ಕೋಲಾರ : ರಸ್ತೆ ಅಪಘಾತ, ಶಾಲಾ ವಿದ್ಯಾರ್ಥಿಗಳ ದುರ್ಮರಣ
ಕೋಲಾರ, ಮಾರ್ಚ್ 22 : ಕೋಲಾರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳು.
ಕೋಲಾರ ತಾಲೂಕಿನ ವಡಗೂರು ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಸಂಜೆ ಈ ಅಪಘಾತ ನಡೆದಿದೆ. ವೇಗವಾಗಿ ಬಂದ ಕಾರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಕೆಂಬೋಡಿ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಾರಾಯಣಸ್ವಾಮಿ (13), 7ನೇ ತರಗತಿ ವಿದ್ಯಾರ್ಥಿ ಸುದರ್ಶನ್ (12) ಎಂದು ಗುರುತಿಸಲಾಗಿದೆ. ವಡಗೂರು ಗ್ರಾಮದ ವೆಂಕಟಪ್ಪ (25) ಸಹ ಮೃತಪಟ್ಟಿದ್ದಾರೆ.

ರಾಮಸಂದ್ರ ಗ್ರಾಮದ ನಾರಾಯಣಸ್ವಾಮಿ ಮತ್ತು ಸುದರ್ಶನ್ ಶಾಲೆ ಮುಗಿದ ಬಳಿಕ ವಡಗೂರು ಗೇಟ್‌ನಲ್ಲಿ ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಅದೇ ಮಾರ್ಗದಲ್ಲಿ ವೆಂಕಟಪ್ಪ ಬೈಕ್‌ನಲ್ಲಿ ತೆರಳುತ್ತಿದ್ದರು.
ಆಗ ವೇಗವಾಗಿ ಬಂದ ಕಾರು ಮೊದಲು ವೆಂಕಟಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಬಸ್ಸಿಗಾಗಿ ಕಾಯುತ್ತಿದ್ದ ನಾರಾಯಣಸ್ವಾಮಿ ಮತ್ತು ಸುದರ್ಶನ್ ಅವರಿಗೆ ಡಿಕ್ಕಿ ಹೊಡೆದಿದೆ. ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ವಿಜಯ್ ಕುಮಾರ್ ಎಂಬ ವಿದ್ಯಾರ್ಥಿ ಹಾಗೂ ವಡಗೂರಿನ ಸುಬ್ರಮಣ್ಯ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications