ಕೋಲಾರ; ಕಾಡಾನೆ ದಾಳಿಗಿಲ್ಲ ಪರಿಹಾರ, ರೈತರು ಹೈರಾಣ
ಕೋಲಾರ, ಏಪ್ರಿಲ್ 20; ಕೋಲಾರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ತಮಿಳುನಾಡು ಅರಣ್ಯದಿಂದ ಜಿಲ್ಲೆಯ ಗಡಿಭಾಗಗಳಿಗೆ ಕಾಡಾನೆಗಳ ದಾಳಿ ಮಾಮೂಲಾಗಿದೆ. ಕಾಡಾನೆಗಳನ್ನು ಹತೋಟಿಗೆ ತರಲು ಶಾಶ್ವತವಾದ ಕ್ರಮಗಳು ಸರ್ಕಾರದಲ್ಲಿ ಇಲ್ಲವಾಗಿದೆ. ಕಾಡಾನೆಗಳ ದಾಳಿ ತಪ್ಪಿಸಲು ಜನರು ನಿರೀಕ್ಷಿಸುತ್ತಿರುವ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ವಿಫಲವಾಗಿದೆ.
ಒಂದು ಕಾಲದಲ್ಲಿ ಕಾಡಾನೆಗಳು ಅಂದರೆ ಕೋಲಾರ ಜಿಲ್ಲೆಯ ಜನರ ಪಾಲಿಗೆ ಅಪರೂಪವಾಗಿತ್ತು. ಆದರೆ, ಐದಾರು ವರ್ಷದಿಂದೀಚೆಗೆ ಕಾಡಾನೆಗಳು ಅಂತ ಹೆಸರು ಹೇಳಿದರೆ ಈ ಜಿಲ್ಲೆಯ ಗಡಿಭಾಗದ ಜನರು ಬೆಚ್ಚಿ ಬೀಳುತ್ತಾರೆ.
ಮಾಲೂರು ಮತ್ತು ಬಂಗಾರಪೇಟೆ ತಾಲೂಕುಗಳ ಗಡಿಭಾಗದ ಹಳ್ಳಿಗಳಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಹಳ್ಳಿಗರ ಪ್ರಾಣಕ್ಕೂ ಸಂಚಕಾರ ತಂದಿರುವ ಕಾಡಾನೆಗಳು, ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆಗಳನ್ನು ಹಾನಿ ಮಾಡುತ್ತಿವೆ.

ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಗಳು ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಈ ಮೊದಲು ಅಲ್ಲಿನ ಕಾಡಾನೆಗಳು ಯಾವಾಗಲಾದರು ಒಮ್ಮೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಹಳ್ಳಿಗಳಿಗೆ ದಾಳಿಯಿಡುತ್ತಿದ್ದವು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಇಲ್ಲಿಯೇ ಬೀಡು ಬಿಟ್ಟಿವೆ. ಈ ಭಾಗದ ಜನರ ಪ್ರಾಣವನ್ನು ತೆಗೆಯುವ ಹಂತಕ್ಕೂ ತಲುಪಿರುವ ಕಾಡಾನೆಗಳಿಂದ ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ.

ನಮ್ಮ ಜಿಲ್ಲೆಯ ಗಡಿಭಾಗದ ಹಳ್ಳಿಗಳಿಗೆ ದಾಳಿ ನಡೆಸುತ್ತಿರುವ ಕಾಡಾನೆಗಳನ್ನು ನಿಯಂತ್ರಿಸಲು ಜಿಲ್ಲಾಡಳಿತವು ಕೈಲಾದ ಕ್ರಮವನ್ನು ಜರುಗಿಸಿದೆ. ಅರಣ್ಯ ಪ್ರದೇಶದ 55 ಕಿ. ಮೀ. ದೂರದವರೆಗೂ ಸದ್ಯಕ್ಕೆ ಸೋಲಾರ್ ತಂತಿಬೇಲಿಯನ್ನು ಅಳವಡಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಶಾಶ್ವತ ಕ್ರಮವಾಗಿ ಕಾರಿಡಾರ್ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಒಟ್ಟಿನಲ್ಲಿ ಅನೇಕ ಸಮಸ್ಯೆಗಳಿಂದ ತತ್ತರಿಸುತ್ತಿರುವ ಕೋಲಾರ ಜಿಲ್ಲೆಯ ಕೃಷಿಕರಿಗೆ ಇದೀಗ ಕಾಡಾನೆಯ ಹಾವಳಿಯನ್ನು ಎದುರಿಸುವುದು ಸವಾಲಾಗಿದೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ಜರುಗಿಸಬೇಕಾಗಿದೆ.












Click it and Unblock the Notifications