ಗಾಯಗೊಂಡವರನ್ನು ತಮ್ಮ ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟ ಸಚಿವ ಅಶೋಕ್
ಕೋಲಾರ, ಮಾರ್ಚ್ 12: ತಾಲ್ಲೂಕಿನ ಅರಾಭಿಕೊತ್ತನೂರು ಸಮೀಪ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಯುವಕರನ್ನು ಸಚಿವ ಆರ್.ಅಶೋಕ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟ ಘಟನೆ ವರದಿಯಾಗಿದೆ.
ಮಾಲೂರು ಪಟ್ಟಣ ಹಾಗೂ ತಾಲ್ಲೂಕಿನ ವಕ್ಕಲೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮುಗಿಸಿಕೊಂಡು ಅವರು ಬೆಂಗಳೂರಿಗೆ ತೆರಳುತ್ತಿದ್ದರು. ನಿಯಂತ್ರಣ ತಪ್ಪಿ ಕಾರು ಕುರುಚಲು ಕಾಡಿಗೆ ಬಿದ್ದಿದ್ದನ್ನು ಗಮನಿಸಿದರು. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕರು ನರಳಾಡುತ್ತಿದ್ದರು.

ತಮ್ಮ ಕಾರು ನಿಲ್ಲಿಸಿ ಅಲ್ಲಿಗೆ ತೆರಳಿದ ಸಚಿವರು, ಆ ಯುವಕರನ್ನು ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ರಸ್ತೆಗೆ ಕರೆ ತಂದರು. 'ನಾನೊಬ್ಬನೇ ಬೆಂಗಳೂರಿಗೆ ಹೋಗುತ್ತೇನೆ. ಎಸ್ಕಾರ್ಟ್ ವಾಹನ ಜೊತೆಗೆ ಬರುವುದು ಬೇಡ.
'ಈ ಯುವಕರನ್ನು ಕರೆದುಕೊಂಡು ಕೋಲಾರದ ಜಿಲ್ಲಾಸ್ಪತ್ರೆಗೆ ಸೇರಿಸಿ' ಎಂದು ಅವರು ಎಸ್ಕಾರ್ಟ್ ವಾಹನದ ಚಾಲಕರು ಹಾಗೂ ಪೊಲೀಸರಿಗೆ ಸೂಚಿಸಿದರು.
ಯುವಕರಿಬ್ಬರು ಕೋಲಾರದವರಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಕೋಲಾರ ನಗರಸಭೆ ಸದಸ್ಯ ಪ್ರವೀಣ್ ಗೌಡ ಜೊತೆಗಿದ್ದು ಸಹಾಯ ಮಾಡಿದರು.
ಇದಕ್ಕು ಮುನ್ನ ಬಿಜೆಪಿಯಿಂದ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಅಶೋಕ್ ಭಾಗವಹಿಸಿದ್ದರು. ಈ ಬಗ್ಗೆ 'ಮಾಲೂರಿನಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅಪಾರ ಬೆಂಬಲಿಗರೊಂದಿಗೆ ಅದ್ದೂರಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಚಿವರಾದ ಡಾ.ಸುಧಾಕರ್, ಮುನಿರತ್ನ, ಸಂಸದ ಮುನಿಸ್ವಾಮಿ ಹಾಗೂ ಮುಖಂಡರು ಉಪಸ್ಥಿತರಿದ್ದರು' ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಮಾಲೂರಿನ ಯಾತ್ರೆಗೆ ಮುನ್ನ ಹೊಸಕೋಟೆಯಲ್ಲಿ ಯಾತ್ರೆಯನ್ನು ಬಿಜೆಪಿ ನಾಯಕರು ನಡೆಸಿದರು. ಆ ಸಂದರ್ಭದಲ್ಲಿ ಸಚಿವರಾದ ಡಾ.ಸುಧಾಕರ್, ಎಂ.ಟಿ.ಬಿ ನಾಗರಾಜ್ ಉಪಸ್ಥಿತರಿದ್ದರು.












Click it and Unblock the Notifications