ಕೋಲಾರದಲ್ಲಿ 13ರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಕೋಲಾರ, ನವೆಂಬರ್ 18: ಹದಿಮೂರು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹಂಗಳ ಗ್ರಾಮದಲ್ಲಿ ನಡೆದಿದೆ.
ಬಾಲಕಿಯ ಮೇಲೆ ನ.15ರ ಭಾನುವಾರ ರಾತ್ರಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ನಾಲ್ವರು ಆರೋಪಿಗಳನ್ನು ಬೇತಮಂಗಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಹರೀಶ್, ರಘು, ಸುಹೇಲ್, ಜಗದೀಶ್ ಎಂಬುವರು ಆರೋಪಿಗಳಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಾಲ್ವರು ಆರೋಪಿಗಳು ಹಂಗಳ ಗ್ರಾಮದವರೇ ಆಗಿದ್ದು, ಹೊಂಚು ಹಾಕಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆ ಅಪ್ರಾಪ್ತೆಯಾದ್ದರಿಂದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರೇಣುಕಾ ಯಲ್ಲಮ್ಮ ಬಳಗದ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಬಾಲಕಿಯ ಪೋಷಕರು ನ್ಯಾಯಕ್ಕಾಗಿ ಅಂಗಲಾಚಿದರು. ಜಿಲ್ಲೆಯ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಮರುಕಳಿಸದೆ ಇರುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಬಳಗದ ಅಧ್ಯಕ್ಷ್ಯ ನಾರಾಯಣಸ್ವಾಮಿ ಮನವಿ ಮಾಡಿದರು.












Click it and Unblock the Notifications