ಇರುವೆ ಕಚ್ಚಿ ಮೃತಪಟ್ಟ ಶಿವು ಕುಟುಂಬಕ್ಕೆ ಬೇಕದೆ ನೆರವಿನ ಹಸ್ತ

Posted By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ನವೆಂಬರ್ 10 : ಇರುವೆ ಕಚ್ಚಿ ಕಳೆದ ಕೆಲ ವಾರಗಳ ಹಿಂದೆಯಷ್ಟೇ ಮೃತಪಟ್ಟಿದ್ದ ಕಾರವಾರ ತಾಲ್ಲೂಕಿನ ಬೈತ್ ಖೋಲ್ ನ ಅಂಗವಿಕಲ ಶಿವು ಕುಟುಂಬ ಇದೀಗ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ಸಹಾಯಕ್ಕಾಗಿ ಎದುರುನೋಡುತ್ತಿದೆ.

ಹುಟ್ಟು ಅಂಗವಿಕಲನಾಗಿದ್ದ ಶಿವುಗೆ ಸರ್ಕಾರದಿಂದ ಬರುತ್ತಿದ್ದ ಸಾವಿರ ರೂಪಾಯಿ ಮಾಶಾಸನ ಕುಟುಂಬಕ್ಕೆ ಆಧಾರವಾಗಿತ್ತು. ಆದರೀಗ ಶಿವುನ ಮರಣದ ನಂತರ ಮಾಸಾಶನ ಸ್ಥಗಿತಗೊಂಡಿದ್ದು, ಆತನ ಕುಟುಂಬಕ್ಕೆ ಈಗ ದಿಕ್ಕು ತೋಚದಂತಾಗಿದೆ.

Shivu family needs help

ಕಾರವಾರದ ಬೈತ್ ಖೋಲ್ ನಲ್ಲಿ ಗುಡಿಸಲು ಕಟ್ಟಿಕೊಂಡು, ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಮಲಾ ಅವರಿಗೆ ಒಟ್ಟು ನಾಲ್ವರು ಮಕ್ಕಳು. ಅದರಲ್ಲಿ ಸಂಗೀತಾ, ಶಿವು ಅವಳಿ ಮಕ್ಕಳು. ಹುಟ್ಟಿನಿಂದಲೂ ಶಿವು ಕೈ- ಕಾಲು ಸ್ವಾಧೀನ ಕಳೆದುಕೊಂಡಿದ್ದ. ಸರಿಯಾಗಿ ಮಾತು ಕೂಡ ಇತನಿಗೆ ಬರುತ್ತಿರಲಿಲ್ಲ. ಹೊರ ಪ್ರಪಂಚ ನೋಡಿರದ ಶಿವು ತೆವಳಿಕೊಂಡೇ ಗುಡಿಸಲಿನಲ್ಲಿ ತನ್ನ ಪಾಡಿಗೆ ತಾನು ಇರುತ್ತಿದ್ದ.

ಐದು ವರ್ಷಗಳ ಹಿಂದೆ ಮನೆ ಯಜಮಾನನ ಸಾವು ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಆದರೂ ಹೋಟೆಲ್‌ನಲ್ಲಿ ಪಾತ್ರೆ ತೊಳೆದು ಜೀವನ ದೂಡಿದ ಕಮಲಾ ನಿಜಕ್ಕೂ ವೀರ ಮಹಿಳೆಯೇ ಸರಿ. ಆದರೆ ಎಂದಿನಂತೆ ಆಕೆ ಇತ್ತೀಚಿಗೆ ಹೊಟೇಲ್ ಕೆಲಸ ಮುಗಿಸಿ, ಮನೆಗೆ ಬರುವಾಗ ಯಾರೋ ನೀಡಿದ ತುಳಸಿ ಹಬ್ಬದ ಕಬ್ಬನ್ನು ತಂದಿದ್ದರು. ಅದನ್ನು ಮೂಲೆಯಲ್ಲಿರಿಸಿ ಮರುದಿನ ಕೆಲಸಕ್ಕೆ ಹೋಗಿದ್ದ ಆಕೆಗೆ ಮರಳಿ ಬಂದಾಗ ಆಕಾಶವೇ ಕಳಚಿ ಬಿದ್ದಂತಾಗಿತ್ತು.

Shivu family needs help

ಕಬ್ಬಿಗೆ ಬಂದ ಕಪ್ಪು ಇರುವೆಗಳು ಮಗ, ಅಂಗವಿಕಲ ಶಿವುನನ್ನ ಆಕ್ರಮಿಸಿಕೊಂಡಿದ್ದವು. ಹೆದ್ದಾರಿ ಪಕ್ಕದಲ್ಲಿಯೇ ಗುಡಿಸಲಿದ್ದರೂ ಮನೆ ಹಿಂಭಾಗ ದಟ್ಟ ಅರಣ್ಯವಿದ್ದಿದ್ದರಿಂದ ಶಿವುವಿನ ಮೂಕ ವೇದನೆ ಯಾರಿಗೂ ಕೇಳಿಸಿಲ್ಲ. ಹೀಗಾಗಿ ಇಡೀ ದಿನ ಸಾವಿರಾರು ಇರುವೆಗಳೊಂದಿಗೆ ಸೆಣಸಾಟ ನಡೆಸಿದ್ದ ಶಿವು ಸಂಜೆ ವೇಳೆಗೆ ತೀವ್ರ ಅಸ್ವಸ್ಥಗೊಂಡಿದ್ದ. ಸಂಜೆ ಮನೆಗೆ ಬಂದ ಕಮಲಾಳಿಗೆ ಒಂಧು ಸಾರಿ ಅಘಾತ. ಅತ್ತ ಇತ್ತ ಕೂಗಾಡುತ್ತಾ, ಅಳುತ್ತಾ, ಇತರರ ಸಹಾಯದೊಂದಿಗೆ ಮಗನನ್ನ ಆಸ್ಪತ್ರೆಗೆ ದಾಖಲಿಸಿದಳು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಶಿವು ಆಸ್ಪತ್ರೆಯಲ್ಲಿಯೇ ಕೊನೆ ಉಸಿರು ಎಳೆಯಬೇಕಾಯಿತು.

ಹೊಟೇಲ್ ಒಂದರಲ್ಲಿ ದಿನಕ್ಕೆ 150 ರೂಪಾಯಿ ಸಂಬಳಕ್ಕೆ ದಿನವಿಡೀ ದುಡಿಯುತ್ತಿರುವ ಕಮಲಾಳಿಗೆ ಅಂದು ತನ್ನ ಮಗನ ಶವ ಸಂಸ್ಕಾರ ನಡೆಸಲೂ ಕೂಡ ಕೈಯಲ್ಲಿ ಹಣವಿಲ್ಲ. ಆದರೆ ಹಾಗೋ ಹೀಗೋ ಜನಶಕ್ತಿ ವೇದಿಕೆಯ ಸಮಾಜ ಸೇವಕರು ಆಕೆಯ ನೆರವಿಗೆ ಬಂದು ಶಿವುನ ಶವ ಸಂಸ್ಕಾರ ನಡೆಸಿ, ಮಾನವೀಯತೆ ಮೆರೆದರು.

Shivu family needs help

ಆದರೆ ಈ ದುಃಖದಲ್ಲಿ ಎರಡು ದಿನದಿಂದ ಕೆಲಸಕ್ಕೆ ಹೋಗಿರದ ಕಮಲಾಗೆ ಹೋಟೆಲ್‌ ಮಾಲೀಕ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿಲ್ಲ. ಒಂದೆಡೆ ಮಗನ ಸಾವು, ಇನ್ನೊಂದಡೆ ಕೈ ತಪ್ಪಿದ ಕೆಲಸ. ಮತ್ತೊಂದೆಡೆ ಮಗನಿಗೆ ಬರುತ್ತಿದ್ದ ಮಾಸಾಶನ ಕೂಡ ಸ್ಥಗಿತ. ಇದರಿಂದಾಗಿ ಇದೀಗ ಕಮಲಾಳ ಕುಟುಂಬ ಚಿಂತೆಗೀಡಾಗಿದೆ.

ಕಮಲಾಳ ಇನ್ನೊಬ್ಬ ಮಗ ಸತೀಶ 10ನೇ ತರಗತಿ, ಮತ್ತೊಬ್ಬ 6ನೇ ತರಗತಿ. ಸಂಗೀತಾ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಸದ್ಯದ ಪರಿಸ್ಥಿತಿಯಲ್ಲಿ ಇವರ ಶೈಕ್ಷಣಿಕ ವೆಚ್ಚವನ್ನು ಭರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಲಿಗದ್ದಾದಲ್ಲಿ ಕಮಲಾ ಕುಟುಂಬಕ್ಕೆ ಸ್ವಂತ ಭೂಮಿಯಿತ್ತು. ಅಲ್ಲಿ ಪುಟ್ಟದೊಂದು ಜೋಪಡಿ ಕಟ್ಟಿಕೊಂಡು ವಾಸವಾಗಿದ್ದರು. ಅದಿರು ದಾಸ್ತಾನಿಗಾಗಿ ಈ ಭೂಮಿಯನ್ನು ಕೂಡ ಈ ಹಿಂದೆ ಸರ್ಕಾರ ವಶಕ್ಕೆ ಪಡೆದು 15 ಸಾವಿರ ರೂಪಾಯಿಗಳನ್ನು ಕೈಯಲ್ಲಿರಿಸಿ ಅಲ್ಲಿಂದ ಇವರನ್ನು ಒಕ್ಕಲೆಬ್ಬಿಸಲಾಯಿತು. ಅದಾದ ನಂತರ ಕಮಲಾ ಬೈತಖೋಲ್‌ನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದಾಳೆ.
ಅರಣ್ಯದಿಂದ ಬರುವ ಹುಳ, ಹುಪ್ಪಡಿ ಹಾಗೂ ಇನ್ನಿತರ ಜೀವಿಗಳ ಆಕ್ರಮಣದೊಂದಿಗೆ ಬದುಕು ದೂಡುವುದು ಇವರಿಗೆ ನಿತ್ಯದ ಕೆಲಸವಾಗಿದೆ. ಶಿವು ಅಗಲಿಕೆಯಿಂದ ಮಾನಸಿಕವಾಗಿ ಜರ್ಜರಿತರಾಗಿದ್ದ ಕಮಲಾ ಅವರಿಗೆ ಈಗ ಮಾಸಾಶನದ ಹಣವೂ ಬಾರದಿರುವುದು ಆರ್ಥಿಕವಾಗಿ ಹೊಡೆತ ನೀಡುತ್ತಿದೆ. ಕಮಲಾ ಅವರ ಕುಟುಂಬಕ್ಕೆ ಈಗ ಮಾನವೀಯ ಕೈಗಳ ಸಹಾಯ ಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shivu who died by ant bites recently his family is in a critical economic condition. after Shivu's death the monthly handicap pension stops. so the family is en deep worry now.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ