ಭಜರಂಗ ಬಲಿ ಎಂದು ಕಾಂಗ್ರೆಸ್‌ಗೆ ಮತ ಹಾಕಿ: ಆರ್.ವಿ. ದೇಶಪಾಂಡೆ
ಕಾರವಾರ, ಮೇ 06: ಅಂಕೋಲಾಗೆ ಆಗಮಿಸಿದ ಪ್ರಧಾನಿ ಪ್ರಚಾರಕ್ಕೆ ಎಷ್ಟು ಖರ್ಚಾಗಿದೆ. ಆದರೆ ಪ್ರಧಾನಿ ಜಿಲ್ಲೆಯ ಜನರಿಗೆ ಏನು ಮಾಡಿದ್ದೇವೆ, ಏರ್‌ಪೋರ್ಟ್ ಯಾವಾಗ ಮುಗಿಸುತ್ತೇವೆ, ಪ್ರವಾಸೋದ್ಯಮಕ್ಕೆ ಏನು ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಎಂಬ ವಿಶ್ವಾಸ ಇತ್ತು. ಅದರೆ ಅವರ ಭಾಷಣದಲ್ಲಿ ಜಿಲ್ಲೆಗೆ ಏನೂ ದೊರೆಯುವ ಸೂಚನೆ ಕಂಡಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಟೀಕಿಸಿದ್ದಾರೆ.
ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿ ಪ್ರಧಾನಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅವರು ಹೇಳಿದಂತೆ ಸೃಷ್ಟಿಮಾಡಿದ್ದರೇ ಈವರಗೆ 18 ಕೋಟಿ ಉದ್ಯೋಗ ಸೃಷ್ಟಿಯಾಗುತಿತ್ತು. ಆದರೆ ಎಲ್ಲಿ ಉದ್ಯೋಗ ಸಿಕ್ಕಿದೆ ? ಎಂದು ಪ್ರಶ್ನಿಸಿದರು. ಬೆಲೆ ಏರಿಕೆ ಬಗ್ಗೆ ಪ್ರಧಾನಿ ಮಾತಾಡಿಲ್ಲ. ಬಡವರಿಗೆ ಏನು ಮಾಡಿದ್ದೇವೆ ಎಂದು ಹೇಳಬೇಕಿತ್ತು. ಆದರೆ ಅವರ ಸರ್ಕಾರದಲ್ಲಿ ಬಡವರಿಗೆ ಕಾರ್ಯಕ್ರಮಗಳೇ ಇಲ್ಲ ಎಂದು ಟೀಕಿಸಿದರು.

ಚುನಾವಣೆ ಕ್ರಿಕೆಟ್ ಇದ್ದ ಹಾಗೆ. ಮಾಜಿ ಸಿಎಂ ಕುಮಾರಸ್ವಾಮಿ ಆಧಾರ ರಹಿತ ಆರೋಪ ಮಾಡಿದ್ದಾರೆ. ನನಗೆ ದೇವೇಗೌಡರ ಬಗ್ಗೆ ಅಭಿಮಾನ ಇದೆ. ಕುಮಾರಸ್ವಾಮಿ ನನ್ನ ಮಿತ್ರ. ಕಂದಾಯ ಇಲ್ಲವೇ ಅರಣ್ಯ ಯಾವುದೇ ಆದರೂ ಕೂಡ ಒಂದಿಂಚೂ ಅತಿಕ್ರಮಣ ಮಾಡಿಲ್ಲ. ಜೆಡಿಎಸ್ ಅಭ್ಯರ್ಥಿ ಒತ್ತಾಯಕ್ಕೆ ಈ ರೀತಿ ಆಧಾರ ರಹಿತ ಆರೋಪ ಮಾಡಿದ್ದು, ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಭಜರಂಗ ಬಲಿ ಅಂದರೆ ಹನುಮಾನ. ನಾನು ಹನುಮಂತನ ಭಕ್ತ. ನಾವೇನು ಭಜರಂಗ ಬಲಿ ಎಂಬುದಕ್ಕೆ ಆಕ್ಷೇಪ ಮಾಡಿಲ್ಲ. ಆದರೆ ಯಾವುದೇ ಸಂಘಟನೆಗಳು ಕಾನೂನು ಕೈಗೆ ತೆಗೆದುಕೊಂಡರೆ ಅದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ನಾವು ಕೂಡ ಭಜರಂಗ ಬಲಿ ಎಂದು ಕಾಂಗ್ರೆಸ್‌ಗೆ ಮತ ನೀಡಿ ಎಂದು ಹೇಳುವುದಾಗಿ ಪ್ರಧಾನಿ ಹೇಳಿಕೆಗೆ ಟಾಂಗ್ ನೀಡಿದರು.
ಉತ್ತರ ಕನ್ನಡ ಅಧಿಕಾರಿಗಳಿಲ್ಲದೆ ಅನಾಥವಾಗಿದೆ
ಉತ್ತರಕನ್ನಡದಲ್ಲಿ ಜಿಲ್ಲಾಧಿಕಾರಿ, ಎಸ್ಪಿ, ಸಿಇಒ ಬಿಟ್ಟರೆ ಅಧಿಕಾರಿಗಳೇ ಇಲ್ಲ. ಜಿಲ್ಲೆ ಅನಾಥವಾಗಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಸಾಮಾನ್ಯ ಸಭೆಗಳಲ್ಲಿನ ಚರ್ಚೆಗಳು ಅರ್ಥಪೂರ್ಣವಾಗಿ ನಡೆಯುತ್ತಿಲ್ಲ. ಇದರಿಂದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಜನರನ್ನು ತಲುಪುತ್ತಿಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಿದ ಉಳಗಾ-ಕೆರವಡಿ ಸೇತುವೆ, ಗೋಕರ್ಣ-ಮಂಜುಗುಣಿ ಸೇತುವೆ ಅರೆಬರೆಯಾಗಿದೆ. ಪ್ರವಾಸೋದ್ಯಮ ನಿಂತು ಹೋಗಿದೆ. ನಮ್ಮ ಕಾಲದಲ್ಲಿ ನಡೆದ ಕರಾವಳಿ ಉತ್ಸವ, ಸ್ಕೂಬಾ, ಕೈಟ್, ವಾಟರ್‌ಸ್ಪೋರ್ಟ್ಸ ಉತ್ಸವಗಳು ಸಹ ನಡೆಯುತ್ತಿತ್ತು. ಹೋಂ ಸ್ಟೇದವರು ಕಷ್ಟದಲ್ಲಿದ್ದಾರೆ. ಬಿಜೆಪಿ ಜನಪ್ರತಿನಿಧಿಗಳು ಆಸಕ್ತಿ ವಹಿಸದ ಕಾರಣ ಹೀಗಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸರ್ಕಾರ ಇದ್ದರೂ ಇಲ್ಲದಂತಾಗಿದೆ. ಬಿಜೆಪಿ ಭ್ರಷ್ಟಾಚಾರ, ದುರಾಡಳಿತದಿಂದಾಗಿ ಜನ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಜೆಡಿಎಸ್ 28 ಸ್ಥಾನ ಗಳಿಸುವುದು ಸಾಧ್ಯವಿಲ್ಲ. ಅದು ಅವರಿಗೂ ಗೊತ್ತಿರುವ ಕಾರಣ ಕಾಂಗ್ರೆಸ್-ಬಿಜೆಪಿಗೆ ಬಹುಮತ ಸಿಗದಿರಲಿ ಎನ್ನುತ್ತಿದ್ದಾರೆ. ಆದರೆ ಅವರ ಉದ್ದೇಶ ಈಡೇರುವುದಿಲ್ಲ ಎಂದರು.
ಸತೀಶ್ ಸೈಲ್ ಬೆಂಬಲಿಸಿ
ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು. ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೇ ಮಹಿಳೆಯರಿಗೆ ಉಚಿತ ಬಸ್ ಸಂಚಾರ, ವಿದ್ಯುತ್ ರಿಯಾಯಿತಿ, ಉಚಿತ ಅಕ್ಕಿ, ಕುಟುಂಬದ ಮಹಿಳೆಗೆ ಆರ್ಥಿಕ ನೆರವು ಸಿಗಲಿದೆ ಎಂದು ಹೇಳಿದರು. ಮಾಜಿ ಶಾಸಕ ಜೆ.ಡಿ.ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ದಿಗಂಬರ ಶೇಟ್ ಉಪಸ್ಥಿತರಿದ್ದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಬೈತಖೋಲದಲ್ಲಿ ಪ್ರಚಾರ ನಡೆಸಿದ ಆರ್.ವಿ. ದೇಶಪಾಂಡೆ, ಸೈಲ್ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮೀನುಗಾರರಲ್ಲಿ ಮನವಿ ಮಾಡಿದರು. ಜೆಡಿಎಸ್-ಬಿಜೆಪಿ ಭ್ರಷ್ಟಾಚಾರದ ಮೂಲಕ ಲೂಟಿ ಮಾಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಜನಸಾಮಾನ್ಯರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದು, ಪೂರ್ಣ ಬಹುಮತದ ಸರ್ಕಾರಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.












Click it and Unblock the Notifications