ನನಗಿಂತ ನನ್ನ ಬಾಡಿಗಾರ್ಡ್ ಹೆಚ್ಚು ಫೇಮಸ್, ಈಗ ಆತನನ್ನ ಹೊರಗಡೆ ಬಿಡ್ತಿಲ್ಲ: ನಟ ರಾಮ್‌ಚರಣ್
ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ಸದ್ಯ ತಮ್ಮ ಬಹುನಿರೀಕ್ಷಿತ 'ಪೆದ್ದಿ' (Peddi) ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಸಿನಿಮಾದ ಪ್ರಮೋಷನ್ ವೇಳೆ ರಾಮ್ ಚರಣ್ ಮಾತ್ರವಲ್ಲದೆ ಅವರ ಪರ್ಸನಲ್ ಬಾಡಿಗಾರ್ಡ್ ಕೆವಿನ್ ಕುಂಟಾ (Kevin Kunta) ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿದ್ದು, ಈ ಕ್ರೇಜ್ ಬಗ್ಗೆ ಖುದ್ದು ರಾಮ್‌ಚರಣ್ ಅವರೇ ಮಾತನಾಡಿದ್ದಾರೆ.
ಅಭಿಮಾನಿಗಳು ಈ ಕೆವಿನ್ ಕುಂಟಾ ಯಾರು ಎಂದು ಹುಡುಕ ಹೊರಟಾಗ ಒಂದು ರೋಚಕ ವಿಷಯ ಬೆಳಕಿಗೆ ಬಂದಿದೆ. ಈ 27 ವರ್ಷದ ಬಾಡಿಗಾರ್ಡ್ ಕೇವಲ ಸೆಕ್ಯೂರಿಟಿ ಗಾರ್ಡ್ ಮಾತ್ರವಲ್ಲ, ವೆಸ್ಟ್ ಆಫ್ರಿಕಾದ ಗ್ಯಾಂಬಿಯಾ ಮೂಲದ ಪ್ರಖ್ಯಾತ ಎಂಎಂಎ (MMA - ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್) ಫೈಟರ್ ಆಗಿದ್ದು, ಸದ್ಯ ಇಟಲಿಯ ಫ್ಲಾರೆನ್ಸ್‌ನಲ್ಲಿ ನೆಲೆಸಿದ್ದಾರೆ ಎನ್ನುವುದು ತಿಳಿದುಬಂದಿದೆ. ಪ್ರಸ್ತುತ ಇವರು ರಾಮ್‌ಚರಣ್ ಮತ್ತು ಅವರ ಕುಟುಂಬಕ್ಕೆ ನೆರಳಿನಂತೆ ರಕ್ಷಣೆ ನೀಡುತ್ತಿದ್ದಾರೆ.

"ಅವನಿಗೆ ಬಿಸ್ಕೆಟ್, ಚಾಕಲೇಟ್ ಕೊಟ್ಟು ನನ್ನ ಸೀಕ್ರೆಟ್ ಕೇಳ್ತಾರೆ"
ತಮ್ಮ ಬಾಡಿಗಾರ್ಡ್ ಹೀಗೆ ಸಡನ್ ಆಗಿ ಸ್ಟಾರ್ ಆಗಿರುವುದಕ್ಕೆ ನಟ ರಾಮ್ ಚರಣ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಸಖತ್ ಹಾಸ್ಯಭರಿತವಾಗಿ ರಿಯಾಕ್ಷನ್ ಕೊಟ್ಟಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ರಾಮ್ ಚರಣ್ ಅವರು ನಗುತ್ತಾ, ತನ್ನ ಬಾಡಿಗಾರ್ಡ್‌ಗೆ ಸಿಗುತ್ತಿರುವ ಪ್ರಚಾರದ ಬಗ್ಗೆ ಮಾತನಾಡಿದ್ದಾರೆ. "ನೀವೆಲ್ಲರೂ ಸೇರಿ ಅವನನ್ನು ಎಷ್ಟು ಫೇಮಸ್ ಮಾಡಿದ್ದೀರಿ ಎಂದರೆ, ಈಗ ನಾನು ಅವನನ್ನು ಹೊರಗೆ ಬಿಡುತ್ತಿಲ್ಲ. ಯಾರಾದರೂ ಅವನಿಗೆ ಒಂದು ಚಾಕಲೇಟ್ ಅಥವಾ ಬಿಸ್ಕೆಟ್ ಕೊಟ್ಟು ಲಂಚ ನೀಡಿ, ನನ್ನ ಬಗ್ಗೆ ಇರುವ ಗುಟ್ಟುಗಳನ್ನು ಕೇಳಿಬಿಡಬಹುದು" ಎಂದು ತಮಾಷೆ ಮಾಡಿದ್ದಾರೆ.
ಇದಕ್ಕೆ ಸಂದರ್ಶನದಲ್ಲಿದ್ದ ಹಿರಿಯ ನಟ ಬೋಮನ್ ಇರಾನಿ ಅವರು, "ಕೆವಿನ್ ನೋಡಲು ಅಷ್ಟು ಖಡಕ್ ಆಗಿದ್ದಾನೆ, ಅವನಿಗೆ ಬಿಸ್ಕೆಟ್-ಚಾಕಲೇಟ್ ಆಮಿಷ ಒಡ್ಡಲು ಸಾಧ್ಯವೇ?" ಎಂದು ಹಾಸ್ಯ ಮಾಡಿದರು. ಆಗ ರಾಮ್ ಚರಣ್ ಆಫ್-ಸ್ಕ್ರೀನ್ ನಿಂತಿದ್ದ ಕೆವಿನ್ ಕಡೆಗೆ ಕೈ ತೋರಿಸಿ, "ಮಿಸ್ಟರ್ ಕೆವಿನ್ ನಮ್ಮ ಜೊತೆ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ನಾವು ಯಾವಾಗ ಹೊರಗೆ ಹೋದರೂ, ನನ್ನ ಕುಟುಂಬ ಮತ್ತು ಮಕ್ಕಳಿಗೆ ಇವರೇ ರಕ್ಷಣೆ ನೀಡುತ್ತಾರೆ" ಎಂದಿದ್ದಾರೆ.
ಭಾರತೀಯರ ಪ್ರೀತಿಗೆ ಕೆವಿನ್ ಫಿದಾ
ಕಳೆದ ಕೆಲವು ವಾರಗಳಿಂದ ರಾಮ್‌ಚರಣ್ ಹೋದ ಕಡೆಯಲ್ಲೆಲ್ಲಾ ಕೆವಿನ್ ಕುಂಟಾ ಅವರ ರಗಡ್ ಲುಕ್ ಮತ್ತು ಭಿನ್ನವಾದ ವ್ಯಕ್ತಿತ್ವ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಭಾರತದಲ್ಲಿ ತಮಗೆ ಸಿಗುತ್ತಿರುವ ಈ ಅಪಾರ ಪ್ರೀತಿ ಮತ್ತು ಅಭಿಮಾನದ ಬಗ್ಗೆ ಸ್ವತಃ ಕೆವಿನ್ ಅವರಿಗೂ ಅರಿವಿದೆ. ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದರಲ್ಲಿ ಕೆವಿನ್, ತಮಗೆ ಇಷ್ಟೊಂದು ಪ್ರೀತಿ ತೋರಿಸುತ್ತಿರುವ ಪ್ರತಿಯೊಬ್ಬ ಭಾರತೀಯರಿಗೂ ಮನಸಾರೆ ಧನ್ಯವಾದ ತಿಳಿಸಿದ್ದಾರೆ. 'ಪೆದ್ದಿ' ಸಿನಿಮಾ ಬಿಡುಗಡೆಗೂ ಮುನ್ನವೇ ರಾಮ್ ಚರಣ್ ಅವರ ಬಾಡಿಗಾರ್ಡ್ ಭಾರತದಲ್ಲಿ ಇಂಟರ್ನೆಟ್ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ.












Click it and Unblock the Notifications