"ಮನೆ ಬಾಗಿಲಿಗೆ ಉಚಿತ ಪಡಿತರ": ಮಮತಾ ಬ್ಯಾನರ್ಜಿಗೆ ಆಯೋಗದ ನೋಟಿಸ್
ಕೋಲ್ಕತ್ತಾ, ಮಾರ್ಚ್ 16: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ತೃಣಮೂಲ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಮುಂದುವರಿದರೆ ಮೇ ತಿಂಗಳ ನಂತರದಲ್ಲಿ ರಾಜ್ಯದ ಪ್ರತಿ ತಿಂಗಳು ನಿಮ್ಮ ಮನೆ ಬಾಗಿಲಿಗೆ ರೇಷನ್ ತಲುಪಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷವಾಗಿ ಇಂಥ ಘೋಷಣೆಗಳನ್ನು ಮಾಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದಿರುವ ಚುನಾವಣಾ ಆಯೋಗವು ಈ ಬಗ್ಗೆ ಸ್ಪಷ್ಟನೆ ಕೋರಿ ನೋಟಿಸ್ ಜಾರಿಗೊಳಿಸಿದೆ.
ಪುರುಲಿಯಾ ಜಿಲ್ಲೆಯಲ್ಲಿ ಟಿಎಂಸಿ ಪರ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಯ ವಿಡಿಯೋ ಸೇರಿದಂತೆ ಈ ಸಂಬಂಧ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಚುನಾವಣಾ ಆಯೋಗವು ಸೂಚನೆ ನೀಡಿದೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು:
"ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಮುಂದುವರಿದರೆ, ನೀವು ಉಚಿತವಾಗಿ ಪಡಿತರವನ್ನು ಪಡೆಯುವುದು ಮುಂದುವರಿಯುತ್ತದೆ. ನಿಮ್ಮ ಮನೆ ಬಾಗಿಲಿಗೆ ನಾವು ಪಡಿತರವನ್ನು ತಂದು ನೀಡುತ್ತೇವೆ. ಮೇ ತಿಂಗಳ ನಂತರದಲ್ಲಿ ನೀವು ಪಡಿತರಕ್ಕಾಗಿ ಅಂಗಡಿಗಳಿಗೆ ಬರುವ ಅಗತ್ಯವಿಲ್ಲ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಇದರ ಹೊರತಾಗಿ ನಮ್ಮ ಬಜೆಟ್ ನಲ್ಲಿ ವಿಧವಾ ವೇತನವನ್ನು 1000 ರೂಪಾಯಿ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡುವ ಗೌರವ ಧನವನ್ನು 2000 ರೂಪಾಯಿಗೆ ಹೆಚ್ಚಿಸಿದ್ದೇನೆ ಎಂದು ಮಮತಾ ಬ್ಯಾನರ್ಜಿ ಸಾರ್ವಜನಿಕ ಸಭೆಯಲ್ಲಿ ಹೇಳಿಕೊಂಡಿದ್ದರು.
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.












Click it and Unblock the Notifications