Shirur Landslide: ಶಿರೂರು ಭೂಕುಸಿತದ ಎಂಟು ದಿನಗಳ ಬಳಿಕ ಮಹಿಳೆ ಶವ ಪತ್ತೆ
ಉತ್ತರ ಕನ್ನಡ, ಜುಲೈ. 23: ಉತ್ತರ ಕನ್ನಡದ ಶಿರೂರಿನ ಭೂಕುಸಿತದ ಅವಶೇಷಗಳಡಿ ಸಿಲುಕಿರುವ ಮೃತದೇಹಗಳು ಮತ್ತು ವಾಹನಗಳಿಗಾಗಿ ಶೋಧ ನಡೆಯುತ್ತಿದೆ. ಕಾರ್ಯಾಚರನೆ ವೇಳೆ ಘಟನೆ ನಡೆದು 8 ದಿನಗಳ ಬಳಿಕ 67 ವರ್ಷದ ಸಣ್ಣಿ ಹನುಮಂತಗೌಡ ಅವರ ಮೃತದೇಹ ಪತ್ತೆಯಾಗಿದೆ.
ಗುಡ್ಡ ಕುಸಿದು ಗಂಗವಳ್ಳಿ ನದಿಗೆ ಬಿದ್ದಾಗ ಭೂಕುಸಿತ ಸಂಭವಿಸಿದ ದಿನ ಸಣ್ಣಿ ಹನುಮಂತಗೌಡ ಮನೆಯಲ್ಲಿ ಒಬ್ಬರೇ ಇದ್ದರು. ಉಳ್ಳುವರೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾಪತ್ತೆಯಾಗಿರುವ ತಮ್ಮ ತಾಯಿಯನ್ನು ಪತ್ತೆ ಮಾಡಿಕೊಡುವಂತೆ ಅವರ ಪುತ್ರ ಮಂಜುನಾಥ ಹನುಮಂತಗೌಡ ಅವರು ಸಚಿವ ಮಂಕಾಳ್ ವೈದ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಮನವಿ ಮಾಡಿದ್ದರು.

ಕಳೆದ ಎಂಟು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಿರಂತವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಅನೇಕ ರಾಜಕೀಯ ನಾಯಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದರು. ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಗಂಗವಳ್ಳಿ ನದಿಯ 15 ಕಿಲೋಮೀಟರ್ ಕೆಳಗೆ ಶವ ಪತ್ತೆಯಾಗಿದೆ. ಅದೇ ಸ್ಥಳದಲ್ಲಿ ಈ ಹಿಂದೆ 4 ವರ್ಷದ ಬಾಲಕಿ ಆವಂತಿಕಾಳ ಶವ ಪತ್ತೆಯಾಗಿತ್ತು.
ಸೇನೆಯಿಂದ ಶೋಧ ಕಾರ್ಯಾಚರಣೆ
ಇನ್ನು, ಭಾರೀ ಮಳೆಯ ನಡುವೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನದಿಯ ಕೆಳಗೆ ಟ್ರಕ್ ಮತ್ತು ಇತರ ವಾಹನಗಳನ್ನು ಕಂಡುಹಿಡಿಯಲು ಸೇನೆಯು ಲೋಹ ಪತ್ತೆಹಚ್ಚುವ ರಾಡಾರ್ ಮತ್ತು ಇತರ ತಂತ್ರಗಳನ್ನು ಬಳಸುತ್ತಿದೆ. ಸೋಮವಾರ ಭಾರತೀಯ ನೌಕಾಪಡೆಯ 16 ಡೈವರ್‌ಗಳು ಸಹ ಶೋಧ ಕಾರ್ಯಾಚರಣೆಯಲ್ಲಿ ಸೇರಿಕೊಂಡರು. ಗಂಗವಳ್ಳಿ ನದಿಯ ಮಧ್ಯದಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದುವರೆಗೆ ಎಂಟು ಮೃತದೇಹಗಳು ಪತ್ತೆಯಾಗಿವೆ. ಜಿಲ್ಲಾಡಳಿತದ ಮಾಹಿತಿಯಂತೆ ಇನ್ನೆರಡು ಮೃತದೇಹಗಳು ಪತ್ತೆಯಾಗಬೇಕಿದೆ. ಭೂಕುಸಿತ ಘಟನೆಯ ದಿನದ ಇಸ್ರೋ ಉಪಗ್ರಹ ಚಿತ್ರಗಳ ಪ್ರಕಾರ, ಟ್ರಕ್ ನೀರಿಗೆ ಬಿದ್ದಿರುವ ಸಾಧ್ಯತೆ ಇದೆ. ಸೇನಾ ತಂಡವು ಫೆರೆಕ್ಸ್ ಲೊಕೇಟರ್ - GPR ಎಂಬ ತಂತ್ರಜ್ಞಾನವನ್ನು ಬಳಸಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದೆ (ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್).

ಈ ತಂತ್ರಜ್ಞಾನದಿಂದ ನೀರು ಮತ್ತು ಮಣ್ಣಿನ ಅಡಿಯಲ್ಲಿರುವ ಲೋಹಗಳನ್ನು ಪತ್ತೆಹಚ್ಚುವ ಒಂದು ನಿರ್ದಿಷ್ಟ ಸಾಧನ. ಗಂಗಾವಳಿ ನದಿಯೊಳಗೆ ಲೋಹದ ಕೆಲವು ಕುರುಹುಗಳಿರುವುದನ್ನು ಕಾರ್ಯಾಚರಣೆಯ ವೇಳೆ ಪತ್ತೆಹಚ್ಚಲಾಗಿದೆ. ನೌಕಾಪಡೆಯ ವಿಶೇಷ ಡೈವರ್‌ಗಳು ನದಿಯೊಳಗೆ ಮುಳುಗಿ ಭೂಕುಸಿತದ ಅವಶೇಷಗಳೊಳಗಿನ ಸಂಭವನೀಯ ಲೋಹದ ವಸ್ತುವನ್ನು ಹುಡುಕುತ್ತಿದ್ದಾರೆ.












Click it and Unblock the Notifications