ಟಿಎಂಸಿ ಸೇರಿದ ಬಿಜೆಪಿ ಸಂಸದನ ಪತ್ನಿ, ವಿಚ್ಚೇದನ ನೀಡುವುದಾಗಿ ಪತಿ ಹೇಳಿಕೆ
ಕೋಲ್ಕತಾ, ಡಿಸೆಂಬರ್ 21: ಪಶ್ಚಿಮ ಬಂಗಾಳದ ಬಿಷ್ಣುಪುರ್ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತಾ ಮೊಂಡಲ್ ಖಾನ್ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪತ್ನಿ ಬಹುದೊಡ್ಡ ತಪ್ಪು ಮಾಡಿದ್ದಾಳೆ ಎಂದಿರುವ ಸೌಮಿತ್ರ, ಆಕೆಗೆ ಶೀಘ್ರವೇ ವಿಚ್ಚೇದನ ನೋಟಿಸ್ ನೀಡುವುದಾಗಿ ತಿಳಿಸಿದ್ದಾರೆ.
'ನಿನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ. ನಿನ್ನ ಹೆಸರಿನಿಂದ ನನ್ನ ಸರ್‌ನೇಮ್ 'ಖಾನ್'ಅನ್ನು ತೆಗೆದುಹಾಕು. ಬಿಜೆಪಿ ನನಗೆ ಎಲ್ಲ ಗೌರವಗಳನ್ನು ನೀಡಿದೆ. ಈ ಹಿಂದೆ ನೀನು ನನ್ನ ಪರವಾಗಿ ಪ್ರಚಾರ ಮಾಡಿದ್ದಿ. ಅದಕ್ಕಾಗಿ ನಾನು ಋಣಿಯಾಗಿರುತ್ತೇನೆ. ಆದರೆ ಬಿಜೆಪಿಯ ಹೆಸರಿಲ್ಲದೆ ನಾನು ಸೀಟು ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲ ಎನ್ನುವುದೂ ಸತ್ಯ. ಕುಟುಂಬವನ್ನು ಮೀರಿ ನೀನು ರಾಜಕೀಯವನ್ನು ಆಯ್ದುಕೊಂಡಿದ್ದೀಯ. ನಿನ್ನನ್ನು ಸಿಲುಕಿಸಲಾಗಿದೆ ಮತ್ತು ಇದು ನಿನ್ನ ದೊಡ್ಡ ತಪ್ಪು' ಎಂದು ಪಶ್ಚಿಮ ಬಂಗಾಳ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ಸೌಮಿತ್ರ ಹೇಳಿದ್ದಾರೆ.
ಸುಜಾತಾ ಅವರನ್ನು ತೃಣಮೂಲ ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ಸಂಸದ ಸೌಗತ ರಾಯ್ ಅವರು ಸೋಮವಾರ ಪಕ್ಷಕ್ಕೆ ಸ್ವಾಗತಿಸಿದರು. 'ಕುಟುಂಬ ಮತ್ತು ರಾಜಕೀಯ ಒಂದೇ ವೇದಿಕೆಯಲ್ಲಿರಲು ಸಾಧ್ಯವಿಲ್ಲ. ಅದರ ಬಗ್ಗೆ ಮಾತನಾಡುವುದು ಬೇಡ. ಇದು ನನ್ನ ಇಂದಿನ ನಿರ್ಧಾರ. ಭವಿಷ್ಯದಲ್ಲಿ ಸೌಮಿತ್ರ ಅವರೂ ನನ್ನನ್ನು ಸೇರಿಕೊಳ್ಳುವುದಿಲ್ಲ ಎಂಬುದಕ್ಕೆ ಖಾತರಿಯೇನು?' ಎಂದು ಸುಜಾತಾ ಪ್ರಶ್ನಿಸಿದ್ದಾರೆ.

2019ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ಧ ಸೌಮಿತ್ರ ಅವರು ಬಂಕುರ ಪ್ರವೇಶಿಸದಂತೆ ನ್ಯಾಯಾಲಯವು ನಿರ್ಬಂಧ ಹೇರಿದ ಬಳಿಕ ಗಂಡನ ಪರವಾಗಿ ಸುಜಾತಾ ಅಬ್ಬರದ ಪ್ರಚಾರ ನಡೆಸಿದ್ದರು. ತಮಗೆ ಸವಾಲುಗಳೆಂದರೆ ಇಷ್ಟ. ವಿಧಾನಸಭೆ ಚುನಾವಣೆಯಲ್ಲಿ ಯಾವ ಮುಖವೂ ಹೊಂದಿರದ ಪಕ್ಷಕ್ಕೆ ಕೆಲಸ ಮಾಡಲು ತಾವು ಬಯಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ಸಂಘಟನಾ ತಂತ್ರಗಳನ್ನು ಟೀಕಿಸಿರುವ ಸುಜಾತಾ, 'ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆರು ಹೆಸರುಗಳನ್ನು ಸಾಲಾಗಿ ಇರಿಸಿದ್ದಾರೆ. ಉಪಮುಖ್ಯಮಂತ್ರಿ ಸೀಟಿಗೆ 13 ಜನರು ಕಾದಿದ್ದಾರೆ. ನಾನು ಬಿಜೆಪಿಯಲ್ಲಿದ್ದಾಗ ಜನರು ನಿಮ್ಮ ಸಿಎಂ ಮುಖ ಯಾರು ಎಂದರೆ ಮೋದಿ ಎನ್ನುತ್ತಿದ್ದೆ. ಲೋಕಸಭೆ ಚುನಾವಣೆಯವರೆಗೂ ಎಲ್ಲವೂ ಚೆನ್ನಾಗಿತ್ತು. ಆದರೆ ಬಂಗಾಲದಲ್ಲಿ ತನ್ನ ಪಕ್ಷಕ್ಕಾಗಿ ಗಟ್ಟಿಯಾದ ಮುಖ ಹುಡುಕುವುದು ಬಿಜೆಪಿಗೆ ಸಾಧ್ಯವಾಗಿಲ್ಲ' ಎಂದಿದ್ದಾರೆ.












Click it and Unblock the Notifications