ಕೋಲಾರ : ಮದುವೆ ಮನೆಯಲ್ಲಿ ಹೈಡ್ರಾಮ, ವಧು-ವರ ನಾಪತ್ತೆ!
ಕೋಲಾರ, ಜನವರಿ 28 : ಅದ್ದೂರಿಯಾಗಿ ನಡೆಯಬೇಕಾಗಿದ್ದ ಮದುವೆಯಲ್ಲಿ ಹೈಡ್ರಾಮ ನಡೆದಿದೆ. ಮೊದಲು ವಧು ನಂತರ ವರ ನಾಪತ್ತೆಯಾಗಿ ಮದುವೆ ಮುರಿದುಬಿದ್ದಿದೆ.
ಭಾನುವಾರ ಬಂಗಾರಪೇಟೆಯ ನೆರ್ನಹಳ್ಳಿ ಗ್ರಾಮದ ಎನ್.ಸೌಮ್ಯಾ, ಮಾಲೂರಿನ ಚೆನ್ನಕಲ್ಲು ಗ್ರಾಮದ ಸಿ.ಎಂ.ಗುರ್ರೇಶ್ ವಿವಾಹ ನಡೆಯಬೇಕಿತ್ತು. ಕೋಲಾರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು.
ಶನಿವಾರ ರಾತ್ರಿ ಆರತಕ್ಷತೆಗಾಗಿ ಗುರ್ರೇಶ್ ಕುಟುಂಬದವರು ಬಂದಿದ್ದರು. ಆದರೆ, ಸೌಮ್ಯ ಕುಟುಂಬದವರು 9 ಗಂಟೆಯಾದರೂ ಕಲ್ಯಾಣ ಮಂಟಪಕ್ಕೆ ಬಂದಿರಲಿಲ್ಲ. ಸಂಪರ್ಕಿಸಲು ಎಲ್ಲಾ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು.

ವರನ ಕಡೆಯವರು ಸೌಮ್ಯ ಮನೆಗೆ ಹೋದಾಗ ವಧು ನಾಪತ್ತೆಯಾದ ವಿಚಾರ ಬೆಳಕಿಗೆ ಬಂದಿದೆ. ಆಗ ವರನ ಕಡೆಯವರು ಗಲಾಟೆ ಆರಂಭಿಸಿದ್ದಾರೆ. ಕುಟುಂಬದ ಹಿರಿಯರು ಸೇರಿ ತಡರಾತ್ರಿ ತನಕ ಪಂಚಾಯಿತಿ ಮಾಡಿ ಒಂದು ತೀರ್ಮಾನಕ್ಕೆ ಬಂದರು.
ಮದುವೆ ಫಿಕ್ಸ್ : ವಧುವಿನ ಚಿಕ್ಕಪ್ಪನ ಮಗಳು ವೆಂಕಟರತ್ನಮ್ಮ ಜೊತೆ ಭಾನುವಾರ ನಿಗದಿಯಾಗಿದ್ದ ಮುಹೂರ್ತದಲ್ಲೇ ಸಿ.ಎಂ.ಗುರ್ರೇಶ್ ವಿವಾಹ ಮಾಡಲು ತೀರ್ಮಾನವಾಯಿತು. ತಡರಾತ್ರಿ ಕಲ್ಯಾಣಮಂಟಪಕ್ಕೆ ಬಂದು ಶಾಸ್ತ್ರಗಳನ್ನು ಮುಗಿಸಲಾಯಿತು.
ಭಾನುವಾರ ಮುಂಜಾನೆ 5ಗಂಟೆಗೆ ವರ ಸಿ.ಎಂ.ಗುರ್ರೇಶ್ ಸಹ ನಾಪತ್ತೆಯಾಗಿ, ಹೊರ ಹೈಡ್ರಾಮ ನಡೆಯಿತು. ಶೇವಿಂಗ್ ಮಾಡಿಸಿಕೊಂಡು ಬರುವೆ ಎಂದು ಹೋದ ವರ ಬರಲಿಲ್ಲ. ಮೊಬೈಲ್ ಸ್ವಿಚ್ ಆಫ್.
8.15ರಿಂದ 9.15ರ ಮುಹೂರ್ತದಲ್ಲಿ ವಿವಾಹ ನಡೆಯಬೇಕಿತ್ತು. ಆದರೆ, ವಧು, ವರ ನಾಪತ್ತೆಯಾದ ಹಿನ್ನಲೆಯಲ್ಲಿ ಗೊಂದಲ ಸೃಷ್ಟಿಯಾಗಿ ಮದುವೆ ಮುರಿದು ಬಿತ್ತು. ಮದುವೆಗೆ ಬಂದವರು ಮನೆಗೆ ವಾಪಸ್ ಆದರು.












Click it and Unblock the Notifications