ಯುಪಿಎಸ್‌ಸಿ ನಡೆಸಿದ ಎಂಇಎಸ್ ಪರೀಕ್ಷೆಯಲ್ಲಿ ವಿಜಯಶ್ರೀ ದೇಶಕ್ಕೆ ಪ್ರಥಮ ಸ್ಥಾನ!
ಕಾರವಾರ, ಫೆಬ್ರವರಿ 13: ಯುಪಿಎಸ್‌ಸಿ ನಡೆಸಿದ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅಂಕೋಲಾ ಮೂಲದ ವಿಜಯಶ್ರೀ ನಾಯಕ ಎಂಇಎಸ್‌ನ ಡೆಪ್ಯುಟಿ ಆರ್ಕಿಟೆಕ್ಟ್ ಆಗಿ ನೇಮಕಗೊಂಡಿದ್ದಾರೆ.
ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಮಿಲಿಟರಿ ಇಂಜಿನಿಯರಿಂಗ್ ಸರ್ವೀಸ್ (ಎಂಇಎಸ್) ವಿಭಾಗದ ಏಳು ಉಪ ವಾಸ್ತುಶಿಲ್ಪಿ ಹುದ್ದೆಗಳ ನೇಮಕಾತಿಗಾಗಿ 2018-19ರಲ್ಲಿ ಯುಪಿಎಸ್‌ಸಿ ಅರ್ಜಿ ಆಹ್ವಾನಿಸಿತ್ತು. 2019ರ ಅಕ್ಟೋಬರ್‌ನಲ್ಲಿ ಆನ್‌ಲೈನ್ ಮೂಲಕ ಲಿಖಿತ ಪರೀಕ್ಷೆ ನಡೆದಿತ್ತು. ಕಳೆದ ಜ.7ರಂದು ಸಂದರ್ಶನ ನಡೆದಿತ್ತು.
'ಬಾಂಬೆ ಬೇಗಮ್ಸ್' ನೆಟ್ ಫ್ಲಿಕ್ಸ್ ಸಿರೀಸ್ ನಲ್ಲಿ ಉತ್ತರ ಕನ್ನಡದ ಕುವರಿ!
ಗುರುವಾರ ಫಲಿತಾಂಶ ಪ್ರಕಟವಾಗಿದ್ದು, ಅಂತಿಮ ಪಟ್ಟಿಯಲ್ಲಿದ್ದ ದೇಶದ 200ಕ್ಕೂ ಅಧಿಕ ಅಭ್ಯರ್ಥಿಗಳ ಪೈಕಿ ವಿಜಯಶ್ರೀ ಮೊದಲ ಸ್ಥಾನ ಪಡೆದಿದ್ದಾರೆ. ಕರ್ನಾಟಕದಿಂದ ಈ ಹುದ್ದೆಗೆ ಆಯ್ಕೆಯಾದ ಮೊದಲಿಗರಾಗಿದ್ದಾರೆ.
ಈಕೆ ಮೂಲತಃ ಹಿಚ್ಚಡ ಗ್ರಾಮದ ನಿವೃತ್ತ ಡಿವೈಎಸ್‌ಪಿ ವಾಸುದೇವ ನಾಯಕ ಮತ್ತು ಗುಳ್ಳಾಪುರದ ಸರ್ಕಾರಿ ಕಾಲೇಜ್ ಉಪನ್ಯಾಸಕಿ ಕಲ್ಪನಾ ನಾಯಕ ದಂಪತಿಯ ಪುತ್ರಿ ವಿಜಯಶ್ರೀ ನಾಯಕ.
ಲಂಡನ್ ಮೂಲದ ಖಾಸಗಿ ಕಂಪನಿಯಲ್ಲಿ ವಾಸ್ತುಶಿಲ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಅಲ್ಲಿನ ಸರ್ಕಾರಿ ಕಾಮಗಾರಿಗಳ ವಿನ್ಯಾಸ ನನ್ನ ಕೆಲಸವಾಗಿತ್ತು. ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಇಚ್ಛೆ ಇತ್ತು. ಈ ಫಲಿತಾಂಶ ನೋಡಿ ತುಂಬಾ ಖುಷಿಯಾಗಿದೆ ಎಂದು ವಿಜಯಶ್ರೀ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.