ಅಂಕೋಲಾ; ಹೊಂಡೆಯಾಟದ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
ಕಾರವಾರ, ಅಕ್ಟೋಬರ್, 21: ದೀಪಾವಳಿ ಹಬ್ಬದ ಪ್ರಯುಕ್ತ ವಿವಿಧ ಕಡೆ ಆಯಾ ಸಂಪ್ರದಾಯದಂತೆ ಕ್ರೀಡೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಅದರಂತೆಯೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಹೊಂಡೆ ಆಟವೊಂದನ್ನು ಆಡಲಾಗುತ್ತದೆ. ವೀರತ್ವ ಪ್ರತೀಕವಾಗಿ ಹಾಗೂ ಸೌಹಾರ್ದತೆಯ ಸಂಕೇತವಾಗಿ ಹೊಂಡೆಕಾಯಿಯಿಂದ ಪರಸ್ಪರ ಹೊಡೆದಾಡಿಕೊಳ್ಳುವ ಸಂಪ್ರದಾಯವು ಎಲ್ಲರ ಗಮನ ಸೆಳೆಯುತ್ತದೆ.
ಹೌದು ಅಂಕೋಲಾ ಪಟ್ಟಣದಲ್ಲಿ ಕಳೆದ ಹಲವಾರು ವರ್ಷದಿಂದ ಕೋಮಾರಪಂಥ ಸಮಾಜದವರು ದೀಪಾವಳಿಯ ಬಲಿಪಾಡ್ಯ ದಿನದಂದು ಹೊಂಡೆ ಆಟವನ್ನು ಆಡುತ್ತಾರೆ. ವೀರತ್ವದ ಪ್ರತೀಕ, ಸೌಹಾರ್ದತೆಯ ಸಂಕೇತದವಾದ ಹೊಂಡೆಹಬ್ಬವನ್ನು ಅಕ್ಟೋಬರ್ 26ರ ಬುಧವಾರದಂದು ಆಚರಿಸಲಾಗುತ್ತಿದೆ. ದೀಪಾವಳಿಯ ಬಲಿ ಪಾಡ್ಯಮಿಯ ದಿನದಂದು ಇಲ್ಲಿನ ಕ್ಷತ್ರೀಯ ಕೋಮಾರಪಂಥ ಸಮಾಜದ ಬಾಂಧವರು ಆಡುವ ರೋಮಾಂಚನಕಾರಿ ಈ ಹೊಂಡೆ ಹಬ್ಬವನ್ನು ಸಹಸ್ರಾರು ಜನ ವೀಕ್ಷಿಸಲು ಕಾತುರದಲ್ಲಿ ಕಾಯುತ್ತಿದ್ದಾರೆ.
ಕೋಮಾರಪಂಥ ಸಮಾಜದವರು ಮೂಲತಃ ಕ್ಷತ್ರಿಯ ವರ್ಗಕ್ಕೆ ಸೇರಿದವರಾಗಿದ್ದು, ಯುದ್ಧದ ಸಂದರ್ಭದಲ್ಲಿ ಕೋಮಾರಪಂಥ ಸಮಾಜ ತನ್ನದೇ ಆದ ಕೊಡುಗೆ ನೀಡಿದ ಐತಿಹಾಸಿಕ ಹಿನ್ನೆಲೆಗಳಿವೆ. ಕೋಮಾರಪಂಥ ಸಮಾಜ ಅಂದು ನಾಡಿನ ರಕ್ಷಣೆಗೆ ಯುದ್ಧದಲ್ಲಿ ತೋರಿದ ಸಾಹಸದ ಸಂಕೇತವಾಗಿ ಇಂದು ಪ್ರಸ್ತುತವಾಗಿ ಹೊಂಡೆಕಾಯಿಯಿಂದ ಪರಸ್ಪರ ಹೊಡೆದಾಡುವುದರ ಮೂಲಕ ತಮ್ಮ ಸಂಪ್ರದಾಯವನ್ನು ಅನಾವರಣಗೊಳಿಸಲಿದೆ. ಈ ಆಟದಲ್ಲಿ ಸಮಾಜದ ಸೌಹಾರ್ದತೆಯ ಸಂಕೇತವನ್ನು ಕಾಣಬಹುದಾಗಿದೆ. ಎಲ್ಲ ಸಮುದಾಯದವರ ಸಾಮರಸ್ಯಕ್ಕೆ ಸಾಕ್ಷಿಯಾದ ಹೊಂಡೆಯಾಟವು ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಹೊಂಡೆಯಾಟದ ವಿಶೇಷತೆ ಏನು?
ಈ ಹೊಂಡೆ ಹಬ್ಬದಲ್ಲಿ ಕೋಮಾರಪಂಥ ಸಮಾಜದ ಲಕ್ಷ್ಮೇಶ್ವರ ಹಾಗೂ ಹೊನ್ನೇಕೇರಿಯ ಊರಿನ ಎರಡು ತಂಡಗಳು ಪಾಲ್ಗೊಳ್ಳುತ್ತವೆ. ಕುಂಬಾರ ಕೇರಿಯ ಕಳಸ ದೇವಸ್ಥಾನದಿಂದ ಹೊರಟ ಲಕ್ಷ್ಮೇಶ್ವರ ತಂಡವು ವೀರಾವೇಶದಿಂದ ಹೊಂಡೆ ಹೊಂಡೆ ಎನ್ನುತ್ತ ಎದುರಾಳಿಯನ್ನು ಎದುರಿಸಲು ನಗರದ ಶ್ರೀ ಶಾಂತಾದುರ್ಗ ದೇವಸ್ಥಾನದವರೆಗೂ ಬರುತ್ತದೆ. ಅಲ್ಲಿ ಹೊನ್ನೇಕೇರಿ ತಂಡದ ನಡುವೆ ಮುಖಾಮುಖಿಯಾಗಲಿದ್ದು, ಎರಡೂ ಗ್ರಾಮದ ಹಿರಿಯರಿಂದ ಹೊಂಡೆ ಆಟಕ್ಕೆ ಚಾಲನೆ ದೊರೆಯುತ್ತದೆ.

ಹೊಂಡೆಯಾಟದ ನಿಯಮಗಳ ವಿವರ
ಈ ಹಬ್ಬದ ನಿಯಮದಂತೆ ಮಂಡಿಯ ಕೆಳಭಾಗಕ್ಕೆ ಹೊಡೆಯಬೇಕೆನ್ನುವ ನಿಯಮ ಪಾಲಿಸಬೇಕಾಗುತ್ತದೆ. ಆದರೂ ಕೆಲವೊಮ್ಮೆ ಗುರಿತಪ್ಪಿ ಎದುರಾಳಿಯು ತೀವ್ರ ತರಹದ ಹೊಡೆತಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇವುಗಳನ್ನು ನಿಯಂತ್ರಿಸಲು ಸಮಾಜದ ಮುಖಂಡರು ನಿರ್ಣಾಯಕರಾಗಿರುತ್ತಾರೆ. ಎರಡು ಪಂಗಡಗಳಲ್ಲಿ ಯಾರು ಸಮರ ವೀರರು ಎನ್ನುವುದನ್ನು ಮುಖಂಡರ ತೀರ್ಮಾನದ ಮೂಲಕ ನಿರ್ಧಾರವಾಗುತ್ತದೆ. ಹೊಂಡೆ ಹಬ್ಬದಲ್ಲಿ ಗೆದ್ದ ಪಂಗಡಕ್ಕೆ ದೊಡ್ಡ ಮೊಗೆ ಕಾಯಿಯನ್ನು ನೀಡಿದರೆ, ಎರಡನೇ ಪಂಗಡಕ್ಕೆ ಸಣ್ಣ ಮೊಗೆಕಾಯಿಯನ್ನು ನೀಡುವ ಸಂಪ್ರದಾಯ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ.

ಕ್ಷತ್ರೀಯ ವರ್ಚಸ್ಸಿನ ತೋರ್ಪಡಿಕೆ
ನಗರದ ಮಧ್ಯವರ್ತಿ ಸ್ಥಳಗಳ ನಾಲ್ಕು ಕಡೆಗಳಲ್ಲಿ ಹೊಂಡೆಯೊಂದಿಗೆ ಹೋರಾಟಕ್ಕಿಳಿದು ತಮ್ಮ ಕ್ಷತ್ರೀಯ ವರ್ಚಸನ್ನು ತೋರ್ಪಡಿಸುತ್ತಾರೆ. ನಂತರ ಎರಡು ಪಂಗಡಗಳು ಒಂದಾಗಿ ಊರಿನ ದೊಡ್ಡ ದೇವರನಿಸಿಕೊಂಡ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಹೋರಾಟದ ನೆನಪುಗಳನ್ನು ಮೆಲಕು ಹಾಕುತ್ತಾರೆ. ಅಲ್ಲದೆ ಹೊಂಡೆ ಹಬ್ಬದ ಸಮಯದಲ್ಲಿ ಆದ ಸಣ್ಣಪುಟ್ಟ ತಪ್ಪುಗಳನ್ನು ಒಪ್ಪಿಕೊಂಡು ಸಮಾಜದವರೆಲ್ಲ ಒಂದಾಗಿ ಬಾಳೋಣ ಎನ್ನುವ ಸಾಮರಸ್ಯವನ್ನು ಮೂಡಿಸುತ್ತಾರೆ.

ಐತಿಹಾಸಿಕ ಹಿನ್ನೆಲೆಯುಳ್ಳ ಹೊಂಡೆ ಹಬ್ಬ
ಅನಾದಿಕಾಲದಿಂದಲೂ ಕೋಮಾರಪಂಥ ಸಮಾಜ ಹೊಂಡೆ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದು, ಇದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಇಂದಿನ ಆಧುನಿಕ ಯುಗದಲ್ಲೂ ಈ ಸಮಾಜ ತಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಶ್ರೀ ವೆಂಕರಮಣ ದೇವಾಲಯದ ಧರ್ಮದರ್ಶಿಗಳು ಹೇಳುತ್ತಿದ್ದಾರೆ.












Click it and Unblock the Notifications