ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ ಕ್ಷೇತ್ರದ ಎನ್ ಸಿಪಿ ಅಭ್ಯರ್ಥಿ ಮಾಧವ ನಾಯಕ ಸಂದರ್ಶನ

By ಡಿ.ಪಿ. ನಾಯ್ಕ
|
Google Oneindia Kannada News

ಕಾರವಾರ, ಮೇ 7: ತಮ್ಮ ಸಾಮಾಜಿಕ ಕಾರ್ಯಗಳಿಂದ ಜಿಲ್ಲೆಯಾದ್ಯಂತ ಹೆಸರು ಗಳಿಸಿಕೊಂಡಿರುವ ಜನಶಕ್ತಿ ವೇದಿಕೆಯ ಅಧ್ಯಕ್ಷರೂ ಆಗಿರುವ ಮಾಧವ ನಾಯಕ ಈ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಸಾಮಾಜಿಕ ಕಾರ್ಯಗಳಿಂದ ತಮ್ಮದೇ ಆದ ಬೆಂಬಲಿಗರನ್ನು ಸೃಷ್ಟಿಸಿಕೊಂಡಿದ್ದ ಅವರು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಿಂದ (ಎನ್ ಸಿಪಿ) ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದ ಟಿಕೆಟ್ ಬಯಸಿದ್ದ ಅವರು ಕೊನೆಯದಾಗಿ ಎನ್ ಸಿಪಿ ಅಭ್ಯರ್ಥಿಯಾಗಿ ಬಿ ಫಾರ್ಮ್ ಪಡೆದು ನಾಮಪತ್ರ ಸಲ್ಲಿಸಿದ್ದರು.

ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?

ಅಂದಿನಿಂದ ಕ್ಷೇತ್ರದಾದ್ಯಂತ ಸಂಚರಿಸುತ್ತಿರುವ ಅವರು, ತಮ್ಮ ಪುತ್ರ ಹಾಗೂ ಬೆಂಬಲಿಗರೊಂದಿಗೆ ಅಬ್ಬರದ ಪ್ರಚಾರ ಕೂಡ ನಡೆಸುತ್ತಿದ್ದಾರೆ.

10ನೇ ತರಗತಿ ಓದಿದ್ದರೂ ವೃತ್ತಿಯಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರರಾಗಿರುವ ಮಾಧವ ನಾಯಕರಿಗೆ ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಕಾರವಾರ- ಅಂಕೋಲಾ ಕ್ಷೇತ್ರದ ಪ್ರಬಲ ಸಮುದಾಯವಾದ ಕ್ಷತ್ರಿಯ ಕೋಮಾರಪಂಥಕ್ಕೆ ಸೇರಿದವರಾಗಿದ್ದಾರೆ.

ರಾಜಕೀಯ ಬದಲಾವಣೆಗಾಗಿ 'ಬ್ಯಾಟಿಂಗ್': ಪ್ರಶಾಂತ್ ನಾಯ್ಕ ಸಂದರ್ಶನರಾಜಕೀಯ ಬದಲಾವಣೆಗಾಗಿ 'ಬ್ಯಾಟಿಂಗ್': ಪ್ರಶಾಂತ್ ನಾಯ್ಕ ಸಂದರ್ಶನ

ಚುನಾವಣೆ ಸಮೀಪಿಸುತ್ತಿರುವ ಕೊನೆ ಗಳಿಗೆಯಲ್ಲಿ ಎನ್ ಸಿಪಿಯ 'ಗಡಿಯಾರ' ಹಿಡಿದು ಕ್ಷೇತ್ರದ ರಾಜಕೀಯ ದಿಕ್ಕನ್ನು ಬದಲಿಸಲು ಕಾರವಾರ- ಅಂಕೋಲಾ ಕ್ಷೇತ್ರದ ಪ್ರಬಲ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳುತ್ತಿರುವ ಮಾಧವ ನಾಯಕ ಅವರೊಂದಿಗೆ 'ಒನ್ ಇಂಡಿಯಾ ಕನ್ನಡ' ನಡೆಸಿದ ಸಂದರ್ಶನ ಇಲ್ಲಿದೆ..

 ಮನವಿಗೆ ಸ್ಪಂದಿಸಿಲ್ಲ

ಮನವಿಗೆ ಸ್ಪಂದಿಸಿಲ್ಲ

ಈ ಹಿಂದೆ ಅನೇಕರು ಈ ಕ್ಷೇತ್ರದಲ್ಲಿ ಶಾಸಕರಾಗಿ ಹೋಗಿದ್ದಾರೆ. ಅಧಿಕಾರ ಪಡೆದ ಎಲ್ಲ ಶಾಸಕರಿಗೂ ಕ್ಷೇತ್ರದ ಬಹು ವರ್ಷದ ಬೇಡಿಕೆಯಾಗಿರುವ ಉದ್ಯೋಗ ಸೃಷ್ಟಿ ಮಾಡುವಂತೆ ಒತ್ತಾಯಿಸಿದ್ದೇವೆ. ಇಲ್ಲಿ ವಿದ್ಯಾವಂತ ಯುವ ಸಮೂಹವಿದೆ. ಆದರೆ, ಅವರ ವಿದ್ಯೆಗೆ ತಕ್ಕಂಥ ಉದ್ಯೋಗ ನೀಡುವ ಕಂಪೆನಿಗಳು, ಕಾರ್ಖಾನೆಗಳು ಇಲ್ಲಿಗೆ ಬಂದಿಲ್ಲ. ಸ್ಥಾಪನೆಯಾಗಿಲ್ಲ.

ಶಾಸಕರಿಗೆ ಮಾಡಿದ ಒತ್ತಾಯಗಳು, ಸಲ್ಲಿಸಿದ ಮನವಿಗಳು ಪ್ರಯೋಜನಕ್ಕೆ ಬಂದಿಲ್ಲ ಎನ್ನುತ್ತಾರೆ ಮಾಧವ ನಾಯಕ.

 ರಾಜಕೀಯ ಪ್ರವೇಶದ ಹಿನ್ನೆಲೆ

ರಾಜಕೀಯ ಪ್ರವೇಶದ ಹಿನ್ನೆಲೆ

ರಾಜಕೀಯದಲ್ಲಿ ನನಗೆ ಆಸಕ್ತಿ ಇರಲಿಲ್ಲ. 8- 10 ವರ್ಷಗಳ ಹಿಂದೆ ಒಂದು ಸಲ ಸಮಾಜವಾದಿ ಪಕ್ಷ ಸೇರುವ ಯೋಚನೆ ಬಂದಿತ್ತು. ಆಗ ಬಂಗಾರಪ್ಪ ಅವರನ್ನು ಶಿವಮೊಗ್ಗದಲ್ಲಿ ಭೇಟಿ ಮಾಡಿದ್ದೆ. ಆದರೆ, ಪಕ್ಷ ಸೇರ್ಪಡೆಯಾಗಲಿಲ್ಲ. ರಾಜಕೀಯದಲ್ಲಿ ಹೊಲಸು ಇದೆ ಎಂಬುದು ಕಾಲಕ್ರಮೇಣ ಮನವರಿಕೆಯಾಯ್ತು.

ಹಾಗಾಗಿ ಇಷ್ಟು ವರ್ಷ ಅದರಲ್ಲಿ ನೇರವಾಗಿ ಭಾಗವಹಿಸಲಿಲ್ಲ. ಮೂರು ಚುನಾವಣೆಗಳಲ್ಲಿ ನಾನು ಬೇರೆಯವರನ್ನು ಬೆಂಬಲಿಸಿದೆ. ಆದರೆ, ನಾನು ಬೆಂಬಲಿಸಿದವರು ಮಾತಿಗೆ ತಪ್ಪಿದರು. ಇದರಿಂದ ಪಶ್ಚಾತ್ತಾಪಪಟ್ಟು ದೇವಸ್ಥಾನದ ಎದುರು ಬೂಟು ಪಾಲಿಶ್ ಮಾಡುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡೆ.

ಈ ಕ್ಷೇತ್ರಕ್ಕೆ ಅಗತ್ಯವಾದ ಶಿಕ್ಷಣ, ಆರೋಗ್ಯ ಸೌಕರ್ಯವೂ ಸಿಕ್ಕಿಲ್ಲ. ಉದ್ಯೋಗ ಸೃಷ್ಟಿಸುವ ಬದಲು ಜನಪ್ರತಿನಿಧಿಗಳೇ ಉದ್ಯೋಗಪತಿಗಳಾಗುತ್ತಿದ್ದಾರೆ. ಈ ಅವ್ಯವಸ್ಥೆಗಳನ್ನು ಮಟ್ಟ ಹಾಕಲೇಬೇಕಿದೆ. ಜನರ ಸಮಸ್ಯೆಗಳನ್ನು, ಕಷ್ಟ, ನೋವುಗಳನ್ನು ಅರಿತಿರುವಂಥ ನಾಯಕರು ಕ್ಷೇತ್ರಕ್ಕೆ ಬೇಕಿದೆ.

ಹೀಗಾಗಿ ನನ್ನ ಹೋರಾಟಗಳನ್ನು ಗಮನಿಸುತ್ತಿದ್ದ ನನ್ನ ಗುರುಗಳು ರಾಜಕೀಯ ಪ್ರವೇಶ ಮಾಡುವಂತೆ ನನಗೆ ಉತ್ತೇಜಿಸಿದರು. ಇದರಿಂದಾಗಿ ರಾಜಕೀಯಕ್ಕೆ ಬರಲು ಇಚ್ಛಿಸಿದೆ. ಬೆಂಬಲಿಗರ ಬಳಿ ನನ್ನ ಇಚ್ಛೆಯನ್ನು ವ್ಯಕ್ತಪಡಿಸಿ, ಅವರ ಅಭಿಪ್ರಾಯವನ್ನೂ ಸಂಗ್ರಹಿಸಿದೆ.

ಬಹಳ ಕ್ರಮಬದ್ಧವಾಗಿ ಯೋಚಿಸಿ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ತಮ್ಮ ರಾಜಕೀಯ ಪ್ರವೇಶದ ಹಿನ್ನೆಲೆಯನ್ನ ವಿವರಿಸಿದರು.

 ಕನಿಷ್ಠ ಫಲವಾದರೂ ಸಿಗುತ್ತೆ

ಕನಿಷ್ಠ ಫಲವಾದರೂ ಸಿಗುತ್ತೆ

ಸತ್ಯ, ಪ್ರಾಮಾಣಿಕತೆ, ಜನರು ಇಟ್ಟಿರುವ ವಿಶ್ವಾಸ, ಅವರು ನೀಡುತ್ತಿರುವ ಸಹಕಾರವೇ ನನ್ನ ಶಕ್ತಿ. ಜನರಿಗೆ ಬದಲಾವಣೆ ಬೇಕಾಗಿದೆ. ಪ್ರತಿ ಬಾರಿಯೂ ಇರುವ ಮೂವರಲ್ಲಿ ಉತ್ತಮರ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇರುತ್ತಿತ್ತು. ಆದರೆ, ಈ ಬಾರಿ ಹಾಗಿಲ್ಲ. ಕ್ಷೇತ್ರದ ಜನತೆಗೆ ಆಯ್ಕೆಯ ಅವಕಾಶವಿದೆ.

ಚುನಾವಣೆಗಾಗಿ ದುಡ್ಡು ಖರ್ಚು ಮಾಡುವವರ ಎದುರು ನಾನು ಹೆದರಿ ಮನೆಯಲ್ಲೇ ಕುಳಿತರೆ ಪ್ರಯೋಜನವಿರುವುದಿಲ್ಲ. ಈ ಬಾರಿ ಪ್ರಯತ್ನ ಪಟ್ಟರೆ ಕನಿಷ್ಠ ಫಲವಾದರೂ ಸಿಗುತ್ತದೆ ಎಂಬ ನಂಬಿಕೆ ನನ್ನಲ್ಲಿದೆ.

 ಎನ್ ಸಿಪಿಯಿಂದ ಟಿಕೆಟ್ ಸಿಕ್ಕಿದ್ದು ಹೀಗೆ...

ಎನ್ ಸಿಪಿಯಿಂದ ಟಿಕೆಟ್ ಸಿಕ್ಕಿದ್ದು ಹೀಗೆ...

ನನಗೆ ಸ್ಪರ್ಧಿಸಲು ರಾಷ್ಟ್ರೀಯ ಪಕ್ಷವೇ ಬೇಕಿತ್ತು. ಹೀಗಾಗಿ ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದೆ. ಆದರೆ, ಅದು ಫಲ ನೀಡಲಿಲ್ಲ. ಅದರ ಬಳಿಕ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನನ್ನನ್ನ ಮಾತುಕತೆಗೆ ಕರೆದಿದ್ದರು. ನಾನು ಹಿಂದೆಲ್ಲ ಅವರ ವಿರುದ್ಧವೇ ಹೋರಾಟ ಮಾಡಿದವನು. ನನಗೆ ಬಿಜೆಪಿ ಟಿಕೆಟ್ ಕೊಡಿ ಎಂದು ಅವರನ್ನು ಕೇಳಲು ನನ್ನ ನೈತಿಕತೆ ಒಪ್ಪಲಿಲ್ಲ.

ಪಕ್ಷ ಸೇರುವಂತೆ ಅವರು ನನಗೆ ಆಹ್ವಾನ ನೀಡಿದರು. ಪಕ್ಷಕ್ಕೆ ಬನ್ನಿ ಎಂದು ಮೂಗಿಗೆ ತುಪ್ಪ ಸವರುವ ಕೆಲಸವನ್ನು ಅವರು ಮಾಡುತ್ತಿರುವುದು ನನಗೆ ಗೊತ್ತಿರುವ ವಿಷಯವಾಗಿತ್ತು. ಹಾಗಾಗಿ ನಾನು ಬಿಜೆಪಿ ಸೇರಬೇಕು ಎಂದರೆ ಟಿಕೆಟ್ ಖಚಿತಪಡಿಸಿ ಎಂದು ಖಡಾಖಂಡಿತವಾಗಿ ಅವರಿಗೆ ಹೇಳಿದೆ. ಆದರೆ ನಾನಾಗಿಯೇ ಅವರ ಬಳಿ ಟಿಕೆಟ್ ಕೇಳಿರಲಿಲ್ಲ.

ಪಕ್ಷೇತರನಾದರೆ ಮತಯಾಚನೆಗೆ ಕಾರ್ಯಕರ್ತರು ಇರುವುದಿಲ್ಲ. ನನಗೆ ಚಿಹ್ನೆ ಸಿಗುವುದು ತಡವಾಗುತ್ತದೆ. ಇದು ಪ್ರಚಾರಕ್ಕೆ ತೊಡಕಾಗುತ್ತದೆ ಎಂದು ಆಲೋಚಿಸಿ, ಯಾವುದಾದರು ಉತ್ತಮ ರಾಷ್ಟ್ರೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಚಿಂತಿಸಿದೆ. ರಾಷ್ಟ್ರೀಯ ಪಕ್ಷಗಳ ಚಿಹ್ನೆ ಕೂಡ ಜನರಿಗೆ ಹೆಚ್ಚಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಹೀಗಾಗಿ ಎನ್ ಸಿಪಿಯಿಂದ ಟಿಕೆಟ್ ಪಡೆದೆ ಎನ್ನುತ್ತಾರೆ.

ಕ್ಷೇತ್ರದಲ್ಲಿ ಶರದ್ ಪವಾರ್ ಅವರ ಅಭಿಮಾನಿಗಳು ಸಾಕಷ್ಟಿದ್ದಾರೆ. ಜತೆಗೆ, ಅವರು ತಮ್ಮ ಪಕ್ಷದಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಬಿಡುಗಡೆ ಮಾಡಿರುವ ಜನಾನುರಾಗಿ ಯೋಜನೆಗಳು ನನಗೆ ಎನ್ ಸಿಪಿಯಿಂದ ಟಿಕೆಟ್ ಪಡೆದುಕೊಳ್ಳಲು ಪ್ರೇರೇಪಿಸಿತು. ಅದರಂತೆ ಎನ್ ಸಿಪಿಯಿಂದ ಟಿಕೆಟ್ ಪಡೆದೆ ಎಂದು ಟಿಕೆಟ್ ಗಾಗಿ ನಡೆಸಿದ ಕೆಲವು ಕಸರತ್ತುಗಳನ್ನು ವಿವರಿಸಿದರು.

 ಜನರನ್ನು ತಲುಪಿದ್ದೇನೆ

ಜನರನ್ನು ತಲುಪಿದ್ದೇನೆ

ಕ್ಷೇತ್ರದ ಜನರಿಗೆ ನಾನು ಚಿರಪರಿಚಿತ. ನನ್ನನ್ನು ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆಯಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಲು ಬಂದವನು. ಜನರ ಕಷ್ಟನಷ್ಟ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತೇನೆ. ಹಣ ಕೊಟ್ಟು ಬೆಂಬಲಿಗರನ್ನು ನಾನು ಸೃಷ್ಟಿಮಾಡಿಕೊಂಡಿಲ್ಲ.

ಪ್ರಮುಖ ಮೂರು ಪಕ್ಷಗಳ ಮೂವರು ಅಭ್ಯರ್ಥಿಗಳು ಮೂರು ತಿಂಗಳಿನಿಂದ ಪ್ರಚಾರ ಮಾಡುತ್ತಿದ್ದಾರೆ. ನನಗೆ ಪ್ರಾಮಾಣಿಕ ಬೆಂಬಲಿಗರಿದ್ದಾರೆ. ಆದ್ದರಿಂದ ಉಳಿದೆಲ್ಲವರಿಗಿಂತ ಮುಂದೆ ಇದ್ದೇನೆ. ಈಗಾಗಲೇ ಇದ್ದ ಹಾಗೂ ಇರುವ ಕೆಲವೇ ದಿನಗಳಲ್ಲಿ ಕ್ಷೇತ್ರದ ಜನರನ್ನು ತಲುಪಿದ್ದೇನೆ ಹಾಗೂ ತಲುಪುತ್ತೇನೆ ಎನ್ನುತ್ತಾರೆ.

 ಪಕ್ಷ ನೋಡಿ ನಾಯಕನ ಆಯ್ಕೆ ಬೇಡ

ಪಕ್ಷ ನೋಡಿ ನಾಯಕನ ಆಯ್ಕೆ ಬೇಡ

ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತ, ರಾಜಕೀಯ ಅಹಂಕಾರವಿಲ್ಲದ, ಸಾಮಾನ್ಯ ಜನರ ಜತೆಯಲ್ಲಿ ಬಾಳುವ ಜನರನ್ನು ಕ್ಷೇತ್ರದ ಜನತೆ ಆರಿಸಬೇಕಿದೆ. ಪಕ್ಷ ನೋಡಿ ನಾಯಕನನ್ನು ಆರಿಸುವುದು ಬೇಡ. ಜನಾನುರಾಗಿ ನಾಯಕನನ್ನು ಆಯ್ಕೆ ಮಾಡುವ ಮೂಲಕ ಜನರ ಸೇವೆಗೊಂದು ಅವಕಾಶ ಕಲ್ಪಿಸಿಕೊಡಬೇಕಿದೆ.

ಈ ಹಿಂದಿನಂತೆ ಅಸಹಾಯಕರ, ದೀನ ದಲಿತರ, ಅಮಾಯಕರ ಧ್ವನಿಯಾಗಿ ನನ್ನ ಕಾರ್ಯಗಳು ನಿರಂತರವಾಗಿರುತ್ತದೆ. ಆದರೆ, ಈ ನಿರಂತರ ಹೋರಾಟಕ್ಕೆ ರಾಜಕೀಯ ಶಕ್ತಿ ತುಂಬಲು ಜನತೆ ಮತ ನೀಡಬೇಕಿದೆ. ಎಂದು ಮಾಧವ ನಾಯಕರು ತಮ್ಮ ಕೊನೆಯ ಮಾತುಗಳನ್ನು ಹೇಳುತ್ತಾರೆ.

English summary
Karnataka assembly elections 2018:Social Reformer, President of Janashakthi Vedike, NCP candidate Madhava Nayaka Interview with oneindia. He described how he came to politics. How he join NCP party. and about the next programs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X