ಸಾರಿಗೆ ಮುಷ್ಕರ ಬಿಟ್ಟು, ಮತ್ತೆ ಕೆಲಸಕ್ಕೆ ಹಾಜರಾಗಿ: ಶಿವರಾಮ್ ಹೆಬ್ಬಾರ್
ಕಾರವಾರ, ಏಪ್ರಿಲ್ 7: ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರ್ವಜನಿಕರಿಗೂ ಹಾಗೂ ಸ್ವತಃ ಸಾರಿಗೆ ನೌಕರರಿಗೂ ತೊಂದರೆಯಾಗುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.
ಸಾರಿಗೆ ನೌಕರರಲ್ಲಿ ಮನವಿ ಮಾಡಿರುವ ಅವರು, ""ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾಗಿ, ಮುಷ್ಕರ ನಿರತ ಸಾರಿಗೆ ನೌಕರರಲ್ಲಿ ವಿನಂತಿಸಿಕೊಳ್ಳುತ್ತೇನೆ, ನಮ್ಮ ರಾಜ್ಯ ಕೋವಿಡ್ ನಿಂದಾಗಿ ಈಗಾಗಲೇ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ. ಸಾರಿಗೆ ಇಲಾಖೆ ನಾಲ್ಕು ಸಾವಿರ ಕೋಟಿಯಷ್ಟು ನಷ್ಟವನ್ನು ಅನುಭವಿಸಿದೆ'' ಎಂದಿದ್ದಾರೆ.
ಮತ್ತೊಮ್ಮೆ ಕೋವಿಡ್ ಎರಡನೇ ಅಲೆ ಆರಂಭವಾಗಿರುವಾಗ ಸಾರಿಗೆ ನೌಕರರು ಈ ರೀತಿಯ ಪ್ರತಿಭಟನೆ ಮಾಡುವುದು ಸೂಕ್ತವಲ್ಲ. ಸದ್ಯ ಚುನಾವಣಾ ನೀತಿ ಸಂಹಿತೆ ಇರುವ ಕಾರಣ, ಅದು ಮುಗಿದ ತಕ್ಷಣ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಾರಿಗೆ ಸಚಿವರು ಹೇಳಿದ್ದರೂ, ಸಾರಿಗೆ ನೌಕರರು ಪ್ರತಿಭಟನೆ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದರು.
ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ ಮೇಲೂ ಮುಷ್ಕರ ಮಾಡುವುದು ಸರಿಯಲ್ಲ. ಮುಷ್ಕರ ಕೈಬಿಟ್ಟು ಮತ್ತೆ ಕೆಲಸಕ್ಕೆ ಹಾಜರಾಗಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮನವಿ ಮಾಡಿದ್ದಾರೆ.