ಕೋಲಾರದಲ್ಲಿ ಆಪಲ್ ಘಟಕ ನಿರ್ಮಾಣ, 10 ಸಾವಿರ ಉದ್ಯೋಗ ಸೃಷ್ಟಿ
ಕೋಲಾರ, ಜುಲೈ 25 : ಪ್ರತಿಷ್ಠತ ಆಪಲ್ ಕಂಪನಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದೆ. ಆಪಲ್ ಉತ್ಪನ್ನಗಳನ್ನು ತಯಾರಿಸುವ ದೇಶದ ಅತೀ ದೊಡ್ಡ ಘಟಕ ಕೋಲಾರದಲ್ಲಿ ಸ್ಥಾಪನೆಯಾಗಲಿದೆ.
ಆಪಲ್ ಕಂಪನಿಯ ಅಧಿಕಾರಿಗಳ ತಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಘಟಕ ನಿರ್ಮಾಣ ಮಾಡುವ ಕುರಿತು ಮಾತುಕತೆ ನಡೆಸಿತು. ಭೂಮಿ ನೀಡುವಂತೆ ಮನವಿ ಸಲ್ಲಿಸಿತು.
ಕಂಪನಿ ಸುಮಾರು 3000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದ್ದು, ದೇಶದಲ್ಲಿಯೇ ಅತೀ ದೊಡ್ಡ ಘಟಕವನ್ನು ನಿರ್ಮಾಣ ಮಾಡಲಿದೆ. ಈ ಘಟಕದಿಂದ ಸುಮಾರು 10,500 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಿಯೋಗ ವಿವರಣೆ ನೀಡಿದಂತೆ 43 ಎಕರೆ ಪ್ರದೇಶದಲ್ಲಿ ಐ ಫೋನ್ ತಯಾರಿಕಾ ಘಟಕ ನಿರ್ಮಾಣವಾಗಲಿದೆ. ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಸ್ವಾಗತಿಸಿದ್ದು, ಭೂಮಿ ಮಂಜೂರು ಮಾಡಲು ಬೇಕಾದ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 'ಏಳು ದಿನದಲ್ಲಿ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಘಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಭರವಸೆಯನ್ನು ಕಂಪನಿ ನೀಡಿದೆ' ಎಂದು ಹೇಳಿದರು.












Click it and Unblock the Notifications