10 ರೂ ನಾಣ್ಯ ಬ್ಯಾನ್ ಸುಳ್ಳು ವದಂತಿ: ಚಲಾವಣೆಯಾಗದೆ ಸಂಗ್ರಹವಾದ 5 ಕೋಟಿ ಹಣ!
ಕಾರವಾರ, ಜೂನ್ 1: ಆರ್‌ಬಿಐ ಸದ್ಯ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದು ಬ್ಯಾಂಕ್ ಗಳಿಗೆ ನೀಡಿ ನೋಡು ಬದಲಾಯಿಸಿಕೊಳ್ಳುವಂತೆ ಸೂಚಿಸಿದೆ. ಇದರಿಂದ ಜನಸಾಮಾನ್ಯರ ವ್ಯವಹಾರದ ಮೇಲೆ ಯಾವುದೇ ರಿತಿಯ ಪರಿಣಾಮ ಬೀರಿದಂತೆ ಕಂಡುಬಂದಿಲ್ಲ.
ಆದರೆ ಕಳೆದ ಕೆಲ ವರ್ಷಗಳ ಹಿಂದೆ ಚಲಾವಣೆಗೆ ತಂದಿದ್ದ 10 ರೂಪಾಯಿ ನಾಣ್ಯ ಮಾತ್ರ ಚಲಾವಣೆಯಲ್ಲಿದ್ದರೂ ಕೂಡ ನಾಣ್ಯ ಬ್ಯಾನ್ ಮಾಡಲಾಗಿದೆ ಎಂಬ ವದಂತಿಯಿಂದಾಗಿ ಈ ನಾಣ್ಯ ಕೇಳುವವರಿಲ್ಲದೆ ಬ್ಯಾಂಕ್‌ಗಳಲ್ಲಿ ರಾಶಿ ಹಾಕುವಂತಾಗಿದೆ.

ಕಳೆದ ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿ ಮಾರುಕಟ್ಟೆಗೆ ಬಂದಾಗ ಜನರನ್ನು ಆಕರ್ಷಿಸಿದ್ದ 10 ರೂಪಾಯಿಯ ನಾಣ್ಯಗಳು ಇದೀಗ ಕೊಟ್ಟರು ಪಡೆಯಲು ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ 10 ರ ನಾಣ್ಯಗಳನ್ನು ಬ್ಯಾನ್ ಮಾಡಲಾಗಿದೆ ಎಂಬ ಸುಳ್ಳು ವದಂತಿಯಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ 10 ರೂಪಾಯಿ ನಾಣ್ಯಗಳನ್ನು ಯಾವುದೇ ಅಂಗಡಿಕಾರರೂ ತೆಗೆದಂತಾಗಿದೆ.
10ರ ನಾಣ್ಯಗಳು ಬ್ಯಾನ್ ಆಗಿವೆ ಎನ್ನುವ ವದಂತಿಯಿಂದಲೇ ನಾಣ್ಯಗಳನ್ನು ಜನರು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಹತ್ತರ ನಾಣ್ಯಗಳಿಗೆ ಬೆಲೆಯಿಲ್ಲದಂತಾಗಿದೆ. ಅದರಲ್ಲಿಯೂ ಅಂಗಡಿಕಾರರು, ವ್ಯಾಪಾರಸ್ಥರು, ಬಸ್ ನಿರ್ವಾಹಕರಿಂದ 10 ರೂಪಾಯಿ ನಾಣ್ಯ ಜನ ಪಡೆಯದ ಕಾರಣ ಕಾಲಕ್ರಮೇಣ ಅವರು ಕೂಡ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಅಲ್ಲದೆ ಅದೇಷ್ಟೋ ಜನರು 10 ರೂಪಾಯಿ ನಾಣ್ಯ ಮರೆತೇ ಬಿಟ್ಟಿದ್ದಾರೆ. ಆದರೆ ಹಲವರ ಮನೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ 10 ರೂಪಾಯಿ ನಾಣ್ಯಗಳ ಸಂಗ್ರಹ ಇದೆ. ಸರ್ಕಾರ ಬ್ಯಾನ್ ಮಾಡದಿದ್ದರೂ ಚಲಾವಣೆ ಮಾಡಲಾಗದ ಕಾರಣ ಮನೆಯಲ್ಲಿಯೇ ಕೊಳೆಯುವಂತಾಗಿದೆ ಎಂದು ಸ್ಥಳೀಯ ಸಂಜೀವ್ ಹೇಳಿದ್ದಾರೆ.

ಇನ್ನು ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಸದ್ಯ 5 ಕೋಟಿಗೂ ಅಧಿಕ 10 ರೂಪಾಯಿ ನಾಣ್ಯಗಳ ಸಂಗ್ರಹವಿದ್ದು, ಚಲಾವಣೆಯಿಲ್ಲದೇ ಬ್ಯಾಂಕ್‌ಗಳಲ್ಲೇ ಕೊಳೆಯುತ್ತಿವೆ. ಹೀಗಾಗಿ ಕೆಲವೊಂದು ಬ್ಯಾಂಕ್‌ಗಳೂ ಸಹ 10ರ ನಾಣ್ಯಗಳನ್ನ ಪಡೆದು ನೋಟುಗಳನ್ನ ನೀಡಲು ನಿರಾಕರಿಸುತ್ತಿವೆ. ಹೀಗಾಗಿ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಜಿಲ್ಲಾ ಲೀಡ್ ಬ್ಯಾಂಕ್, ನಾಣ್ಯಗಳನ್ನ ಪಡೆದುಕೊಳ್ಳಲೇಬೇಕು ಎನ್ನುವ ಸೂಚನೆ ನೀಡಿದೆ.
ಜಿಲ್ಲೆಯ ಪ್ರತಿ ಬ್ಯಾಂಕ್‌ನಲ್ಲಿಯೂ ಜನರಲ್ಲಿ ಜಾಗೃತಿ ಮೂಡಿಸಲು ನಾಣ್ಯ ಮೇಳ ಆಯೋಜನೆ ಮಾಡಲಾಗುತ್ತಿದ್ದು ಜನರ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ ಲೀಡ್ ಬ್ಯಾಂಕ್ ಮ್ಯಾನೇಜರ್ ರೇವತಿ ಸುಧಾಕರ್.

ಒಟ್ಟಾರೆ 2,000 ರೂಪಾಯಿ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ 10 ರೂಪಾಯಿ ನಾಣ್ಯಗಳ ಕತೆಯೇನು ಎಂದು ಜನರು ಪ್ರಶ್ನಿಸುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರು ವ್ಯಾಪಾರಸ್ಥರು, ಅಂಗಡಿಗೆ ಜಾಗೃತಿ ಮೂಡಿಸಿ ಮತ್ತೆ ನಾಣ್ಯಗಳ ಚಲಾವಣೆಗೆ ಕ್ರಮ ಕೈಗೊಳ್ಳಬೇಕಾಗಿದೆ.












Click it and Unblock the Notifications