ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ: ಯುವತಿಯ ಧರಣಿ
ಕೋಲಾರ, ಜನೆವರಿ 1: ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಪ್ರಿಯಕರ ಕೈ ಕೊಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮದಲ್ಲಿ ನಡೆದಿದೆ.
ಮನಸಾರೆ ಪ್ರೀತಿಸಿದ ಯುವಕ ಈಗ ಯುವತಿಗೆ ಕೈ ಕೊಟ್ಟಿದ್ದು, ಪ್ರೀತಿಸಿದವನಿಗಾಗಿ ಪ್ರಿಯಕರನ ಮನೆ ಮುಂದೆ ಯುವತಿಯು ಧರಣಿ ನಡೆಸುತ್ತಿದ್ದಾಳೆ. ಹಾಸನ ಮೂಲದ ಮೇಘನಾ ಎಂಬ ಯುವತಿಯೇ ಪ್ರೀತಿಸಿ ಮೋಸ ಹೋಗಿದ್ದಾಳೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮದ ಯುವಕ ಹರೀಶ್ ಹಾಗೂ ಹಾಸನ ಮೂಲದ ಮೇಘನಾ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿಯೂ ಯುವಕ ನಂಬಿಸಿದ್ದನಂತೆ. ಈಗ ಕೈ ಎತ್ತಿದ್ದು, ಯುವಕನಿಗಾಗಿ ಯುವತಿಯ ಪಟ್ಟು ಹಿಡಿದಿದ್ದಾಳೆ.

ತನ್ನ ಬಳಿ ಮದುವೆ ಆಗುವುದಾಗಿ ಹೇಳಿ 5 ಲಕ್ಷ ದುಡ್ಡು ಪಡೆದಿದ್ದಾನೆ. ಎರಡು ವರ್ಷಗಳಿಂದ ಪ್ರೀತಿಸಿ ಕೈ ಕೊಟ್ಟಿದ್ದಾನೆ ಎಂದು ಮೋಸ ಹೋದ ಯುವತಿ ಮೇಘನಾ ಆರೋಪಿಸಿದ್ದಾಳೆ.

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಘನಾ ಹಾಗೂ ಅದೇ ಕಂಪನಿಯಲ್ಲಿ ಟಾಟಾ ಏಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ನಡುವೆ ಪ್ರೀತಿ ಅರಳಿತ್ತು. ಈಗ ಯಾವುದೋ ಕಾರಣಕ್ಕೆ ಬ್ರೇಕ್ ಅಪ್ ಆಗಿದ್ದು, ಯುವಕನ ವಿರುದ್ಧ ಯುವತಿ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.












Click it and Unblock the Notifications