ಕೋಲ್ಕತ್ತಾದಲ್ಲಿ ಕೊವಿಡ್ 3ನೇ ಅಲೆ; 83 ಪೊಲೀಸರಿಗೆ ಅಂಟಿದ ಸೋಂಕು!
ಕೋಲ್ಕತ್ತಾ, ಜನವರಿ 4: ಪಶ್ಚಿಮ ಬಂಗಾಳದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಭದ್ರತಾ ಸಿಬ್ಬಂದಿಯನ್ನೇ ಹೈರಾಣಾಗಿಸಿದೆ. ಕೋಲ್ಕತ್ತಾದಲ್ಲಿ ಐಪಿಎಸ್ ಶ್ರೇಣಿಯ 83 ಪೊಲೀಸ್ ಅಧಿಕಾರಿಗಳಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಕೋಲ್ಕತ್ತಾದ 83 ಪೊಲೀಸ್ ಸಿಬ್ಬಂದಿಗೆ ಕೊವಿಡ್-19 ಸೋಂಕು ತಗುಲಿದ್ದು, ಈ ಪೈಕಿ 47 ಸೋಂಕಿತ ಸಿಬ್ಬಂದಿಯನ್ನು ಹೋಮ್ ಐಸೋಲೇಷನ್ ನಲ್ಲಿ ಇರಿಸಲಾಗಿದೆ. 16 ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಲ್ಕತ್ತಾ ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ 100ಕ್ಕೂ ಹೆಚ್ಚು ಜನರಿಗೆ ಕೊವಿಡ್ -19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಡಪಟ್ಟಿದೆ. ನಗರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಸಹ ಒಂದಾಗಿದೆ. ಇರದ ಮಧ್ಯೆ, ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಸಿಲಿಗುರಿಯ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಸೇರಿದಂತೆ 25 ವೈದ್ಯಕೀಯ ಸಿಬ್ಬಂದಿಗೂ ಕೂಡ ಕೊವಿಡ್ -19 ಸೋಂಕು ತಗುಲಿದ್ದು, ಎಲ್ಲರನ್ನೂ ಐಸೋಲೇಷನ್‌ಗೆ ಕಳುಹಿಸಲಾಗಿದೆ.

ಕೋಲ್ಕತ್ತಾದಲ್ಲಿ 70 ವೈದ್ಯಕೀಯ ಸಿಬ್ಬಂದಿಗೆ ಸೋಂಕು
ಸೋಮವಾರ ಕೋಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕನಿಷ್ಠ 70 ವೈದ್ಯರು, ಕಾಳಿಘಾಟ್‌ನ ಚಿತ್ತರಂಜನ್ ಸೇವಾ ಸದನ್ ಮತ್ತು ಶಿಶು ಸದನ್ ಆಸ್ಪತ್ರೆಯ 24 ವೈದ್ಯಕೀಯ ಸಿಬ್ಬಂದಿ ಮತ್ತು ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಯ 12 ಮಂದಿಗೆ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. "ವೈದ್ಯರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಹೋಗಲು ಸೂಚಿಸಲಾಗಿದೆ," ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೊರೊನಾವೈರಸ್ ಅಟ್ಟಹಾಸ
ರಾಜ್ಯದಲ್ಲಿ ಕಳೆದ ಡಿಸೆಂಬರ್ 28 ದೈನಂದಿನ ಕೊವಿಡ್ -19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಡಿಸೆಂಬರ್ 28 ರಿಂದ ಸೋಮವಾರದ ಹೊತ್ತಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರವು ಶೇ.2.35 ರಿಂದ ಶೇ.19.59ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 20,186 ಆಗಿದ್ದು, ಕಳೆದ ಡಿಸೆಂಬರ್ 28 ರಂದು ವರದಿಯಾದ ಪ್ರಕರಣಗಳಿಗಿಂತ ಕನಿಷ್ಠ 12,729 ಹೆಚ್ಚಾಗಿವೆ.
ಆರೋಗ್ಯ ತಜ್ಞರ ಪ್ರಕಾರ, ಪಶ್ಚಿಮ ಬಂಗಾಳ ಮತ್ತು ಕೋಲ್ಕತ್ತಾದಲ್ಲಿ ಕೊವಿಡ್ -19 ಸಾಂಕ್ರಾಮಿಕದ ಮೂರನೇ ಮೂರನೇ ಅಲೆ ಶುರುವಾಗಿದೆ. ಇದು ಜನವರಿ ತಿಂಗಳ ಎರಡನೇ ವಾರದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಲಿದ್ದು, ಫೆಬ್ರವರಿಯವರೆಗೆ ಮೂರನೇ ಅಲೆಯ ಪ್ರಭಾವ ಇರುತ್ತದೆ. ಪಶ್ಚಿಮ ಬಂಗಾಳದಲ್ಲಿ ದೊಡ್ಡ ಸಭೆ ಸಮಾರಂಭಗಳಿಗೆ ಅವಕಾಶ ನೀಡಿರುವುದು, ಹಬ್ಬ ಹರಿದಿನಗಳಿಗೆ ಅನುಮತಿ ನೀಡಿರುವುದರ ಮೂಲಕ ಪ್ರದರ್ಶಿಸಿದ ದೂರದೃಷ್ಟಿಯ ಕೊರತೆಯೇ ಇಂದಿನ ಪರಿಸ್ಥಿತಿಗೆ ಕಾರಣ ಎಂದು ದೂಷಿಸಲಾಗುತ್ತಿದೆ.

ಕೋಲ್ಕತ್ತಾದಲ್ಲಿ ಮೂರನೇ ಅಲೆ ಪ್ರಾರಂಭ
"ಕಳೆದ ಐದು ದಿನಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆಯನ್ನು ಕಂಡಾಗ ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಮೂರನೇ ಅಲೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ನವದೆಹಲಿ ಮತ್ತು ಮುಂಬೈನಂತಹ ಇತರ ಮಹಾನಗರಗಳಲ್ಲಿಯೂ ಮೂರನೇ ಈಗಾಗಲೇ ಶುರುವಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ, ವಿಶೇಷವಾಗಿ ಕೋಲ್ಕತ್ತಾದಲ್ಲಿ ಪ್ರಕರಣಗಳು 12 ಪಟ್ಟು ಹೆಚ್ಚಾಗಿದೆ.
ಕೊವಿಡ್-19 ಸೋಂಕು ಪರೀಕ್ಷೆಗೆ ಬರುವ ಪ್ರತಿಯೊಬ್ಬ ಮೂರನೇ ವ್ಯಕ್ತಿಯಲ್ಲೂ ಕಾಯಿಲೆ ಪತ್ತೆ ಆಗುತ್ತಿದೆ ಎಂದು ರಾಜ್ಯ-ಸಾಂಕ್ರಾಮಿಕ ರೋಗಗಳು ಮತ್ತು ಬೆಲಿಯಾಘಾಟಾ ಜನರಲ್ (ಐಡಿ ಮತ್ತು ಬಿಜಿ) ಆಸ್ಪತ್ರೆಯ ಪ್ರಾಂಶುಪಾಲ ಡಾ ಅನಿಮಾ ಹಾಲ್ಡರ್ ಪಿಟಿಐಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಲಾಕ್‌ಡೌನ್ ಮಾದರಿ ಕಠಿಣ ರೂಲ್ಸ್ ಜಾರಿಯಾಗುತ್ತಾ?
ಪಶ್ಚಿಮ ಬಂಗಾಳದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಏರಿಕೆಯಾಗುತ್ತಿರುವುದರ ಮಧ್ಯೆ ಲಾಕ್‌ಡೌನ್ ಮಾದರಿಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ ಎಂಬ ಬಗ್ಗೆ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ರಾಜ್ಯ ಸರ್ಕಾರವು ಭಾನುವಾರವೇ ಕಟ್ಟುನಿಟ್ಟಾದ ಲಾಕ್‌ಡೌನ್ ತರಹದ ಕ್ರಮಗಳನ್ನು ಜಾರಿಗೊಳಿಸಿದೆ.
ಹೊಸ ನಿರ್ಬಂಧಗಳ ಪ್ರಕಾರ, ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಯಾವುದೇ ರೀತಿಯ ಜನರು ಮತ್ತು ವಾಹನಗಳ ಸಂಚಾರ ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಲಾಗುತ್ತದೆ. ಮುಂದಿನ ಸೂಚನೆ ಬರುವವರೆಗೆ ಈಜುಕೊಳ, ಸ್ಪಾಗಳು, ಜಿಮ್‌ಗಳು ಮತ್ತು ಸಲೂನ್‌ಗಳು ಜನವರಿ 3 ರಿಂದಲೇ ಮುಚ್ಚಿವೆ. ಮೃಗಾಲಯಗಳು ಮತ್ತು ಪ್ರವಾಸಿ ಸ್ಥಳಗಳನ್ನು ಸಹ ಸಾರ್ವಜನಿಕರಿಗೆ ಮುಚ್ಚಲಾಗಿದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಎಲ್ಲಾ ಶಾಪಿಂಗ್ ಮಾಲ್‌ಗಳು, ಮಾರುಕಟ್ಟೆಗಳು ಮತ್ತು ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಶೇಕಡಾ 50ರಷ್ಟು ಸಾಮರ್ಥ್ಯದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ ಮತ್ತು ರಾತ್ರಿ 10 ರೊಳಗೆ ಬಂದ್ ಮಾಡುವುದಕ್ಕೆ ಸೂಚಿಸಲಾಗಿದೆ.












Click it and Unblock the Notifications