ಮಗಳನ್ನು ಶಾಲೆಗೆ ಸೇರಿಸಲು ಹೋದವರು ಮಸಣ ಸೇರಿದರು
ಕಾರವಾರ, ಜೂನ್.26 : ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಮಾವಳ್ಳಿ ಕ್ರಾಸ್ ಬಳಿ ಎದುರು ಬರುತ್ತಿದ್ದ ಮಿನಿ ಲಾರಿಗೆ ಸುಜುಕಿ ಅಲ್ಟೊ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಇಂದು ಮಂಗಳವಾರ ಬೆಳಗ್ಗೆ ನಡೆದಿದೆ.
ವಿನಾಯಕ ಹೆಗಡೆ (35), ಅರ್ಚನಾ ಹೆಗಡೆ (33) ಹಾಗೂ ಒಂದೂವರೆ ವರ್ಷದ ಬಾಲಕಿ ಶ್ರಾವಣಿ ಹೆಗಡೆ ಮೃತಪಟ್ಟವರು. ಕಾರಿನಲ್ಲಿದ್ದ ಇನ್ನೋರ್ವ ನಾಲ್ಕೂವರೆ ವರ್ಷದ ಬಾಲಕಿ ಯಶಸ್ವಿನಿ ಹೆಗಡೆ ಅಪಾಯದಿಂದ ಪಾರಾಗಿದ್ದಾಳೆ.
ಮೂಲತಃ ಶಿರಸಿಯ ಸೋಂದಾದ ಅರಗಿನಮನೆಯವರಾಗಿರುವ ವಿನಾಯಕ ಹೆಗಡೆಯವರು ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದು, ಸದ್ಯ ಬೆಳಗಾವಿಗೆ ವರ್ಗಾವಣೆ ಹೊಂದಿದ್ದಾರೆ. ತಮ್ಮ ಊರಿಗೆ ಬಂದಿದ್ದ ಅವರು ಮಗಳನ್ನು ಶಾಲೆಗೆ ದಾಖಲಾತಿ ಮಾಡಲೆಂದು ಬೆಳಗಾವಿಗೆ ಪುನಃ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ.

ಲಾರಿಯು ಹುಬ್ಬಳ್ಳಿಯಿಂದ ಕುಮಟಾ ಕಡೆ ಬರುತ್ತಿತ್ತು ಎನ್ನಲಾಗಿದೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications