ. ವಿಧಾನ ಸಭೆ ಚುನಾವಣೆ ಸಮಯ ಬರಲಿ, ಚುನಾವಣಾ ಅಖಾಡದಲ್ಲಿ ದೀದಿ ಒಬ್ಬರೇ ಒಬ್ಬರು ಉಳಿದುಕೊಳ್ಳುತ್ತಾರೆ" ಎಂದರು.
ಪಶ್ಚಿಮ ಬಂಗಾಳದ ಮಿಡ್ನಾಪುರ್ ನಲ್ಲಿ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಅವರು, "ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸೀಟುಗಳಿಂದ ಬಿಜೆಪಿ ಸರ್ಕಾರ ರಚಿಸಲಿದೆ" ಎಂದು ಆತ್ಮವಿಶ್ವಾಸದಿಂದ ಹೇಳಿದರು.

ರಾಜ್ಯದ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು "ಪ.ಬಂಗಾಳದ ಯುವಜನತೆಗೆ ಒಂದು ಪ್ರಶ್ನೆ ಕೇಳುತ್ತೇನೆ, ಪ.ಬಂಗಾಳದಲ್ಲಿ ಏಕೆ ಯಾವುದೇ ಅಭಿವೃದ್ಧಿಯಾಗಿಲ್ಲ? ಇಲ್ಲಿನ ರೈತರನ್ನು ಕೇಳುತ್ತೇನೆ, ಏಕೆ ನಿಮಗೆ ಮೋದಿಯಿಂದ ಬರುತ್ತಿರುವ ಆರು ಸಾವಿರ ರೂಪಾಯಿ ಸಿಗುತ್ತಿಲ್ಲ? ಈ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ" ಎಂದು ಹೇಳಿದರು. ಇದೇ ಸಂದರ್ಭ, ಬಿಜೆಪಿಯನ್ನು ಟಿಎಂಸಿ ಹೊರಗಿನವರು ಎಂಬಂತೆ ಬಿಂಬಿಸುತ್ತಿದೆ ಎಂದು ಆರೋಪಿಸಿದರು.












Click it and Unblock the Notifications