'ಪದ್ಮಶ್ರೀ' ಪ್ರಶಸ್ತಿ ಸ್ವೀಕರಿಸಿದ ಉತ್ತರ ಕನ್ನಡದ ಪರಸರ ಪ್ರೇಮಿ ತುಳಸಿಗೌಡ
ನವದೆಹಲಿ, ನವೆಂಬರ್ 8: ಶತಮಾನ ಕಂಡಿರುವ ಪರಿಸರ ಪ್ರೇಮಿ, ಕಾರವಾರ ಜಿಲ್ಲೆಯ ಅಂಕೋಲದ ಹಾಲಕ್ಕಿ ಮಹಿಳೆ ತುಳಸಿ ಗೌಡ ರಾಷ್ಟ್ರಪತಿ ರಾಮನಾಥ ಕೋವಿಂದ್‌ರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.
ಸಮಾಜ ಕಾರ್ಯಕ್ಕಾಗಿ ಕೇಂದ್ರ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ತುಳಸಿಗೌಡಗೆ ರಾಷ್ಟ್ರಪತಿ ಕೋವಿಂದ್ ಪದ್ಮಶ್ರೀ ಪ್ರದಾನ ಮಾಡಿದರು. ಕರ್ನಾಟಕದ ಪರಿಸರವಾದಿ ತುಳಸಿಗೌಡ ಈವರೆಗೂ ಲಕ್ಷಕ್ಕೂ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಕಳೆದ ಆರು ದಶಕಗಳಿಂದ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿರುವ ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ, ಹಾಲಕ್ಕಿ ಸಮುದಾಯದ ತುಳಸಿ ಗೌಡ ಸೇರಿದಂತೆ 21 ಮಂದಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.

ತುಳಸಿ ಗೌಡರನ್ನು ಈ ಶತಮಾನ ಕಂಡ ನಿಜವಾದ ಪರಿಸರ ಪ್ರೇಮಿ ಎಂದೇ ಕರೆಯಬಹುದು. ವೃಕ್ಷಮಾತೆಯಾದ ಈಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ ಲಕ್ಷಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ.
ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944 ರಲ್ಲಿ ಜನಿಸಿದ ಇವರು, ಬಡಕುಟುಂಬದ ಹಿನ್ನಲೆಯವರು. ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ತುಳಸಿಗೌಡ ಅವರು, ನಂತರ ಶಾಲೆ ಮೆಟ್ಟಿಲನ್ನೂ ಏರದೇ ತಾಯಿಯ ಜೊತೆ ಕೂಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದರು.
ಬೀಜಗಳನ್ನು ಶೇಖರಣೆ ಮಾಡುತ್ತಿದ್ದ ತುಳಸಿಗೌಡ
ಗೋವಿಂದೇಗೌಡ ಎನ್ನುವವರ ಜೊತೆ ಬಾಲ್ಯವಿವಾಹವಾದ ತುಳಸಿ ಸಹ ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ವಿಧವೆಯಾದರು. ಪರಿಸರ ಪ್ರೇಮ ಎನ್ನುವುದು ಈಕೆಗೆ ಹುಟ್ಟಿನಿಂದ ಬಂದಿತ್ತು. ಊರಿನವರ ಜೊತೆ ಸೌದೆ ತರುವ ಕೆಲಸವನ್ನು ಮಾಡಿ ಪ್ರತಿನಿತ್ಯ ಐದರಿಂದ ಆರು ರೂಪಾಯಿ ದುಡಿಯುತ್ತಿದ್ದರು.

ತುಳಸಿ ಗೌಡಗೆ ಅರಣ್ಯ ಇಲಾಖೆಯಿಂದ ಬೀಜಗಳನ್ನು ಶೇಖರಣೆ ಮಾಡಿ, ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ಬಹಳ ಖುಷಿಯಿಂದ ಮಾಡುತ್ತಿದ್ದರು. ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನ ಮಾಡುತ್ತಿದ್ದರು. ಎಲ್ಲರೂ ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಅಂದರೂ ಇವರ ಪರಿಸರ ಕಾಳಜಿಯಿಂದ ಕೆಲಸವನ್ನ ಮಾತ್ರ ನಿಲ್ಲಿಸಲಿಲ್ಲ.
ಕಳ್ಳರು ಮರಗಳನ್ನು ಕಡಿದಾಗ ಅತ್ತಿದ್ದ ತುಳಸಿಗೌಡ
ತುಳಸಿಗೌಡಗೆ ಪರಿಸರ ಪ್ರೀತಿ ಎಷ್ಟಿದೆ ಎಂದರೆ, ಇವರನ್ನು ಮರಗಳ ವಿಜ್ಞಾನಿ ಎಂದೇ ಹೇಳಬಹುದು. ಯಾವ ಯಾವ ಗಿಡಗಳನ್ನು ಯಾವ ಋತುವಿನಲ್ಲಿ ನೆಡಬೇಕು, ಎಷ್ಟು ನೀರು, ಗೊಬ್ಬರ ಬೇಕು, ಯಾವ ಗಿಡಗಳು ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತದೆ, ಹೀಗೆ ಅರಣ್ಯದಲ್ಲಿನ ಸುಮಾರು 300 ಕ್ಕೂ ಹೆಚ್ಚು ಪ್ರಭೇದದ ಮರಗಳ ಬಗ್ಗೆ ತುಳಸಿಗೆ ಮಾಹಿತಿ ಇದೆ. ಅರಣ್ಯದಲ್ಲಿನ ಪ್ರತಿ ಮರಗಳ ನಾಡಿ ಮಿಡಿತವನ್ನು ತುಳಸಿ ಹೇಳುತ್ತಾರೆ.
ತನ್ನ ಸುತ್ತಮುತ್ತಲೂ ಯಾರು ಮರಗಳನ್ನು ಕಡಿಯದಂತೆ, ಮರಗಳನ್ನು ತನ್ನ ಮಕ್ಕಳಂತೆ ಸಾಕುತ್ತಾರೆ. ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನು ಅರಣ್ಯ ಕಳ್ಳರು ಕಡಿದಾಗ ತುಳಸಿ ಮರವನ್ನ ಅಪ್ಪಿ ಅತ್ತ ಘಟನೆಗಳು ಸಾಕಷ್ಟಿದೆ. ಈಕೆ ಲಕ್ಷಾಂತರ ಮರಗಳನ್ನು ಬೆಳೆಸಿ ಇಂದಿಗೂ ತನ್ನ ಬೀಜದಿಂದ ಸಸಿ ಮಾಡಿ ನಂತರ ನೆಟ್ಟು ಪೋಷಿಸುವ ಕೆಲಸವನ್ನು ಮುಂದುವರೆಸಿದ್ದಾರೆ.
ರಾಷ್ಟ್ರವೇ ಮೆಚ್ಚುವ ಕೆಲಸ ಮಾಡಿರುವ ತುಳಸಿಗೌಡ
ತುಳಸಿ ಗೌಡರ ಸಾಧನೆಯನ್ನು ಮೆಚ್ಚಿ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ "ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ' ಈಗಾಗಲೇ ಲಭಿಸಿದೆ. ಅಂದಿನ ಪ್ರಧಾನಿ ವಿ.ಪಿ.ಸಿಂಗ್ ರಿಂದ ಪ್ರಶಸ್ತಿ ಪಡೆಯುವ ಮೂಲಕ ಹಾಲಕ್ಕಿ ಸಮುದಾಯದ ಮಹಿಳೆ ಇಡೀ ದೇಶದ ಗಮನ ಸೆಳೆದಿದ್ದರು.
ಇನ್ನು ರಾಜ್ಯೋತ್ಸವ ಪ್ರಶ್ತಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು, ಸಂಘ ಸಂಸ್ಥೆಗಳು ನೀಡುವ ಸನ್ಮಾನಗಳು, ತುಳಸಿ ಗೌಡರಿಗೆ ಲಭಿಸಿದೆ. ಆದರೂ ಇಂದಿಗೂ ಎಲೆ ಮರೆಯ ಕಾಯಿಯಂತೆ ತುಳಸಿ ಗೌಡ ತನ್ನ ಕಾಯಕವನ್ನು ಮುಂದುವರೆಸಿದ್ದಾರೆ. ನಿಜಕ್ಕೂ ಹಾಲಕ್ಕಿ ಅನ್ನುವ ಪುಟ್ಟ ಸಮುದಾಯದಲ್ಲಿ ಹುಟ್ಟಿ ತುಳಸಿ ಇಡೀ ರಾಷ್ಟ್ರವೇ ಮೆಚ್ಚುವಂತಹ ಕೆಲಸವನ್ನು ಮಾಡುವ ಮೂಲಕ ಸಾಧಕಿಯಾಗಿದ್ದಾರೆ.












Click it and Unblock the Notifications