ವಾಟೆಹೊಳೆ ಜಲಪಾತ ವೀಕ್ಷಣೆ ವೇಳೆ ದುರಂತ: ಇಬ್ಬರು ಯುವಕರು ಕಣ್ಮರೆ
ಉತ್ತರ ಕನ್ನಡ, ಫೆಬ್ರವರಿ 15: ಸಮುದ್ರ ತೀರಗಳಿಗೆ, ಜಲಪಾತಗಳ ಸಮೀಪ ತೆರಳಿದ ವೇಳೆ ಜಾಗ್ರತೆ ವಹಿಸಿ ಎಂದು ಎಷ್ಟೇ ಎಚ್ಚರಿಕೆ ನೀಡಿದರು ಸಹ ದುರಂತಗಳು ನಡೆಯುವುದು ಮಾತ್ರ ಕಮ್ಮಿಯಾಗುತ್ತಿಲ್ಲ. ಪ್ರವಾಸಕ್ಕೆಂದು ಬಂದವರು ಸಮುದ್ರಗಳಲ್ಲಿ, ಜಲಪಾತಗಳಲ್ಲಿ ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋಗುತ್ತಿರುವ ಅವಘಡಗಳು ಸಂಭವಿಸುತ್ತಲೇ ಇದೆ. ಇದೀಗ ಉತ್ತರ ಕನ್ನಡದ ಸಿದ್ಧಾಪುರದಲ್ಲಿಯೂ ಇಂತಹದ್ದೇ ಮತ್ತೊಂದು ದುರಂತ ಸಂಭವಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ವಾಟೆಹೊಳೆ ಜಲಪಾತ ನೋಡಲು ಬಂದ ಇಬ್ಬರು ಯುವಕರು ಕಣ್ಮರೆಯಾಗಿದ್ದಾರೆ. ಅಕ್ಷಯ್ ಭಟ್ (21) ಹಾಗೂ ಸುಹಾಸ್ ಶೆಟ್ಟಿ (21) ನಾಪತ್ತೆಯಾದ ಯುವಕರು ಎಂದು ಗುರುತಿಸಲಾಗಿದ್ದು, ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

ಮೂಲತಃ ಶಿರಸಿಯವರೇ ಆದ ಅಕ್ಷಯ್ ಭಟ್ ಹಾಗೂ ಸುಹಾಸ್ ಶೆಟ್ಟಿ ಪ್ರೇಕ್ಷಣಿಯ ಸ್ಥಳವಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಸಮೀಪದ ವಾಟೆಹೊಳೆ ಜಲಪಾತ ವೀಕ್ಷಣೆಗೆಂದು ಬಂದಿದ್ದರು. ಅಕ್ಷಯ್ ಭಟ್ ಹಾಗೂ ಸುಹಾಸ್ ಶೆಟ್ಟಿ ಮಾತ್ರವಲ್ಲದೇ ಇನ್ನೂ ನಾಲ್ಕು ಜನ ಸ್ನೇಹಿತರು ಜೊತೆಯಾಗಿ ಈ ಪ್ರದೇಶದಲ್ಲಿ ಸಮಯ ಕಳೆಯಲು ಬಂದಿದ್ದರು. ಅಕ್ಷಯ್ ಭಟ್ ಹಾಗೂ ಸುಹಾಸ್ ಶೆಟ್ಟಿ ಸೇರಿದಂತೆ ಈ ಆರು ಮಂದಿ ಪದವಿ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ವಾಟೆಹೊಳೆ ಜಲಪಾತದಲ್ಲಿ ನೀರಿಗಿಳಿದು ಆಟವಾಡುವ ವೇಳೆ ಅಕ್ಷಯ್ ಭಟ್ ಹಾಗೂ ಸುಹಾಸ್ ಕಾಲು ಜಾರಿ ಇಬ್ಬರು ಬಿದ್ದಿದ್ದಾರೆ. ವಾಟೆಹೊಳೆ ಜಲಪಾತದ ಪ್ರಪಾತ ದೊಡ್ಡ ಮಟ್ಟದಲ್ಲಿದ್ದು, ನೋಡ ನೋಡುತ್ತಿದ್ದಂತೆ ಇಬ್ಬರೂ ಕೊಚ್ಚಿಹೋಗಿದ್ದಾರೆ. ಉಳಿದ ನಾಲ್ಕು ಮಂದಿ ಸ್ನೇಹಿತರ ಕಣ್ಣೆದುರೇ ಇಬ್ಬರು ಕಾಲು ಜಾರಿ ಬಿದ್ದು, ಕಣ್ಮರೆಯಾಗಿದ್ದಾರೆ. ಕೂಡಲೇ ಉಳಿದ ಯುವಕರು ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ.
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಕಣ್ಮರೆಯಾದ ಯುವಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.












Click it and Unblock the Notifications