ಕೋಲಾರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ; ಕಿರುಕುಳದ ಆರೋಪ ಮಾಡಿದ ಕುಟುಂಬ
ಕೋಲಾರ, ಜೂನ್. 06: ದುರಂತ ಘಟನೆಯೊಂದರಲ್ಲಿ ಬಳ್ಳಾರಿ ಮೂಲದ 26 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಕೋಲಾರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮೃತರು ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದರು.
ಬಳ್ಳಾರಿ ಮೂಲದ 26 ವರ್ಷದ ದರ್ಶಿನಿ ಭಾನುವಾರ ಬೆಳಗ್ಗೆ 11.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಪೊಲೀಸರ ಪ್ರಕಾರ, ವಿದ್ಯಾರ್ಥಿಯು ಕಾಲೇಜಿನಿಂದ ಸುಮಾರು 25 ಕಿಮೀ ದೂರದಲ್ಲಿರುವ ಕೆಂದಟ್ಟಿ ಕ್ವಾರಿಗೆ ಹೋಗಲು ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕ್ವಾರಿ ತಲುಪಿದ ನಂತರ ಆಕೆ ತನ್ನ ಸ್ನೇಹಿತೆಗೆ ಕರೆ ಮಾಡಿ ಕೆಲಸದ ಒತ್ತಡ, ಹಿರಿಯ ವೈದ್ಯರ ಕಿರಕುಳದಿಂದ ಮಾನಸಿಕ ಖಿನ್ನತೆಗೆ ಒಳಹಾಹಿರುವ ಬಗ್ಗೆ ಮತ್ತು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆಕೆಯ ಸ್ನೇಹಿತರು ಪೊಲೀಸರು ಮತ್ತು ಕಾಲೇಜು ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಮೊದಲೇ, ವಿದ್ಯಾರ್ಥಿನಿ ಕ್ವಾರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ವಿದ್ಯಾರ್ಥಿನಿಯ ಮೃತದೇಹ ಕ್ವಾರಿಯಲ್ಲಿ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತರು ಕೊಪ್ಪಳ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಬಿಬಿಎಸ್ ಮುಗಿಸಿ ಹೊಸಕೋಟೆ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪೀಡಿಯಾಟ್ರಿಕ್ಸ್‌ಗೆ ಪ್ರವೇಶ ಪಡೆದು ಕಾಲೇಜಿಗೆ ಹೊಂದಿಕೊಂಡಿರುವ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು.
ಮೃತ ದರ್ಶಿನಿ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಸದ್ಯ ಬಳ್ಳಾರಿಯಲ್ಲಿ ಶಿಕ್ಷಕರಾಗಿರುವ ಸಹೋದರ ಮತ್ತು ತಾಯಿಯನ್ನು ಅಗಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಲೇಜು ಅಧಿಕಾರಿಗಳ ಪ್ರಕಾರ, 26 ವರ್ಷ ವಯಸ್ಸಿನ ವಿದ್ಯಾರ್ಥಿನಿ ಕಾಲೇಜಿನ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದಿದ್ದಾರೆ.
ಇನ್ನು, ಮೃತ ವ್ಯಕ್ತಿಯ ಸಹೋದರ ದರ್ಶಿನಿಗೆ ಕಾಲೇಜಿನ ವೈದ್ಯರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. "ಒಬ್ಬರೇ ಎಲ್ಲಿಗೂ ಹೋಗದ ಅವರು, ಸುಮಾರು 25 ಕಿಲೋಮೀಟರ್ ದೂರದ ಕ್ವಾರಿಗೆ ಹೋಗಿ ತನ್ನ ಜೀವನವನ್ನು ಕೊನೆಗೊಳಿಸುವ ಧೈರ್ಯವನ್ನು ಹೊಂದಿರುವುದಿಲ್ಲ" ಎಂದು ಸಹೋದರ ದೂರಿನಲ್ಲಿ ತಿಳಿಸಿದ್ದು, ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಮೃತಳ ಸಹೋದರನ ದೂರಿನ ಆಧಾರದ ಮೇಲೆ ಕೋಲಾರ ಗ್ರಾಮಾಂತರ ಪೊಲೀಸರು, ಕಾಲೇಜು ಆಡಳಿತ ಮಂಡಳಿ ಮತ್ತು ಕಾಲೇಜಿನ ಹಿರಿಯ ವೈದ್ಯಯೊಬ್ಬರ ಮೇಲೆ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )












Click it and Unblock the Notifications