ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭುವನಗಿರಿಯಲ್ಲಿದೆ ನೂರಾರು ವರ್ಷಗಳ ಇತಿಹಾಸವುಳ್ಳ ಕನ್ನಡಾಂಬೆಯ ಏಕೈಕ ದೇಗುಲ!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ: ಇಂದು ಕನ್ನಡದ ಹಬ್ಬ. ಕರ್ನಾಟಕ ಏಕೀಕರಣಗೊಂಡು ಇಂದಿಗೆ 66ರ ಸಂಭ್ರಮ. ಈ ಸಂಭ್ರಮದಲ್ಲಿ ಕನ್ನಡದ ಕುಲದೇವತೆ ತಾಯಿ ಭುವನೇಶ್ವರಿಯ ಫೊಟೊಗಳಿಗೆ ಇಂದು ಎಲ್ಲೆಡೆ ಪೂಜೆ, ಮೆರವಣಿಗೆ ನಡೆಯುತ್ತದೆ.

ಆದರೆ ಕರ್ನಾಟಕದ ಈ ಅಧಿದೇವತೆ ಭುವನೇಶ್ವರಿಗಾಗಿಯೇ ರಾಜ್ಯದಲ್ಲಿ ಏಕೈಕ ದೇವಾಲಯವೊಂದು ಇದೆ ಎನ್ನುವುದು ಇನ್ನೂ‌ ಹಲವರಿಗೆ ಗೊತ್ತಿರಲಿಕ್ಕಿಲ್ಲ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ, ಸುತ್ತಲೂ ಸುಂದರ ಹಸಿರ ಸಿರಿಯನ್ನುಟ್ಟು ಬೆಟ್ಟದ ಮೇಲೆ ತಾಯಿ ಭುವನೇಶ್ವರಿಗೊಂದು ರಾಜ್ಯದಲ್ಲೇ ಏಕೈಕ ಗುಡಿ ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಸಮೀಪದ ಭುವನಗಿರಿಯಲ್ಲಿ.

ಕನ್ನಡಾಂಬೆಯೆಂದೇ ಕರೆಯಲ್ಪಡುವ ಭುವನೇಶ್ವರಿ ಇಲ್ಲಿ ನಿತ್ಯ ಪೂಜಿಸಲ್ಪಡುತ್ತಾಳೆ. ಪ್ರತಿದಿನವೂ ಸ್ಥಳೀಯರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಆದರೆ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಮಾತ್ರ ಹೊರ ಊರಿನವರು, ವಿವಿಧ ಜಿಲ್ಲೆಗಳ ಜನರು ಇಲ್ಲಿಗೆ ಭೇಟಿ ನೀಡಿ ತಾಯಿ ಭುವನೇಶ್ವರಿಯನ್ನು ಕಣ್ತುಂಬಿಕೊಳ್ಳುತ್ತಾರೆ.

ನೂರಾರು ವರ್ಷಗಳ ಇತಿಹಾಸ

ನೂರಾರು ವರ್ಷಗಳ ಇತಿಹಾಸ

ಭುವನಗಿರಿಯಲ್ಲಿರುವ ಈ ಭುವನೇಶ್ವರಿ ದೇಗುಲ ಈಗಿನದ್ದಲ್ಲ. ಈ ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕನ್ನಡದ ಮೊದಲ ರಾಜ ಮನೆತನ ಕದಂಬರ ರಾಜಧಾನಿ ಇಲ್ಲಿನ ಪಕ್ಕದ ಬನವಾಸಿಯಾಗಿತ್ತು. ಈಗಿನ ಹಾವೇರಿ ಜಿಲ್ಲೆಯ ಹಾನಗಲ್ ನಿಂದ ಗೋವಾದವರೆಗೆ ಇವರ ಸಾಮ್ರಾಜ್ಯ ಹರಡಿತ್ತು. ಇವರ ಆಳ್ವಿಕೆಯಲ್ಲೇ ಕನ್ನಡ ಭಾಷೆ ಪ್ರಚಲಿತದಲ್ಲಿ ಬಂದಿದ್ದು ಎಂಬುದು ಎಲ್ಲರಿಗೂ ತಿಳಿದಿರುವ ಇತಿಹಾಸ.

ಈ ಕದಂಬರ ಕುಲದೇವಿಯಾಗಿದ್ದ ಭುವನೇಶ್ವರಿಯೇ ಮುಂದೆ ಕನ್ನಡದ ಅಧಿದೇವತೆಯಾದಳು. ತಮ್ಮ ಕುಲದೇವಿಗಾಗಿ ಕದಂಬರು ತಮ್ಮ ಸಾಮ್ರಾಜ್ಯದ ಒಂದು ಭಾಗವಾಗಿದ್ದ ಸಿದ್ದಾಪುರ ತಾಲೂಕಿನ, ಈಗ ಭುವನಗಿರಿ ಎಂದು‌ ಕರೆಯಲ್ಪಡುವ ಗುಡ್ಡ ಪ್ರದೇಶದಲ್ಲಿ ಭುವನೇಶ್ವರಿಯ ದೇಗುಲ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಆದರೆ ದೇಗುಲ ನಿರ್ಮಾಣ ಪೂರ್ಣಗೊಂಡಿರಲಿಲ್ಲ. ಅವರ ಬಳಿಕ ಬಂದ ವಿಜಯನಗರದ ಅರಸರು ಕೂಡ ಭುವನೇಶ್ವರಿಯನ್ನು ಆರಾಧಿಸುತ್ತಿದ್ದ ಕಾರಣ ಕದಂಬರು ಕಟ್ಟಿಸಿದ್ದ ದೇಗುಲವನ್ನು ಜೀರ್ಣೋದ್ಧಾರ ಮಾಡಿದ್ದರು. ಆದರೆ, ಭುವನೇಶ್ವರಿಯ ಗುಡಿಯ ನಿರ್ಮಾಣ ಕಾರ್ಯ ಸಂಪೂರ್ಣಗೊಳಿಸಿದ್ದು ಬೀಳಗಿಯ ಅರಸರು ಎನ್ನುತ್ತದೆ ಇತಿಹಾಸ. ಕ್ರಿ.ಶ. 1692ರಲ್ಲಿ ಬೀಳಗಿಯ ಕೊನೆಯ ದೊರೆ ಬಸವೇಂದ್ರ ಭುವನೇಶ್ವರಿಯ ಈ ದೇಗುಲದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಕನ್ನಡ ತಾಯಿಗೆ ನೆಲೆ ನೀಡಿದೆ.

ದೇಗುಲವನ್ನು ಶಿಲೆಗಳಿಂದ ನಿರ್ಮಿಸಲಾಗಿದೆ

ದೇಗುಲವನ್ನು ಶಿಲೆಗಳಿಂದ ನಿರ್ಮಿಸಲಾಗಿದೆ

ಭುವನೇಶ್ವರಿಯ ಈ ದೇಗುಲವನ್ನು ಶಿಲೆಗಳಿಂದ ನಿರ್ಮಿಸಲಾಗಿದೆ. ದೇಗುಲದ ಒಳ ಕಂಬಗಳು ಆಕರ್ಷಕ ಕೆತ್ತನೆಯನ್ನು ಹೊಂದಿದ್ದು, ದೇವಾಲಯದ ಚಾವಣಿಯಲ್ಲಿ ಅಷ್ಟದಿಕ್ಕುಗಳ ಸಂಕೇತ, ಅನೇಕ ಅವತಾರಗಳ ಸನ್ನಿವೇಶ ಹಾಗೂ ಕುಸುರಿ ಕೆತ್ತನೆಗಳನ್ನು ಮಾಡಲಾಗಿದೆ. ದೇವಾಲಯದ ಅಕ್ಕಪಕ್ಕದಲ್ಲಿ ನಂದೀಶ್ವರ, ರಂಗನಾಥ ಮುಂತಾದ ವಿಗ್ರಹಗಳು ಸೂಕ್ಷ್ಮ ಕೆತ್ತನೆಗೆ ಸಾಕ್ಷಿಯಾಗಿ ಆಕರ್ಷಿಸುತ್ತವೆ. ಭುವನೇಶ್ವರಿಯ ಎದುರು ಆಕರ್ಷಕವಾಗಿ ಕೆತ್ತನೆ ಮಾಡಿ ಸ್ಥಾಪಿಸಿರುವ ಶ್ರೀದೇವಿಯ ವಾಹನ ಸಿಂಹದ ಮೂರ್ತಿಯಿದೆ. ಭುವನೇಶ್ವರಿಯನ್ನು ನಾಡಿನ ಅಧಿದೇವತೆ ಎಂದು ಕದಂಬರ ಕಾಲದಿಂದಲೇ ಸಂಬೋಧಿಸಲಾಗುತ್ತಿತ್ತು.

ಸರ್ಕಾರದ ದಿವ್ಯ ನಿರ್ಲಕ್ಷ್ಯ

ಸರ್ಕಾರದ ದಿವ್ಯ ನಿರ್ಲಕ್ಷ್ಯ

ಈ ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದರೂ ಆಡಳಿತದ ದಿವ್ಯ ನಿರ್ಲಕ್ಷಕ್ಕೊಳಗಾಗಿದೆ. ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಈವರೆಗೆ ಸರ್ಕಾರ ಮುಂದಾಗಿಲ್ಲ. ರಾಜ್ಯೋತ್ಸವ ಸಮೀಪಿಸುತ್ತಿದ್ದಾಗ ಮಾತ್ರ ಆಡಳಿತಕ್ಕೆ ಇಲ್ಲಿನ ಗುಡಿ ನೆನಪಾಗುತ್ತದೆಯೇ ಹೊರತು, ಉಳಿದ ದಿನಗಳಲ್ಲಿ ಸ್ಥಳೀಯರೇ ಎಲ್ಲವನ್ನೂ ಮಾಡಿಕೊಳ್ಳಬೇಕಿದೆ. ರಾಜ್ಯ ಸರ್ಕಾರಕ್ಕಂತೂ ಕನ್ನಡಾಂಬೆಗೆ ಇಲ್ಲೊಂದು ದೇಗುಲವಿದೆ ಎನ್ನುವುದೇ ನೆನಪಿದೆಯೋ ಇಲ್ಲವೋ ಎನ್ನುವಂತಾಗಿದೆ. ರಾಜ್ಯೋತ್ಸವದ ಸಂದರ್ಭದಲ್ಲಿ ಒಂದಷ್ಟು ಕನ್ನಡ ಸಂಘಟನೆಗಳು ಇಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತವೆ ಬಿಟ್ಟರೆ ದೇಗುಲದ ಅಭಿವೃದ್ಧಿಯ ದೃಷ್ಟಿಯಿಂದ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಈಗಲಾದರೂ ಸರ್ಕಾರ ಈ ಪ್ರದೇಶದ ಅಭಿವೃದ್ಧಿಗೆ ದೃಷ್ಟಿ ಹರಿಸಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ, ಕನ್ನಡಿಗರ ಆಗ್ರಹವಾಗಿದೆ.

ಕನ್ನಡಿಗರ ಆರಾಧ್ಯದೈವ ಕನ್ನಡಾಂಬೆ

ಕನ್ನಡಿಗರ ಆರಾಧ್ಯದೈವ ಕನ್ನಡಾಂಬೆ

ಸಿದ್ದಾಪುರ ಪಟ್ಟಣದಿಂದ ಸುಮಾರು 8 ಕಿಮೀ ದೂರದಲ್ಲಿರುವ ಭುವನಗಿರಿಯಲ್ಲಿ ಕನ್ನಡಿಗರ ಆರಾಧ್ಯದೈವ ಕನ್ನಡಾಂಬೆ ನೆಲೆ ನಿಂತಿದ್ದು, ಮಲೆನಾಡಿನ ಪರಿಸರದ ನಡುವಿನ ಸುಂದರವಾದ ಪ್ರದೇಶದಲ್ಲಿ ಸುಮಾರು 350 ಮೆಟ್ಟಿಲುಗಳ ಬೆಟ್ಟದ ಮೇಲೆ ಇರುವ ಈ ದೇವತೆ ಕನ್ನಡಿಗರನ್ನು ಹರಿಸುತ್ತಿದ್ದಾಳೆ. ವಿಜಯನಗರ ಅರಸರ ಸಾಮಂತರಾಗಿದ್ದ ಬಿಳಗಿಯ ಅರಸು ವಂಶದ ಕೊನೆಯ ಅರಸ ಬಸವೇಂದ್ರ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದರು ಎನ್ನುವ ಬಗ್ಗೆ ಉಲ್ಲೇಖವಿದೆ.

English summary
The only Temple in Kannadambe with hundreds of years of history. Bhubaneswari also known as Kannadambe is worshiped here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X