Kolar : ತಲೆನೋವಾದ ಮತ್ತೊಂದು ಆಂತರಿಕ ವರದಿ, ಸಿದ್ದರಾಮಯ್ಯಗೆ ಕೋಲಾರ ರಿಸ್ಕ್?
ಒಂದು ಕಡೆ ಪಕ್ಷವನ್ನು ದಡ ಸೇರಿಸುವ ಟಾಸ್ಕ್ ಹೆಗಲ ಮೇಲೆ ಹೊತ್ತುಕೊಂಡಿರುವ ಸಿದ್ದರಾಮಯ್ಯನವರಿಗೆ, ಕೋಲಾರದ ಸ್ಥಳೀಯ ಕಾಂಗ್ರೆಸ್ ಮುಖಂಡರು ನಡೆಸಿದ್ದ ಸಮೀಕ್ಷೆಯು ಮತ್ತಷ್ಟು ನಿದ್ದೆಗೆಡಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಏನದು ಆಂತರಿಕ ಸಮೀಕ್ಷೆ
ಕರ್ನಾಟಕ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಮುಖ ನಾಯಕರಿಗೆ ತಮ್ಮ ಪಕ್ಷದ ಜೊತೆಗೆ ತಮ್ಮ ಚಿಂತೆಯೂ ಹೆಚ್ಚಾಗ ತೊಡಗಿದೆ. ಕೆಪಿಸಿಸಿಯ ಕೆಲವೇ ಕೆಲವು ಪ್ರಮುಖ ನಾಯಕರಿಗೆ ಮಾತ್ರ ತಾವು ಪ್ರತಿನಿಧಿಸುವ ಕ್ಷೇತ್ರ ಸೇಫ್ ಎನಿಸಿದ್ದು, ಗೆಲ್ಲುವ ಖಚಿತ ವಿಶ್ವಾಸದಲ್ಲಿದ್ದಾರೆ.
ಅಸೆಂಬ್ಲಿ ಚುನಾವಣೆ ಹತ್ತಿರುವಾಗುತ್ತಿರುವುದರಿಂದ ಎಲ್ಲಕ್ಕಿಂತ ಹೆಚ್ಚು ಚರ್ಚೆಯಾಗುತ್ತಿರುವುದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವುದು. ಸದ್ಯ, ಬಹುತೇಕ ಸಿದ್ದರಾಮಯ್ಯನವರು ಕೋಲಾರದಿಂದಲೇ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಮುನ್ನಲೆಯಲ್ಲಿದೆ.
ಒಂದು ಕಡೆ ಪಕ್ಷವನ್ನು ದಡ ಸೇರಿಸುವ ಟಾಸ್ಕ್ ಹೆಗಲ ಮೇಲೆ ಹೊತ್ತುಕೊಂಡಿರುವ ಸಿದ್ದರಾಮಯ್ಯನವರಿಗೆ, ಕೋಲಾರದ ಸ್ಥಳೀಯ ಕಾಂಗ್ರೆಸ್ ಮುಖಂಡರು ನಡೆಸಿದ್ದ ಸಮೀಕ್ಷೆಯು ಮತ್ತಷ್ಟು ನಿದ್ದೆಗೆಡಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇನ್ನೊಂದು ಕಡೆ, ಕಳೆದ ಭಾನುವಾರ (ಫೆ 12) ಬೆಂಗಳೂರಿನ ಬಸವ ಸಮಿತಿಯ ಸಭಾಂಗಣದಲ್ಲಿ ನಡೆದ ವೀರಶೈವ-ಲಿಂಗಾಯತ ಸಮುದಾಯದ ನಾಯಕರಿಂದ ಸಿಎಂ ಸ್ಥಾನದ ಬೇಡಿಕೆ ಮತ್ತು ಸಮುದಾಯದ ನಾಯಕರಿಗೆ 75 ಟಿಕೆಟ್ ಕೊಡಬೇಕು ಎನ್ನುವ ಕೂಗು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿದೆ. ಕೋಲಾರದಲ್ಲಿ ಏನಿದೆ ಆಂತರಿಕ ವರದಿ..

ಆಂತರಿಕ ವರದಿಯೇ ನಿಜವಾಗಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲು
ಕಳೆದ ಚುನಾವಣೆಯಲ್ಲಿ (2018) ಕೂಡಾ ಸಿದ್ದರಾಮಯ್ಯನವರು ಇಂತದ್ದೇ ಒತ್ತಡವನ್ನು ಎದುರಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರ ಸೇಫ್ ಅಲ್ಲ ಎನ್ನುವ ಅಂತಿಮ ಆಂತರಿಕ ವರದಿ ಬಂದ ಹಿನ್ನಲೆಯಲ್ಲಿ ಕೊನೇ ಕ್ಷಣದಲ್ಲಿ ಹೈಕಮಾಂಡ್ ಮನವೊಲಿಸಿ ಬಾದಾಮಿಯಿಂದಲೂ ಸ್ಪರ್ಧಿಸಿದರು. ಕೊನೆಗೆ, ಆಂತರಿಕ ವರದಿಯೇ ನಿಜವಾಗಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲುಂಡಿದ್ದರು. ಈಗ, ಕೋಲಾರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಸಿದ್ದತೆಯನ್ನು ನಡೆಸಿದ್ದಾರೆ.

ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೆಚ್ಚು ಸಮಯವನ್ನು ಮೀಸಲಿಡಬೇಕು
ಕೋಲಾರದ ಸ್ಥಳೀಯ ಮುಖಂಡರು ಮತ್ತು ಸಿದ್ದರಾಮಯ್ಯನವರು ಆಪ್ತರು ಆಂತರಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ಅವರಿಗೆ ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಿದ್ದಾರೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ. ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೆಚ್ಚು ಸಮಯವನ್ನು ಮೀಸಲಿಡಬೇಕು, ನಿರಂತರ ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಸಂಪರ್ಕದಲ್ಲಿರಬೇಕು ಎನ್ನುವ ಮಾತನ್ನು ಸಿದ್ದರಾಮಯ್ಯನವರ ಆಪ್ತರು ಹೇಳಿದ್ದಾರೆ ಎಂದು ವರದಿಯಾಗಿದೆ.

ವರ್ತೂರು ಪ್ರಕಾಶ್ ಅವರು ಸ್ಥಳೀಯವಾಗಿ ವರ್ಚಸ್ಸನ್ನು ಹೊಂದಿರುವ ನಾಯಕ
ಕುರುಬ ಸಮುದಾಯದವರು ಇತ್ತೀಚೆಗೆ ಸಭೆ ಸೇರಿ ಸಿದ್ದರಾಯಯ್ಯನವರಿಗೆ ತಮ್ಮ ಬೆಂಬಲ ಎಂದೇನೋ ಹೇಳಿದ್ದಾರೆ. ಆದರೆ, ಅದೇ ಸಮುದಾಯದ ವರ್ತೂರು ಪ್ರಕಾಶ್ ಅವರು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಒಂದು ವೇಳೆ ಅವರು ನಿಂತಿದ್ದೇ ಆದಲ್ಲಿ ಇದು ಸಿದ್ದರಾಮಯ್ಯನವರಿಗೆ ಹಿನ್ನಡೆಯಾಗುವ ಸಾಧ್ಯತೆಯಿಲ್ಲದಿಲ್ಲ. ಯಾಕೆಂದರೆ, ವರ್ತೂರು ಪ್ರಕಾಶ್ ಅವರು ಸ್ಥಳೀಯವಾಗಿ ವರ್ಚಸ್ಸನ್ನು ಹೊಂದಿದ್ದಾರೆ. ಇದರ ಲಾಭ ಜೆಡಿಎಸ್ಸಿಗೆ ಎನ್ನುವ ಮಾಹಿತಿಯನ್ನು ಸ್ಥಳೀಯ ಮುಖಂಡರು ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಿ.ಎಂ.ಆರ್ ಶ್ರೀನಾಥ್ ಅವರು ಜೆಡಿಎಸ್ ಅಭ್ಯರ್ಥಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಈಗಾಗಲೇ ಕೋಲಾರದಿಂದ, ಸಿ.ಎಂ.ಆರ್ ಶ್ರೀನಾಥ್ ಅವರು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಸ್ಥಳೀಯವಾಗಿ ಉತ್ತಮ ಹೆಸರನ್ನು ಹೊಂದಿರುವ ಶ್ರೀನಾಥ್ ಅವರು ಈಗಾಗಲೇ ಪ್ರಚಾರವನ್ನು ಆರಂಭಿಸಿದ್ದಾಗಿದೆ. ಶ್ರೀನಾಥ್ ಅವರನ್ನು ಗೆಲ್ಲಿಸಿ ರೈತರ ಶಕ್ತಿ ಏನು ಎನ್ನುವುದನ್ನು ತೋರಿಸುತ್ತೇವೆ ಎಂದು ಸ್ಥಳೀಯರು ಮಾತನಾಡುತ್ತಿರುವುದು ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯಗೆ ತೊಡಕಾಗುವ ಸಾಧ್ಯತೆಯಿಲ್ಲದಿಲ್ಲ. ಹಾಗಾಗಿ, ಕಳೆದ ಚುನಾವಣೆಯಂತೆ ಈ ಬಾರಿಯೂ ಅದೇ ಸಂದಿಗ್ದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಸಿಲುಕಲಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ..












Click it and Unblock the Notifications