ಭಟ್ಕಳದ ಆರು ಉಗ್ರರ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿ
ಕಾರವಾರ, ಜೂನ್.27: ಭಾರತ ಸೇರಿದಂತೆ ಜಗತ್ತಿನ ವಿವಿಧೆಡೆ 2007ರಿಂದ ನಡೆಯುತ್ತಿರುವ ಹಲವು ಉಗ್ರರ ಕೃತ್ಯಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಸರು ಪದೇ ಪದೇ ತಳಕು ಹಾಕಿಕೊಳ್ಳುತ್ತಿದ್ದು, ಇದೀಗ ಮತ್ತೆ ಭಟ್ಕಳದ ಆರು ಮಂದಿ ಉಗ್ರರಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಯಾಗುವ ಮೂಲಕ ಭಟ್ಕಳ ಮತ್ತೆ ಸುದ್ದಿಯಲ್ಲಿದೆ.
ಇತ್ತೀಚಿಗೆ ಕೇಂದ್ರ ಗೃಹ ಸಚಿವಾಲಯದ ಇಂಟರ್ಪೋಲ್ ವಿಭಾಗ ರಾಜ್ಯದ 16 ಮಂದಿಯ ವಿರುದ್ಧ ಹೊರಡಿಸಿರುವ ರೆಡ್ಕಾರ್ನರ್ ನೋಟಿಸ್ ನಲ್ಲಿ 12 ಉಗ್ರರು ರಾಜ್ಯದ ಕರಾವಳಿ ಭಾಗದವರಾಗಿದ್ದಾರೆ. ಇವರಲ್ಲಿ 6 ಮಂದಿ ಭಟ್ಕಳದವರು ಎಂಬ ಗಂಭೀರ ವಿಚಾರವನ್ನೂ ಇಲಾಖೆ ಸ್ಪಷ್ಟಪಡಿಸಿದೆ.
ಹೌದು, ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ರಾಜ್ಯದ 16 ಮಂದಿ ಉಗ್ರರು ಹೊಂಚು ಹಾಕುತ್ತಿದ್ದಾರೆ ಎಂಬ ಅಘಾತಕಾರಿ ವರದಿಯನ್ನ ಗೃಹ ಸಚಿವಾಲಯ ನೀಡಿದೆ.

ಇವರೆಲ್ಲಾ ಪಾಕಿಸ್ತಾನ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿ ಭಯೋತ್ಪಾದನೆ, ಭೂಗತ ಚಟುವಟಿಕೆ ಸೇರಿದಂತೆ ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿರುವ ಗೃಹ ಸಚಿವಾಲಯ, ಇಂಟರ್ಪೋಲ್ ವಿಭಾಗದಿಂದ 16 ಮಂದಿಯ ವಿರುದ್ಧ ರೆಡ್ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಭಯೋತ್ಪಾದನೆ, ಉಗ್ರ ಕೃತ್ಯಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳುವ ಕಾರ್ಯದಲ್ಲಿ ಅಬ್ದುಲ್ ಖಾದರ್ ಸುಲ್ತಾನ್ ಅರ್ಮಾರ್ ಹಾಗೂ ಸಲೀಂ ಇಷಾಖಿ, ಭಯೋತ್ಪಾದನೆಗೆ ಸಂಚು ರೂಪಿಸುವ, ಯುವಕರ ನೇಮಕ ಮತ್ತು ತರಬೇತಿ ಕಾರ್ಯದಲ್ಲಿ ಮಹಮ್ಮದ್ ಶಫಿ ಅರ್ಮಾರ್.
ಭಯೋತ್ಪಾದನಾ ಚಟುವಟಿಕೆ, ಹಣ ಸಂಗ್ರಹ ಹಾಗೂ ಯುವಕರ ನೇಮಕಾತಿಯಲ್ಲಿ ಹುಸೇನ್ ಹಾರೂನ್ ಮಹಮ್ಮದ್, ಭಯೋತ್ಪಾದನೆ, ಕೊಲೆ ಹಾಗೂ ಸ್ಫೋಟಕಗಳ ಬಳಕೆ ವಿಭಾಗದಲ್ಲಿ ಇಕ್ಬಾಲ್, ಭಯೋತ್ಪಾದನೆ, ಕೊಲೆ, ಸ್ಫೋಟಕ ಮತ್ತು ಮಾರಕಾಸ್ತ್ರಗಳ ಪೂರೈಕೆಯಲ್ಲಿ ಆಫೀ ಜಿಲಾನಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.
ಇವರು ಮೂಲತಃ ಭಟ್ಕಳದವರಾಗಿದ್ದು, ಈ ಆರು ಮಂದಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ.
ಇನ್ನು ದಕ್ಷಿಣ ಕನ್ನಡ ಮೂಲದ ಬಾಲಕೃಷ್ಣ ಶೆಟ್ಟಿ(ವಿಕ್ಕಿ ಶೆಟ್ಟಿ), ಯೋಗೀಶ್, ಕಿನ್ನಿಗೋಳಿಯ ಅಲ್ತಾ ಬಾವಾ, ತೆಕ್ಕಟ್ಟೆಯ ಅಬು ಮೊಹಮ್ಮದ್, ಉಡುಪಿಯ ಮೊಯಿದಿನಬ್ಬ ಬ್ಯಾರಿ, ಯೋಗೇಶ್ ಬಂಗೇರ, ಮಂಡ್ಯದ ಸಯ್ಯದ್ ಆಜಾಜ್ ಪಾಷ, ಶಿವಮೊಗ್ಗದ ಹೆಬ್ಬೆಟ್ಟು ಮಂಜ, ಬೆಂಗಳೂರಿನ ಮೊಹಮ್ಮದ್ ಯಾಹ್ಯಾ, ಹಸನ್ ಲುಕ್ಮನ್ ಶೇಖ್ ಇವರ ವಿರುದ್ಧವೂ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ.












Click it and Unblock the Notifications