ಕೋಲಾರ ಜಿಲ್ಲೆ ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ

Posted By:
Subscribe to Oneindia Kannada
   Karnataka Elections 2018 : ಕೋಲಾರ ಜಿಲ್ಲೆಯ ಅಭ್ಯರ್ಥಿಗಳ ಪರಿಚಯ | Oneindia Kannada

   ಕೋಲಾರ ಜಿಲ್ಲೆ ಒಂದು ಕಾಲದ ಕಾಂಗ್ರೆಸ್‌ನ ಭದ್ರ ಕೋಟೆ, ಆ ಜಿಲ್ಲೆ ಇನ್ನೂ ತನ್ನ ಕಾಂಗ್ರೆಸ್‌ ಪ್ರೀತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಬಿಜೆಪಿ ಮತ್ತು ಜೆಡಿಎಸ್‌ಗಳು ಕಾಂಗ್ರೆಸ್‌ ಅನ್ನು ಅಲ್ಪಮಟ್ಟಿಗೆ ಬಲಹೀನಗೊಳಿಸಿರುವುದು ಸತ್ಯವೇ.

   ಕರ್ನಾಟಕದ ಗಡಿ ಜಿಲ್ಲೆ ಕೋಲಾರದಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಮುಳಬಾಗಿಲು, ಕೋಲಾರ ಗೋಲ್ಡ್ ಫೀಲ್ಡ್ ಮತ್ತು ಬಂಗಾರಪೇಟೆ ಕ್ಷೇತ್ರಗಳು ಎಸ್‌.ಸಿ ಮೀಸಲಾಗಿದ್ದರೆ. ಕೋಲಾರ, ಮಾಲೂರು, ಶ್ರೀನಿವಾಸಪುರ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ.

   ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

   ಕೋಲಾರದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಹಳೆಯ ಸುವರ್ಣದಿನಗಳನ್ನು ವಾಪಾಸ್ಸುಗಳಿಸಲು ಪ್ರಯತ್ನಿಸುತ್ತಿದ್ದು, ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಹೊಸತನವಿದೆ. ಜೊತೆಗೆ ಕುಟುಂಬ ರಾಜಕಾರಣ ಹಾಗೂ ಮೂಲ ಕಾಂಗ್ರೆಸ್ಸಿಗರ ಅವಗಣನೆಯ ಕಮಟೂ ಹರಡಿದೆ.

   ಕೋಲಾರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ ಇಲ್ಲಿದೆ ನೋಡಿ...

   ಕೋಲಾರದಲ್ಲಿ ಸ್ಥಳೀಯರಲ್ಲದವರಿಗೆ ಟಿಕೆಟ್

   ಕೋಲಾರದಲ್ಲಿ ಸ್ಥಳೀಯರಲ್ಲದವರಿಗೆ ಟಿಕೆಟ್

   ಸಾಮಾನ್ಯ ಕ್ಷೇತ್ರವಾದ ಕೋಲಾರ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಸೈಯದ್ ಜಮೀರ್ ಪಾಷಾ ಅವರಿಗೆ ಟಿಕೆಟ್ ನೀಡಿದ್ದು ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಹುಟ್ಟು ಹಾಕಿದೆ. ಸೈಯದ್ ಜಮೀರ್ ಪಾಷಾ ಅವರಿಗೆ ಟಿಕೆಟ್ ನೀಡುತ್ತಲೆ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಕಾರ್ಯದರ್ಶಿ ವಿ.ಆರ್.ಸುದರ್ಶನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ. ಸೈಯದ್ ಜಮೀರ್ ಪಾಷಾ ಅವರು ಸ್ಥಳೀಯರಲ್ಲ ಎಂಬುದೇ ಅಸಮಾಧಾನಕ್ಕೆ ಕಾರಣ. ಸೈಯದ್ ಜಮೀರ್ ಪಾಷಾ ಅವರು ರಾಮನಗರದ ಮಾಗಡಿ ತಾಲ್ಲೂಕಿನವರು.

   ಕೋಲಾರದಲ್ಲಿ ಪ್ರಬಲ ಎದುರಾಳಿ ವರ್ತೂರು ಪ್ರಕಾಶ್ ಚುನಾವಣೆಗೆ ತಮ್ಮ ನಮ್ಮ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸುತ್ತಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಒಳಜಗಳಗಳಿಂದಾಗಿ ವರ್ತೂರು ಪ್ರಕಾಶ್‌ಗೆ ಲಾಭವಾಗುವ ಸಾಧ್ಯತೆ ಇದೆ.

   ಮುಳಬಾಗಿಲಿನಲ್ಲಿ ವಲಸಿಗರಿಗೆ ಟಿಕೆಟ್ ನೀಡಿಕೆ

   ಮುಳಬಾಗಿಲಿನಲ್ಲಿ ವಲಸಿಗರಿಗೆ ಟಿಕೆಟ್ ನೀಡಿಕೆ

   ಎಸ್‌.ಸಿ ಮೀಸಲು ಕ್ಷೇತ್ರವಾದ ಮುಳಬಾಗಿಲಿನಲ್ಲಿ ವಲಸಿಗ ಜಿ.ಮಂಜುನಾಥಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಜಿ.ಮಂಜುನಾಥ ಅಲಿಯಾಸ್ ಕೊತ್ತನೂರು ಮಂಜುನಾಥ ಅವರು ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ಅವರು ಕಾಂಗ್ರೆಸ್‌ಗೆ ಬಂದಿದ್ದು ಟಿಕೆಟ್ ಸಹ ಗಿಟ್ಟಿಸಿಕೊಂಡಿದ್ದಾರೆ. ಇಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದೆ. ಕೊತ್ತನೂರು ಮಂಜುಗೆ ಟಿಕೆಟ್ ನೀಡಬಾರದು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದರು ಆದರೂ ಸಹ ಅವರಿಗೇ ಮಣೆ ಹಾಕಲಾಗಿದೆ.

   ಗೋಲ್ಡ್‌ಫೀಲ್ಡ್‌ನಲ್ಲಿ ಕೆ.ಎಚ್.ಮುನಿಯಪ್ಪ ಮಗಳಿಗೆ ಮಣೆ

   ಗೋಲ್ಡ್‌ಫೀಲ್ಡ್‌ನಲ್ಲಿ ಕೆ.ಎಚ್.ಮುನಿಯಪ್ಪ ಮಗಳಿಗೆ ಮಣೆ

   ಎಸ್‌.ಸಿ ಮೀಸಲು ಕ್ಷೇತ್ರವಾದ ಕೋಲಾರ ಗೋಲ್ಡ್‌ ಫೀಲ್ಡ್ ಕ್ಷೇತ್ರದಿಂದ ತಮ್ಮ ಮಗಳಿಗೆ ಟಿಕೆಟ್ ಕೊಡಿಸುವಲ್ಲಿ ಕೆ.ಎಚ್.ಮುನಿಯಪ್ಪ ಅವರು ಯಶಸ್ವಿಯಾಗಿದ್ದಾರೆ. ಅಲ್ಲಿ ಕೆ.ಎಚ್.ಮುನಿಯಪ್ಪ ಅವರ ಮಗಳು ರೂಪಾ ಶಶಿಧರ್ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕಳೆದ ಬಾರಿ ಬಿಜೆಪಿಯ ವೈ.ವಿ.ರಾಮಕ್ಕ ಗೆದ್ದಿದ್ದರು ಆದರೆ ಈ ಬಾರಿ ಅಲ್ಲಿ ಬಿಜೆಪಿಯಲ್ಲಿ ಬಣಗಳು ಉಂಟಾಗಿದ್ದು ಅದು ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ವರವಾಗುವ ಸಾಧ್ಯತೆ ಇದೆ.

   ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಮಣೆ

   ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಮಣೆ

   ಸಾಮಾನ್ಯ ಕ್ಷೇತ್ರವಾದ ಮಾಲೂರಿನ ಸ್ಥಳೀಯರಾದ ಹಾಗೂ ನಿಷ್ಠಾವಂತ ಮುಖಂಡರಾದ ಕೆ.ವೈ.ನಂಜೇಗೌಡ ಅವರಿಗೆ ಮಾಲೂರು ಟಿಕೆಟ್ ನೀಡಿದೆ ಕಾಂಗ್ರೆಸ್. ಇಲ್ಲಿ ಎ.ಶ್ರೀನಿವಾಸ್ ಹಾಗೂ ನಂಜೇಗೌಡರ ನಡುವೆ ಟಿಕೆಟ್‌ಗಾಗಿ ಸ್ಪರ್ಧೆ ಇತ್ತು ಆದರೆ ಅಂತಿಮ ಸಿಹಿ ನಂಜೇಗೌಡರಿಗೆ ಒಲಿದಿದೆ. ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಗೆದ್ದಿದ್ದು, ಕಾಂಗ್ರೆಸ್‌ ಗೆಲ್ಲಿಸಲು ನಂಜೇಗೌಡರು ಹೆಚ್ಚಿನ ಶ್ರಮಪಡಬೇಕಾಗಿದೆ.

   ಶ್ರೀನಿವಾಸಪುರದಲ್ಲಿ ಆರೋಗ್ಯ ಸಚಿವರು ಗೆಲ್ಲುತ್ತಾರಾ

   ಶ್ರೀನಿವಾಸಪುರದಲ್ಲಿ ಆರೋಗ್ಯ ಸಚಿವರು ಗೆಲ್ಲುತ್ತಾರಾ

   ಸಾಮಾನ್ಯ ಕ್ಷೇತ್ರವಾದ ಶ್ರೀನಿವಾಸಪುರದಲ್ಲಿ ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರಿಗೆ ಶ್ರೀನಿವಾಸಪುರದ ಟಿಕೆಟ್ ನೀಡಲಾಗಿದೆ. ಶ್ರೀನಿವಾಸಪುರದಿಂದ ರಮೇಶ್‌ಕುಮಾರ್ ಅವರು 9 ಬಾರಿ ಗೆದ್ದಿದ್ದಾರೆ. ಇಲ್ಲಿನ ವಿಶೇಷತೆಯೆಂದರೆ ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಇದೇ ಕ್ಷೇತ್ರದಿಂದ 8 ಬಾರಿ ಸ್ಪರ್ಧಿಸಿದ್ದು ಒಂದು ಬಾರಿ ರಮೇಶ್‌ ಕುಮಾರ್ ಗೆದ್ದಿದ್ದರೆ ಒಂದು ಬಾರಿ ವೆಂಕಟಶಿವಾರೆಡ್ಡಿ ಗೆದ್ದಿದ್ದಾರೆ. ಕಳೆದ 9 ಚುನಾವಣೆಯಿಂದಲೂ ಹೀಗೆ ನಡೆಯುತ್ತಾ ಬಂದಿರುವುದು ವೀಶೇಷ. ಕಳೆದ ಚುನಾವಣೆಯಲ್ಲಿ ರಮೇಶ್ ಕುಮಾರ್ ಗೆದ್ದಿದ್ದರು ಈ ಬಾರಿ ವೆಂಕಟಶಿವಾರೆಡ್ಡಿ ಗೆಲ್ಲುತ್ತಾರಾ ಅಥವಾ ರಮೇಶ್‌ ಕುಮಾರ್ ಅವರೇ ಗೆಲ್ಲುತ್ತಾರಾ ಕಾದು ನೋಡಬೇಕಿದೆ.

   ಬಂಗಾರಪೇಟೆ: ಹಾಲಿ ಕಾಂಗ್ರೆಸ್ ಶಾಸಕರಿಗೆ ಟಿಕೆಟ್

   ಬಂಗಾರಪೇಟೆ: ಹಾಲಿ ಕಾಂಗ್ರೆಸ್ ಶಾಸಕರಿಗೆ ಟಿಕೆಟ್

   ಎಸ್‌.ಸಿ ಮೀಸಲು ಕ್ಷೇತ್ರವಾದ ಬಂಗಾರಪೇಟೆಯಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ ಅವರಿಗೆ ಟಿಕೆಟ್ ನೀಡಲಾಗಿದೆ. ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದ್ದು, ಕಳೆದ ಬಾರಿ ನಾರಾಯಣಸ್ವಾಮಿ ಅವರು 28,337 ಬೃಹತ್ ಅಂತರದಿಂದ ಬಿಜೆಪಿಯನ್ನು ಮಣಿಸಿದ್ದರು. ಈ ಬಾರಿಯೂ ಅದೇ ಫಲಿತಾಂಶದ ಪುನರಾವರ್ತನೆ ಆಗುವ ಸಾಧ್ಯತೆ ದಟ್ಟವಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka Congress announced 1st list of candidates for Karnataka assembly elections 2018. In Kolar district candidates announced for all 6 assembly constituency. Here are the candidates brief profiles of the district.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ